ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಇದೇ ವೇಳೇ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಕುತೂಹಲ ಕೆರಳಿಸಿದೆ.
ಪ್ರತಿಪಕ್ಷ ನಾಯಕ ಸ್ಥಾನದ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನೂ ಬದಲಿಸಲು ಬಿಜೆಪಿ ಮುಂದಾಗಿದೆ. ಹಾಗಾಗಿ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಕಾಂಬಿನೇಷನ್‌ನಲ್ಲಿ ಆಯ್ಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಕುರಿತು ಮಾತನಾಡಲು ನವದೆಹಲಿಗೆ ತೆರಳಿದ್ದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ.
ನವದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬಂದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಬಿ.ಎಸ್. ಯಡಿಯೂರಪ್ಪ, ನಾನು ಅಮಿತ್ ಷಾ ಹಾಗೂ ರಾಷ್ಟ್ರೀಯ ಅದ್ಯಕ್ಷ ಜೆ.ಪಿ. ನಡ್ಡಾ ಜೊತೆ ಸುಧಿರ್ಘ ಚರ್ಚೆ ಮಾಡಿದ್ದೇನೆ. ವಿರೋಧ ಪಕ್ಷದ ನಾಯಕ ಆಯ್ಕೆಯನ್ನು ಅಮಿತ್ ಶಾ ಮಂಗಳವಾರ ಮಾಡಲಿದ್ದಾರೆ. ಎಲ್ಲವೂ ತಿರ್ಮಾನವಾಗಲಿದೆ ಎಂದರು.
ದೆಹಲಿಯಿಂದ ಈಗಾಗಲೇ ಇಬ್ಬರು ವೀಕ್ಷಕರು ಬಂದಿದ್ದಾರೆ. ಇವತ್ತು ಎಲ್ಲ ಶಾಸಕರ ಜೊತೆ ಚರ್ಚೆ ಮಾಡಿ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಅಂತಿಮವಾಗಿ ಸೋಮವಾರ ರಾತ್ರಿ ಅಥವಾ ಮಂಗಳವಾರ ವಿಪಕ್ಷ ನಾಯಕನ ಆಯ್ಕೆ ತೀರ್ಮಾನ ಮಾಡುತ್ತಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ, ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಆ ರೀತಿ ಏನೂ ಇಲ್ಲ, ನಾಳೆ ದಿನ ಎಲ್ಲವೂ ಸರಿಹೋಗುತ್ತದೆ. ಆ ರೀತಿಯ ಯಾವುದೇ ಗೊಂದಲಗಳು ಇಲ್ಲ ಎಂದರು. ರಾಜ್ಯಪಾಲರ ಭಾಷಣದಲ್ಲಿ ಅಕ್ಕಿ ಬಗ್ಗೆ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ಗೊತ್ತಿಲ್ಲ, ತಿಳಿದು ಮಾತಾಡುತ್ತೇನೆ ಎಂದರು.
ಯತ್ನಾಳ್- ಅಶ್ವತ್ಥನಾರಾಯಣ ಮಾತುಕತೆ
ಒಂದೆಡೆ ರಾಜ್ಯ ಬಿಜೆಪಿ ಅಧಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು ನಡೆಯುತ್ತಿರುವ ಸಂದರ್ಭದಲ್ಲೇ ವಿಧಾನಸೌಧದಲ್ಲಿ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಇಬ್ಬರೂ ನಾಯಕರು ರಾಜ್ಯ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರ ಹುದ್ದೆಗೆ ಚರ್ಚೆಯಾಗುತ್ತಿರುವ ಹೆಸರುಗಳ ಪಟ್ಟಿಯಲ್ಲಿದ್ದಾರೆ ಎನ್ನುವುದು ಗಮನಾರ್ಹ.
ಬಸನಗೌಡ ಪಾಟೀಲ್ ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಒಳಪಂಗಡಕ್ಕೆ ಸೇರಿದ್ದು, ಡಾ. ಸಿ.ಎನ್. ಅಶ್ವತ್ಥನಾರಾಯಣ ಒಕ್ಕಲಿಗ ಸಮುದಾಯದವರು. ಈ ಇಬ್ಬರೂ ನಾಯಕರು ವಿಧಾನಸಭೆಯಲ್ಲಿ ಸದನ ನಡೆಯುತ್ತಿರುವಾಗಲೇ ಒಟ್ಟಿಗೆ ಕುಳಿತು ಮಾತನಾಡಿದ್ದಾರೆ. ಈ ಮಾತುಕತೆಯು ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಇಬ್ಬರನ್ನೇ ಎರಡೂ ಹುದ್ದೆಗಳಿಗೆ ನೇಮಕ ಮಾಡುವ ಸೂಚನೆ ಲಭಿಸಿದ್ದು, ಅದರ ಕುರಿತೇ ಚರ್ಚಿಸಿರಬೇಕು ಎನ್ನಲಾಗುತ್ತದೆ.
ಇದನ್ನೂ ಓದಿ: BJP Karnataka: ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು: ಫಟಾಫಟ್ ಉತ್ತರ ಕೊಟ್ಟು ಹೊರಬಂದ ಯತ್ನಾಳ್
ನಂತರ ಮಾಧ್ಯಮಗಳ ಜತೆಗೆ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಇದು ಜನಪರವಾದ ಸರ್ಕಾರ ಅಲ್ಲ. ಸರ್ಕಾರದಲ್ಲಿ ವರ್ಗಾವಣೆ ಗಂಧ ಹರಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ. ಸರ್ವಿಸ್‌ಗೆ ಪೇಮೆಂಟ್ ಸರ್ವಿಸ್ ಶುರುವಾಗಿದೆ ಎಂದರು.
ವಿಪಕ್ಷ ನಾಯಕ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ ಇದೆ. ಅಲ್ಲಿ ಮಾತನಾಡುತ್ತೇನೆ ಎಂದಷ್ಟೇ ಹೇಳಿ ಹೊರಟರು.
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಯಾರೇ ಪ್ರತಿಪಕ್ಷ ನಾಯಕನಾದರೂ ನಾನು ಸ್ವಾಗತ ಮಾಡುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ. ನಾನು ರೇಸ್ ನಲ್ಲಿ ಇದ್ದೀನಿ ಎಂದು ನೀವೇ ತೋರಿಸಿದ್ದೀರಿ. ಮತ್ತೆ ನಮ್ಮ ಮಧ್ಯೆ ಬೆಂಕಿ ಹಚ್ಚಬೇಡಿ. ಈಶ್ವರಪ್ಪ ಹೇಳಿಕೆಯನ್ನ ತಿರುಚಿ ತೋರಿಸಿದ್ದೀರಿ ಎಂದು ಮಾಧ್ಯಮಗಳ ವಿರುದ್ಧವೇ ಆರೋಪ ಮಾಡಿದರು.