Site icon Vistara News

BJP Karnataka: ಜುಲೈ 4ರಂದು ಒಳಗೂ ಹೊರಗೂ ಹೋರಾಟ: ಸಭೆ ನಂತರ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ

BS Yediyurappa

ಬೆಂಗಳೂರು: ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಬಳಿಯಲ್ಲಿ ಜುಲೈ 4ರಂದು ನಮ್ಮ ನೂರಾರು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ದಿನ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮನೆಮನೆಗೆ ಹೋಗಿ ಸಿದ್ದರಾಮಯ್ಯ, ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡಿನ ಅಂಶಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಬೇಕು. ಜೂನ್‌ 4ರಂದು ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸದನದ ಒಳಗೂ ಹೋರಾಟ ಮಾಡಲಿದ್ದಾರೆ. ಈ ಕುರಿತು ಪಕ್ಷದ ಮುಖಂಡರ ಸಭೆಯಲ್ಲಿ ಚರ್ಚಿಸಿದ್ದಾಗಿ ವಿವರಿಸಿದರು.

ಅವರು ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಬೇಕು; ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ. ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1500 ರೂ. ಕೊಡಬೇಕು, 200 ಯೂನಿಟ್ ಕರೆಂಟ್ ಕೊಡಲೇಬೇಕು, 80 ಯೂನಿಟ್ ಎಂಬ ಕಂಡಿಷನ್ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಅವರೇ ಭರವಸೆ ನೀಡಿದಂತೆ ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. 4ರಂದು ಸದನದ ಒಳಗೆ ಮತ್ತು ಹೊರಗಡೆ ನಾನು ಮತ್ತು ಪಕ್ಷದ ಪ್ರಮುಖರು ಧರಣಿ ನಡೆಸಲಿದ್ದೇವೆ ಎಂದು ವಿವರಿಸಿದರು.

ಇದನ್ನೂ ಓದಿ: BJP Karnataka: ರೇಣುಕಾಚಾರ್ಯ ಉಚ್ಚಾಟನೆ?: ʼಕತ್ತರಿʼ ಹೇಳಿಕೆಗೆ ಕಚೇರಿಯಿಂದಲೇ ಬಂತು ನೋಟಿಸ್‌

ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ತಿಳಿಸಿದ ಅವರು, ಯಾರು ಆ ರೀತಿ ಮಾತನಾಡಿದ್ದಾರೋ ಅವರ ಜೊತೆ ಚರ್ಚಿಸಿ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಸೂಕ್ತ ಕ್ರಮವನ್ನು ಕೈಗೊಳ್ಳುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

Exit mobile version