ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಆಡಳಿತ ವೈಫಲ್ಯ, ಜನ ವಿರೋಧಿ ನೀತಿಗೆ ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಬಿಜೆಪಿ (BJP Karnataka) ಇಂದು ಪ್ರತಿಭಟನೆಗೆ ಕರೆ ನೀಡಿದೆ.
ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಧರಣಿಯಲ್ಲಿ ಬಿಜೆಪಿ ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಸುಮಾರು 15ರಿಂದ 20 ಸಾವಿರ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆ ಬಳಿಕ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ.
ಎಲ್ಲ ಕಾಮಗಾರಿಗಳಲ್ಲಿ ಕಮಿಷನ್, ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವುದು, ಬರಗಾಲ ಘೋಷಣೆಗೆ ಹಿಂದೇಟು ಹಾಕುತ್ತಿರುವುದು ಮುಂತಾದ ಆರೋಪಗಳೊಂದಿಗೆ ಸರ್ಕಾರದ ವಿರುದ್ಧ ಸಮರಕ್ಕೆ ಕೇಸರಿ ಪಡೆ ಸಜ್ಜಾಗಿದೆ. ಈ ಬಾರಿ ಮಳೆ ಬಾರದೇ ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಆರ್‌ಎಸ್ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಅವಧಿಯ ಕಾಮಗಾರಿಗಳನ್ನು ಕಾಂಗ್ರೆಸ್ ತಡೆದಿದೆ ಎಂದು ಸರ್ಕಾರದ ಮೇಲೆ ಆರೋಪ ಮಾಡಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆ ಬಾರದೆ ದನ ಕರುಗಳಿಗೆ ಕುಡಿಯುವ ನೀರಿಲ್ಲ, ಮೇವೂ ಇಲ್ಲದ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರದಿಂದ ಯಾವ ಕ್ರಮ ಇಲ್ಲ. ವಿದ್ಯುತ್ ಬಿಲ್ ದುಬಾರಿಯಾಗಿದ್ದರಿಂದ ಮಧ್ಯಮ ವರ್ಗದವರು ಪರಿತಪಿಸುತ್ತಿದ್ದಾರೆ. ಹಾಲಿನ ದರವನ್ನೂ ಹೆಚ್ಚಿಸಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಅದನ್ನೂ ರದ್ದು ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕಾಂಗ್ರೆಸ್ 100 ದಿನಗಳ ಆಡಳಿತದಲ್ಲಿ ಐದು ಗ್ಯಾರಂಟಿಗಳನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬೆಂಗಳೂರಿನ ಎಲ್ಲಾ ಸಂಸದರು ಹಾಗೂ ಶಾಸಕರು ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ: Cabinet Meeting : ಸಮವಸ್ತ್ರ ಪೂರೈಸಿದ್ದ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ; ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ