ಬೆಂಗಳೂರು: ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಹ ಶೇರ್ ಹೋಲ್ಡರ್ಸ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (BJP-JDS Padayatra) ನೇರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಇಂದು ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಚಿವರು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಈ ಹಗರಣಗಳಲ್ಲಿ ಪಾಲುದಾರರು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಧೈರ್ಯ ಅವರಿಗಿಲ್ಲವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Pralhad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್‌ನಿಂದ ರಾಜಕೀಯ; ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಹೈಕಮಾಂಡ್‌ನ ಈ ಇಬ್ಬರೂ ನಾಯಕರು ಭ್ರಷ್ಟಾಚಾರ ಪ್ರಕರಣದಲ್ಲಿ ಬೇಲ್ ಪಡೆದು ಹೊರಗಿದ್ದಾರೆ. ಈಗ ರಾಜ್ಯದಲ್ಲಿ ವಾಲ್ಮೀಕಿ, ಮುಡಾ ಹಗರಣದಲ್ಲಿ ಜೈಲಿಗೆ ಹೋಗುವವರನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಮನೆಗೆ ಹೋಗೋ ಕಾಲ ಬಂದಿದೆ
ವಾಲ್ಮೀಕಿ ನಿಗಮ ಮತ್ತು ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇರ ಪಾತ್ರವಿದೆ. ಹಾಗಾಗಿ ಇದರ ವಿರುದ್ಧ ಕಾನೂನು ಮತ್ತು ರಾಜಕೀಯವಾಗಿ ಹೋರಾಟ ಮಾಡಿ ಈ ಭ್ರಷ್ಟಾಚಾರ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡುತ್ತೇವೆ ಎಂದು ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದರು.
ರಿಡು- 80 ಲಕ್ಷ ವಾಚ್ ರೂವಾರಿ ಯಾರು?
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತೆತ್ತಿದರೆ ತಮ್ಮ ಜೀವನ ತೆರೆದ ಪುಸ್ತಕ, ತಾವು ಶುದ್ಧ ಹಸ್ತದ ರಾಜಕಾರಣ ಎನ್ನುತ್ತಾರೆ ಆದರೆ, 2013-18 ರವರೆಗೆ ರಿಡು ಮಾಡಿದ್ಯಾರು? 80 ಲಕ್ಷ ರು. ವಾಚ್ ಕಟ್ಟಿ ವಿವಾದವಾಗುತ್ತಲೇ ವಾಪಸ್ ಕೊಟ್ಟಿದ್ಯಾರು? ಎಂದು ಪ್ರಶ್ನಿಸಿದ ಪ್ರಲ್ಹಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಅಂದೂ ಭ್ರಷ್ಟಾಚಾರಿ, ಇಂದೂ ಭ್ರಷ್ಟಾಚಾರಿಯೇ ಎಂದು ಆರೋಪಿಸಿದರು.
ಭ್ರಷ್ಟ ಕಾಂಗ್ರೆಸ್ ಕಿತ್ತೊಗೆಯಿರಿ
ದೇಶದಲ್ಲೇ ಆಗಲಿ, ರಾಜ್ಯದಲ್ಲೇ ಆಗಲಿ ಕಾಂಗ್ರೆಸ್ ಆಡಳಿತ ಇದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರ ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿ ಬಂದಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ಸಚಿವರು ತಿಳಿಸಿದರು.