Site icon Vistara News

BJP Karnataka: ಘರ್‌ ವಾಪ್ಸಿಗೆ ಬಿಜೆಪಿ ತಯಾರಿ‌, ಮಾಜಿ ಸಿಎಂಗೆ ಗಾಳ; ಸುಳಿವು ನೀಡಿದ ಸುನಿಲ್‌ ಕುಮಾರ್

Jagadish Shetter

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗೆಲ್ಲುವ ದೃಷ್ಟಿಯಿಂದ ಬಿಜೆಪಿಯಲ್ಲಿ (BJP Karnataka) ಸಾಕಷ್ಟು ಕಾರ್ಯತಂತ್ರಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಯಾರು ಯಾರು ಪಕ್ಷದಿಂದ ದೂರವಾಗಿದ್ದಾರೋ ಅವರನ್ನು ವಾಪಸ್‌ ಕರೆ ತರುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಕರೆ ತಂದು ಒಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಅವರ ಜತೆ ಹೈಕಮಾಂಡ್ (BJP High Command) ನಾಯಕರು ಮಾತನಾಡುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ (V Sunil Kumar) ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಲೋಕಸಭಾ ಚುನಾವಣೆಯನ್ನು ಗೆಲ್ಲುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಕ್ಷ ತೊರೆದ ನಾಯಕರನ್ನು ವಾಪಸ್‌ ಕರೆತರುವ ಕೆಲಸ ಆಗುತ್ತಿದೆ. ಇನ್ನು ಜಗದೀಶ್‌ ಶೆಟ್ಟರ್‌ ಅವರ ಜತೆ ಬಿಜೆಪಿ ಹೈಕಮಾಂಡ್‌ ಮಾತನಾಡಲಿದೆ ಎಂದು ಹೇಳಿದರು.

ಗ್ರಾಮ ಚಲೋ ಅಭಿಯಾನ

ದೇಶ ಮತ್ತು ಕರ್ನಾಟಕದಲ್ಲಿ ಗ್ರಾಮ ಚಲೋ ಎಂಬ ಅಭಿಯಾನವನ್ನು ಆರಂಭ ಮಾಡುತ್ತಿದ್ದೇವೆ. 20 ಸಾವಿರ ಗ್ರಾಮಗಳಿಗೆ ಮತ್ತು 10 ಸಾವಿರ ನಗರದ ಬೂತ್‌ಗಳಿಗೆ ನಾವು ಕಾರ್ಯಕರ್ತರನ್ನು ನಿಯೋಜನೆ ಮಾಡುತ್ತಿದ್ದೇವೆ. ಫೆಬ್ರವರಿ 8ರಂದು ಅಭಿಯಾನ ಆರಂಭವಾಗಲಿದೆ. ಏಕಕಾಲಕ್ಕೆ 40 ಸಾವಿರ ಕಾರ್ಯಕರ್ತರನ್ನು ನಿಯೋಜನೆ ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಗ್ರಾಮ ಚಲೋ ಅಭಿಯಾನದ ಮೂಲಕ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಿಳಿಸುತ್ತದೆ. ರಾಜ್ಯ ಸರ್ಕಾರ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. 28 ಕ್ಷೇತ್ರಗಳಲ್ಲಿ ಗೆಲ್ಲಲು ಇದು ಒಂದು ಅಡಿಪಾಯ ಆಗುತ್ತದೆ ಎಂದು ವಿ. ಸುನಿಲ್‌ ಕುಮಾರ್‌ ಹೇಳಿದರು.

ಹಿಂದುಗಳನ್ನು ಬಿಟ್ಟು ಯಾರೂ ರಾಜಕೀಯ ಮಾಡಲು‌ ಸಾಧ್ಯವಿಲ್ಲ

ಕಾಂಗ್ರೆಸ್ಸಿಗರು ರಾಮಮಂದಿರಕ್ಕೆ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಸುನಿಲ್‌ ಕುಮಾರ್‌, ರಾಮನ ಪ್ರತಿಷ್ಠಾನ ಆದ ಬಳಿಕ ರಾಮ ರಾಜ್ಯದ ಪರಿಕಲ್ಪನೆ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಅವರಲ್ಲಿ ಕೂಡ ಬದಲಾವಣೆ ಆರಂಭವಾಗಿದೆ. ರಾಮನನ್ನು, ಹಿಂದುಗಳನ್ನು ಬಿಟ್ಟು ಯಾರೂ ರಾಜಕೀಯ ಮಾಡಲು‌ ಸಾಧ್ಯವಿಲ್ಲ. ಮಂದಿರ ಮುಖಾಂತರ ಭಾರತ ವಿಶ್ವಗುರು ಆಗಬೇಕು ಎಂದು ಹೇಳಿದರು.

ಚಿತ್ರದುರ್ಗದಲ್ಲಿ ನಡೆಯುಲಿರುವ ಹಿಂದುಳಿದ ಸಮಾವೇಶಕ್ಕೆ ನನಗೆ ಆಹ್ವಾನ ಕೊಟ್ಟಿಲ್ಲ. ಆಹ್ವಾನ ಕೊಟ್ಟರೆ ನಾನು ಹೋಗುತ್ತೇನೆ ಎಂದು ವಿ. ಸುನಿಲ್‌ ಕುಮಾರ್‌ ಹೇಳಿದರು.

ಇದನ್ನೂ ಓದಿ: Karnataka Weather: ರಾಜ್ಯದ ಅಲ್ಲಲ್ಲಿ ಭಯಂಕರ ಚಳಿ; ಕನಿಷ್ಠ ತಾಪಮಾನ ಇನ್ನೂ 4 ಡಿಗ್ರಿ ಸೆಲ್ಸಿಯಸ್‌ ಕುಸಿತ?

ಬೆಂಕಿ ಹಾಕಿದವರ ಮೇಲೆ ಇನ್ನಷ್ಟು ಕ್ರಮ ಆಗಬೇಕು

ಮಂಗಳೂರಿನ ಸಮಾವೇಶದಲ್ಲಿ ಮುಸ್ಲಿಂ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಸುನೀಲ್ ಕುಮಾರ್, ಬೇಡಿಕೆಗಳನ್ನು ಎಲ್ಲರೂ ಕೇಳ್ತಾರೆ. ಸರ್ಕಾರ ಯಾವ ರೀತಿ ಬಜೆಟ್ ಮಂಡಿಸುತ್ತದೆ ಎಂಬುದನ್ನು ನೋಡೋಣ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಇಡಿ ದೇಶ ನೋಡಿದೆ. ಉದ್ರಿಕ್ತ ಗುಂಪು ಹೇಗೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿತ್ತು? ಯಾವ ರೀತಿಯಲ್ಲಿ ಧ್ವಂಸ ಮಾಡಲಾಗಿತ್ತು? ಎಂಬುದನ್ನು ಜನ ಗಮನಿಸಿದ್ದಾರೆ. ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿದ್ದು ಜಗಜ್ಜಾಹೀರಾಗಿದೆ. ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವರು, ಪೊಲೀಸ್ ಠಾಣೆ ಬೆಂಕಿ ಹಾಕಿದವರು ಇವರಿಗೆ ಅಮಾಯಕರು. ಈ ರೀತಿಯಲ್ಲಿ ಸರ್ಕಾರಕ್ಕೆ ಅನಿಸಿದ್ದರೆ ಇದಕ್ಕಿಂತ ದುರಂತ ಯಾವುದೂ ಇಲ್ಲ. ಬೆಂಕಿ ಹಾಕಿದವರ ಮೇಲೆ ಇನ್ನಷ್ಟು ಕ್ರಮ ಆಗಬೇಕು. ಕೋಮುವಾದದ ನೆಪ ಇಟ್ಟುಕೊಂಡು ಅಮಾಯಕರು ಅಂತ ಕರೆಯುವುದು ಸರಿಯಲ್ಲ ಎಂದು ಹೇಳಿದರು.

Exit mobile version