Site icon Vistara News

BJP Karnataka: ಬಿಜೆಪಿ ಪಟ್ಟಿ ಘೋಷಣೆಗೂ ಮುನ್ನವೇ ನಾಮಪತ್ರಕ್ಕೆ ಸಿದ್ಧತೆ: ಬಂಡಾಯ ಶಮನಕ್ಕೆ ಸಿದ್ಧವಾಯಿತು ಪಡೆ

bjp karnataka getting ready for nomination process even before tickets announced

#image_title

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಘೋಷಣೆ ಮಾಡಬೇಕಿದೆ. ಭಾನುವಾರ ದಿನಪೂರ್ತಿ ನಡೆದ ಸಭೆಗಳ ನಂತರ ಸೋಮವಾರವೂ ಸರಣಿ ಸಭೆಗಳು ಮುಂದವರಿದಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಆದರೆ ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ನೋಡಿಕೊಳ್ಳಲು ಕಾನೂನು ತಜ್ಞರ ಬಿಜೆಪಿ ತಂಡ ಈಗಾಗಲೆ ಸಿದ್ಧವಾಗಿದೆ. ಇವರು ನಾಮಪತ್ರ ಸಲ್ಲಿಕೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಏಪ್ರಿಲ್‌ 13ರಿಂದ 20ರ ಅವಧಿಯಲ್ಲಿ ಎಲ್ಲರೂ ನಾಮಪತ್ರವನ್ನು ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ.

ಈಗಾಗಲೆ ತಂಡವು ತಲಾ ಮೂರು ಸೆಟ್‌ ನಾಮಪತ್ರಗಳನ್ನು ಸಿದ್ಧ ಮಾಡಿಟ್ಟುಕೊಂಡಿದೆ. ಕ್ಷೇತ್ರದ ವಿವರಗಳನ್ನು ಭರ್ತಿ ಮಾಡಿಕೊಂಡಾಗಿದೆ. ಅಭ್ಯರ್ಥಿ ಯಾರು ಎನ್ನುವುದು ಘೋಷಣೆ ಆದ ಕೂಡಲೇ ವಿವರಗಳನ್ನು ಭರ್ತಿ ಮಾಡಲಾಗುತ್ತದೆ. ಯಾರ್ಯಾರ ಹೆಸರು ದೆಹಲಿಗೆ ಹೋಗಿದೆಯೋ ಅವರೆಲ್ಲರಿಗೂ ಅಫಿಡವಿಟ್‌ ಸಿದ್ಧಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಘೋಷಣೆ ಆದ ಕೂಡಲೆ ಅಫಿಡವಿಟ್‌ ಅಳವಡಿಸಿ ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಕೆಗೆ ಎಲ್ಲ ಸಿದ್ಧತೆ ಮಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಂಡಾಯ ಶಮನ ಮಾಡುವವರಾರು?

ಚುನಾವಣೆಗೆ ಟಿಕೆಟ್‌ ಘೋಷಣೆ ಮಾಡುವುದು ಒಂದು ಭಾಗವಾದರೆ, ಟಿಕೆಟ್‌ ಘೋಷಣೆ ನಂತರ ಏಳುವ ಬಂಡಾವನ್ನು ಶಮನ ಮಾಡುವುದು ಮತ್ತೊಂದು ಸವಾಲಿನ ಕೆಲಸ. ಒಂದು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಿದರೆ ಉಳಿದಂತೆ ಆ ಕ್ಷೇತ್ರದಲ್ಲಿ ಯಾರ್ಯಾರು ಬಂಡಾಯ ಏಳಬಹುದು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳಲಾಗಿದೆ.

ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗುವ ಸುಮಾರು 18 ಕ್ಷೇತ್ರಗಳಲ್ಲಿ ತೀವ್ರ ಬಂಡಾಯ ಏಳುವ ಮುನ್ಸೂಚನೆ ಸಿಕ್ಕಿದೆ. ಇವರಲ್ಲಿ ಕೆಲವರು ಪ್ರಬಲರಾಗಿದ್ದು, ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ತೆರಳುವ ಸಾಧ್ಯತೆಯೂ ಇದೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ರವಿಕುಮಾರ್‌, ಸಿ.ಟಿ. ರವಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್‌ ಅವರುಗಳನ್ನು ಬಂಡಾಯ ಶಮನಕ್ಕೆ ತಂಡವಾಗಿ ರೂಪಿಸಲಾಗಿದೆ.

ಬಂಡಾಯ ಏಳುವವರನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಬೇಕು. ಅವರು ಪಕ್ಷದಲ್ಲೇ ಉಳಿಯುವಂತೆ ಮಾಡಬೇಕು. ಹಾಗೊಂದು ವೇಳೆ ಮಾತು ಕೇಳದೇ ಇದ್ದರೆ ಅದರಿಂದ ಆಗುವ ಡ್ಯಾಮೇಜ್‌ ಕಂಟ್ರೋಲ್‌ ಮಾಡುವುದು ಹೇಗೆ ಎಂದು ರೂಪರೇಷೆ ಸಿದ್ಧಪಡಿಸಬೇಕು. ಕೆಲವರನ್ನು ನೇರವಾಗಿ ಅಮಿತ್‌ ಶಾ ಹಾಗೂ ಬಿ.ಎಲ್‌. ಸಂತೋಷ್‌ ಅವರೇ ಮಾತನಾಡಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗಷ್ಟೆ ಆಂತರಿಕ ಚುನಾವಣೆ ನಡೆಸಿದ್ದೂ ಇದೇ ಕಾರಣಕ್ಕೆ. ಕಾರ್ಯಕರ್ತರಲ್ಲಿ ಯಾರ ಪರ ಒಲವಿದೆ ಎನ್ನುವುದನ್ನು ತಿಳಿದುಕೊಳ್ಳಲಾಗಿದೆ. ಹಾಗೊಂದು ವೇಳೆ ಅವರು ತಿಳಿಸಿರುವ ಅಭ್ಯರ್ಥಿಯ ಹೊರತಾಗಿ ಬೇರೆಯವರಿಗೆ ಟಿಕೆಟ್‌ ನೀಡಬೇಕೆಂದು ತೀರ್ಮಾನವಾದರೆ, ಅಲ್ಲಿ ಕಾರ್ಯಕರ್ತರ ಮನವೊಲಿಸಲು ಯಾರನ್ನು ಕಳಿಸಬೇಕು ಎಂಬಲ್ಲಿಯವರೆಗೆ ತೀರ್ಮಾನವಾಗಿದೆ.

ರಾಜ್ಯದ ಸುಮಾರು 20 ಕ್ಷೇತ್ರಗಳಲ್ಲಿ ಈ ರೀತಿ ಕಾರ್ಯಕರ್ತರನ್ನು ಸಮಾಧಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕಾರ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಿ.ಟಿ. ರವಿ ಮುಂತಾದವರನ್ನು ನಿಯೋಜನೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: BJP Karnataka: ಚುನಾವಣೆಗೆ ಮುನ್ನ ಇನ್ನೂ 20 ಬಾರಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ: ನಳಿನ್‌ ಕುಮಾರ್ ಕಟೀಲ್‌

Exit mobile version