ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಅವರ ಹೆಸರು ಹಾಗೂ ಸೀಲಿನೊಂದಿಗೆ ಬಿಜೆಪಿಯ 100 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ಆರೋಪಿಸಿದರು.
ಈ ಕುರಿತು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಇದು ಕಾಂಗ್ರೆಸ್ ದಿವಾಳಿತನಕ್ಕೆ ಸಾಕ್ಷಿ. ಇದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ. ಅವರು ಹೀಗೆ ಮಾಡಿಲ್ಲವಾದರೆ ದೂರು ಕೊಡಬೇಕಿತ್ತು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯನ್ನು ಮಣಿಸಲು ಸಾಧ್ಯವಾಗದೆ ಈ ರೀತಿ ಹತಾಶರಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ನಮ್ಮಲ್ಲಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಘನತೆಗೆ ಈ ಮೂಲಕ ಅವರು ಧಕ್ಕೆ ತಂದುಕೊಳ್ಳುತ್ತಿದ್ದಾರೆ.
ಇದು ಚುನಾವಣೆ ಪ್ರಾರಂಭದ ಹಂತ. ಚುನಾವಣೆಯ ಅಂತಿಮ ಕಾಲದಲ್ಲಿ ಇನ್ನೂ ಯಾವ್ಯಾವ ತಳಮಟ್ಟಕ್ಕೆ ಇಳಿಯಬಹುದು? ಕಾಂಗ್ರೆಸ್ ಈ ರೀತಿ ಮಾಡಿದ್ದರೆ ಇದರ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ ಬಹಿರಂಗ ಕ್ಷಮೆ ಯಾಚಿಸಬೇಕು; ಇಲ್ಲವಾದರೆ ಸಂಬಂಧಿತರಿಗೆ ದೂರು ಕೊಡಬೇಕು ಎಂದು ಆಗ್ರಹಿಸಿದರು.
ದೂರಿನ ಪ್ರತಿಯನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ, ಕೇಂದ್ರ ಚುನಾವಣಾ ಆಯುಕ್ತರಿಗೂ ಕಳುಹಿಸಿ ಕೊಡಲಾಗುವುದು. ಕಾಂಗ್ರೆಸ್ ಪಕ್ಷದ ಈ ತೃತೀಯ ದರ್ಜೆಯ ರಾಜಕಾರಣವನ್ನು ಬಿಜೆಪಿ ಖಂಡಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: Inside Story: ನಕಲಿ ಅಭ್ಯರ್ಥಿ ಪಟ್ಟಿಗೆ ಬಿಜೆಪಿ ಸಭೆ ಗಲಿಬಿಲಿ: ಘಟಾನುಘಟಿಗಳಿಗೇ ಶಾಕ್ ನೀಡಿದ ಕಿಲಾಡಿಗಳು