ನವದೆಹಲಿ: ವಯಸ್ಸಿನ ಕಾರಣಕ್ಕೆ ಬಿಜೆಪಿ ಹಿರಿಯ ನಾಯಕರುಗಳು ಕೇಂದ್ರ ನಾಯಕರ ಸೂಚನೆ ಮೇರೆಗೆ ನಿವೃತ್ತಿ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಈಶ್ವರಪ್ಪ ಅವರು ನಿವೃತ್ತಿ ಘೋಷಣೆ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಾವು ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗುತ್ತಿರುವುದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದರು. ಆದರೆ ನಿವೃತ್ತಿ ಆಗುವಂತೆ ನೀಡಿದ ಸೂಚನೆಯನ್ನು ತಿರಸ್ಕರಿಸಿರುವದಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದರು. ನಾನು ಏಕೆ ನಿವೃತ್ತಿ ಆಗಬೇಕು ಎಂದು ಕಾರಣ ಕೊಡಿ ಎಂದಿದ್ದರು.
ಈ ಕುರಿತು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಈಶ್ವರಪ್ಪ ಪತ್ರ ಬರೆದಿದ್ದಾರೆ. ಅನೇಕ ತಿಂಗಳಿಂದ ಅವರು ಖಾಸಗಿಯಾಗಿ ಹೇಳುತ್ತಲೇ ಇದ್ದರು. ನಿಮ್ಮ ಅನುಭವ ನಮಗೆ ಇರಬೇಕು ಎಂದು ಹೇಳುತ್ತಿದ್ದೆವು. ಆದರೆ ಅವರು ಇದೀಗ ಅಂತಿಮ ತೀರ್ಮಾನ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಹೊಸತನ ತರುತ್ತಿದ್ದೇವೆ. 92 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಇದೇ ಆ ಪಕ್ಷಕ್ಕೂ ನಮಗೂ ಇರುವ ವ್ಯತ್ಯಾಸ. ಗೃಹಸಚಿವರು ನವದೆಹಲಿಗೆ ಆಗಮಿಸಿದ ನಂತರ ಪಟ್ಟಿ ಬಿಡುಗಡೆ ಆಗುತ್ತದೆ. ಎರಡು ಹಂತದಲ್ಲಿ ಪಟ್ಟಿ ಬಿಡುಗಡೆ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: KS Eshwarappa : ಈಶ್ವರಪ್ಪ ಮನೆ ಮುಂದೆ ಹೈ ಡ್ರಾಮಾ, ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಬೆಂಬಲಿಗರ ಆಗ್ರಹ