Site icon Vistara News

BJP Karnataka : ಅತೃಪ್ತಿ ಶಮನಕ್ಕೆ ಮುಂದಾದ ಬಿ.ವೈ. ವಿಜಯೇಂದ್ರ; ಜಾರಕಿಹೊಳಿ ಜತೆ ಮಾತುಕತೆ

BY Vijayendra meets Ramesh Jarkiholi

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಈಗ ಪಕ್ಷದೊಳಗಿನ (BJP Karnataka) ಆಂತರಿಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಒಬ್ಬೊಬ್ಬರನ್ನೇ ಭೇಟಿ ಮಾಡುವ ಕಾರ್ಯದತ್ತ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರನ್ನು ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ತಾಸುಗಳಷ್ಟು ಕಾಲ ಮಾತನಾಡಿದ್ದಾರೆ. ಈ ವೇಳೆ ಪಕ್ಷದೊಳಗಿನ ತಮ್ಮ ಸಮಸ್ಯೆಗಳ ಬಗ್ಗೆ ರಮೇಶ್‌ ಜಾರಕಿಹೊಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಈ ಹಿಂದೆ ರಮೇಶ್ ಜಾರಕಿಹೊಳಿ ಹಲವು ಬಾರಿ ಅಸಮಾಧಾನವನ್ನು ಹೊರ ಹಾಕುತ್ತಾ ಬಂದಿದ್ದರು. ಅವರ ಮುಂದಿನ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜತೆಗೆ ಕರೆದೊಯ್ಯುವುದಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ನರೇಂದ್ರ ಮೋದಿ ಅವರು ಮತೆತ ಪ್ರಧಾನಿ ಆಗಬೇಕು, ಪಕ್ಷದಲ್ಲಿ ಸಹಕಾರ ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೂ ಕೆಲವು ಸಣ್ಣಪುಟ್ಟ ಅಸಮಾಧಾನ ಇದ್ವು, ಅದರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.

ಹಿರಿಯರು ಏನೇ ಮಾತನಾಡಿದರೂ ಆಶೀರ್ವಾದ ಎಂದುಕೊಳ್ಳುವೆ

ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ವಿ. ಸೋಮಣ್ಣ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಪಕ್ಷದ ಹಿರಿಯರು ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದು ಅಂದುಕೊಳ್ಳುತ್ತೇನೆ. ಅವರೆಲ್ಲರನ್ನೂ ನಾನು ಜತೆಗೇ ಕರೆದುಕೊಂಡು ಹೋಗುತ್ತೇನೆ. ರಮೇಶ್ ಜಾರಕಿಹೊಳಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವರಿಷ್ಠರು ನಿಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇದರ ಬಗ್ಗೆ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಸೇರಿ ನರೇಂದ್ರ ಮೋದಿ ಕೈ‌ ಬಲಪಡಿಸಬೇಕು ಅಂದಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತೇನೆ

ಪಕ್ಷದ ಹಿರಿಯರು ಏನೇ ಹೇಳಿಕೆ ನೀಡಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತೇನೆ. ನಾನು ಮಾತನಾಡಬಾರದು, ಕೆಲಸ ಮಾತನಾಡಬೇಕು. ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತೇನೆ. ರಾಷ್ಟ್ರೀಯ ನಾಯಕರು ಜವಾಬ್ದಾರಿ ನೀಡಿದ್ದಾರೆ. ಕೆಲವರ ಅಭಿಪ್ರಾಯ ಬೇರೆ ಇರುತ್ತದೆ. ಎಲ್ಲವನ್ನೂ ಸರಿ‌ ಮಾಡಿಕೊಂಡು ಹೋಗುತ್ತೇನೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಇದನ್ನೂ ಓದಿ: Karnataka Weather: ಗುರುವಾರ, ಶುಕ್ರವಾರ ಭಾರಿ ಮಳೆ; ಬೆಂಗಳೂರಲ್ಲಿ ಸ್ವಲ್ಪ ಮಳೆ, ಅಲ್ಪ ಚಳಿ!

ನನ್ನನ್ನು ವಿರೋಧಿಸಿದರೆ ಮೋದಿಯನ್ನು ವಿರೋಧ ಮಾಡಿದಂತೆ; ಸ್ಪಷ್ಟೀಕರಣ ನೀಡಿದ ಬಿವೈವಿ

ನನ್ನನ್ನು ವಿರೋಧಿಸಿದರೆ ನರೇಂದ್ರ ಮೋದಿ ಅವರನ್ನು ವಿರೋಧಿಸಿದಂತೆ ಎಂಬ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಬಿ.ವೈ. ವಿಜಯೇಂದ್ರ, ನನ್ನನ್ನು ಆಯ್ಕೆ ಮಾಡಿರುವುದು ಬಿ.ಎಸ್.‌ ಯಡಿಯೂರಪ್ಪ ಅವರಲ್ಲ. ನನ್ನನ್ನು ವರಿಷ್ಠರು, ಎಲ್ಲ ಹಿರಿಯರೂ ಆಯ್ಕೆ ಮಾಡಿದ್ದಾರೆ. ವರಿಷ್ಠರು ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ, ದೇಶದ ಹಿತದಿಂದ ನಾವೆಲ್ಲೂ ಒಂದಾಗಿ ಹೋಗಬೇಕು. ಈ ಉದ್ದೇಶದಿಂದ ನಾನು ಹಾಗೆ ಹೇಳಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು.

Exit mobile version