Site icon Vistara News

BJP Karnataka: ಪ್ರತಾಪ್‌ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!

#image_title

ಬೆಂಗಳೂರು/ಮೈಸೂರು: ಬಿಜೆಪಿಯ ಅತಿರಥ ಮಹಾರಥರು ಅನೇಕರು ಸಿದ್ದರಾಮಯ್ಯ ಅವರೊಂದಿಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡಿದ್ದಾರೆ ಎಂಬ ಕುರಿತು ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿರುವ ವಿಚಾರ ಇದೀಗ ರಾಜ್ಯ ಬಿಜೆಪಿಯಲ್ಲಿ ಗಲಿಬಿಲಿ ಸೃಷ್ಟಿಸಿದೆ.

ಮೈಸೂರಿನಲ್ಲಿ ಹೇಳಿಕೆ ನೀಡಿದ್ದ ಪ್ರತಾಪ್‌ ಸಿಂಹ, ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ, ಇದಕ್ಕೆ ಶ್ವೇತಪತ್ರ ಹೊರಡಿಸಿ. ರಾಜ್ಯದ ಯಾವ ಸಿಎಂ ಎಷ್ಟು ಸಾಲ ಮಾಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಮಾತು ಮುಂದುವರಿಸಿದ ಪ್ರತಾಪ್‌ ಸಿಂಹ, ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ಮೇಲಿನ‌ 40 ಪರ್ಸೆಂಟ್ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ? ಕಾಂಟ್ರಾಕ್ಟರ್‌ ಕೆಂಪಣ್ಣನ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಊರಿಗೆಲ್ಲ ತಮಟೆ ಹೊಡೆದರು. ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ದ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಎಂದು ಹೇಳುತ್ತಿದ್ದರು. ಆದರೆ ನಮ್ಮವರು(ಬಿಜೆಪಿ ನಾಯಕರು) ಅಬ್ಬರಿಸುತ್ತಿದ್ದರು ಎನ್ನುವುದು ಬಿಟ್ಟರೆ ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ.

ಸಿದ್ದರಾಮಯ್ಯ ಕೂಡ ಬಿಜೆಪಿ ಮೇಲೆ ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಅಂತಾ ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೇ, ನಿಮಗೆ ಬಿಜೆಪಿಯ ಕೆಲ ನಾಯಕರ ಜತೆ ಹೊಂದಾಣಿಕೆ ಇಲ್ಲ ಅಂದರೆ ನೀವು ಮಾಡ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ. ನಿಮ್ಮ ವಿರುದ್ದ ಅವರು ಅವರ ವಿರುದ್ದ ನೀವು ಸಮಯ ಬಂದಾಗ ಮಾತ್ರ ಟೀಕೆ ಮಾಡಿ ಕೊಳ್ತಿರಾ? ನನಗೆ ತುರಿಕೆ ಆದಾಗ ನೀನು ನನ್ನ ಬೆನ್ನು ಕೆರಿ, ನಿನಗೆ ತುರಿಕೆ ಆದಾಗ ನಾನು ಬೆನ್ನು ಕೆರಿತೀನಿ ಅನ್ನೋ ರೀತಿ ನಿಮ್ಮ ಒಪ್ಪಂದವೇ?

ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಕೆಲವರು ಶಾಮೀಲು ಆಗಿರಬಹುದು. ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಶಾಮೀಲು ಆಗಿಲ್ಲ. ಆಗುವುದು ಇಲ್ಲ. ಚುನಾವಣೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಸೋತಿರಬಹುದು. ನಮ್ಮ ಕಾರ್ಯಕರ್ತರು ಸೋತಿಲ್ಲ. ವಿದ್ಯುತ್ ಬಿಲ್‌ ಅನ್ನು ಯದ್ವಾತದ್ವ ಏರಿಕೆ ಮಾಡಿ ಈ ಮೂಲಕ ಒಂದಷ್ಟು ಜನರ ದರೋಡೆ ಮಾಡಿ ಇನ್ನೊಬ್ಬರಿಗೆ ಕೊಡುವ ನಿಮ್ಮ ನಾಟಕದ ವಿರುದ್ದ ಜನಾಂದೋಲನ ಮಾಡುತ್ತೇವೆ ಎಂದರು.

ಜಾರಿಕೊಂಡ ಹಿರಿಯ ನಾಯಕರು
ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ‌ ಎನ್ನುವ ಮೂಲಕ ಜಾರಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ರು, ಅದನ್ನೆಲ್ಲ ಈಗ ಸಾಬೀತು ಮಾಡಿ ತೋರಿಸಲಿ‌ ಎಂದರು. ಈಗ ಪ್ರತಾಪ್‌ ಸಿಂಹ ಅವರ ಮಾತಿಗೆ ಪ್ರತಿಕ್ರಿಯಿಸಲು ನರಾಕರಿಸಿರುವ ಸಿ.ಟಿ. ರವಿ ಅವರೇ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿ, ಪ್ರತಾಪ್ ಸಿಂಹ ಏನು ಹೇಳಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆ ನೋಡಿ ಪ್ರತಿಕ್ರಿಯೆ ಕೊಡುತ್ತೇನೆ ಎಂದಷ್ಟೆ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರು ಹೇಳಿದ್ದೇನು?
ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಕಾಂಗ್ರೆಸ್‌ ಸರ್ಕಾರದ ಸಚಿವರುಗಳು ಪ್ರತಿಕ್ರಿಯೆ ನೀಡಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಪ್ರತಿಕ್ರಿಯಿಸಿ, ಯಾರೆಲ್ಲ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೋ ಅವರ ಹೆಸರು ಘೋಷಣೆ ಮಾಡಿ. ಹೊಂದಾಣಿಕೆ ಮಾಡಿಕೊಂಡಿದ್ದರೆ ನಮಗೂ ಗೊತ್ತಾಗುತ್ತದೆ. ಅವರ ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಪ್ರತಾಪ್ ಸಹ ಮಾತಿಗೆ ಗಾಂಭೀರ್ಯತೆ ಇದೆಯಾ? ತೂಕ ಇದೆಯಾ ? ಮಾನ್ಯತೆ ಇದೆಯಾ? ಅರ್ಥ ಇದೆಯಾ? ಪ್ರತಾಪ್‌ಸಿಂಹ ಅವರ ಅರ್ಥರಹಿತ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. 40% ಕಮಿಷನ್ ವಿಚಾರದಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ. ಎಲ್ಲಿ ದುರ್ಬಳಕೆ ಆಗಿದೆ, ಎಲ್ಲಿ ಕಾನೂನು ಉಲ್ಲಂಘನೆ ಆಗಿದೆ, ಎಲ್ಲಿ ವ್ಯಾಪಕ ದೂರುಗಳಿವೆ ಸರ್ಕಾರ ಗಮನ ಹರಿಸಲಿದೆ. ತನಿಖೆಗೆ ಮೀನಾಮೇಷ ಎಣಿಸುವ ಪ್ರಶ್ನೆಯೇ ಇಲ್ಲ. ಯಾರ‍್ಯಾರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬುದನ್ನು ಪ್ರತಾಪ್‌ಸಿಂಹ ಅವರೇ ಹೇಳಬೇಕು. ಅದು ಅವರಿಗೆ ಗೊತ್ತಿರಬೇಕು, ನನಗೆ ಗೊತ್ತಿಲ್ಲ ಎಂದಿದ್ದಾರೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹರಿಗೆ ಒಳ ಒಪ್ಪಂದದ ಬಗ್ಗೆ ಮಾಹಿತಿ ಇದ್ರೆ ಸ್ಪಷ್ಟ ಪಡಿಸಲಿ. ಸುಮ್ಮನೆ ಮಾತನಾಡೋದು ಬೇಡ. ಹಿಂದೆ ತಪ್ಪಾಗಿದ್ರೆ ಸರಿಪಡಿಸುವ ಕೆಲಸ ಮಾಡ್ತೀವಿ. ಲೋಪದೋಷಗಳಿದ್ದರೆ ಸರಿ ಮಾಡಿ ತನಿಖೆ ಮಾಡಿಸುತ್ತೇವೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುವ ಘಟನೆ ನಡೆದಿದ್ದರೆ ಸಂಬಂಧಪಟ್ಟ ಇಲಾಖೆ ಗಮನ ಹರಿಸುತ್ತದೆ. ದ್ವೇಷದ ರಾಜಕಾರಣ ಮಾಡಲ್ಲ. ಯಾವ ರೀತಿ ತನಿಖೆ ಆಗಬೇಕು ಅಂತ ನಾವು ಚಿಂತನೆ ಮಾಡ್ತೀವಿ ಎಂದಿದ್ದಾರೆ.

ಇದನ್ನೂ ಓದಿ: BJP Karnataka: ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ: ಖುಲ್ಲಂ ಖುಲ್ಲಾ ಒಪ್ಪಿಕೊಂಡ ರಾಷ್ಟ್ರೀಯ ಮುಖಂಡ!

Exit mobile version