Site icon Vistara News

BJP Karnataka: ನಿಮ್ಮ ತಪ್ಪಿನಿಂದ ನಾವು ಬಲಿಯಾದೆವು: ಬಿಜೆಪಿ ಅವಲೋಕನ ಸಭೆಯಲ್ಲಿ ನಾಯಕರ ವಿರುದ್ಧ ಅಸಮಾಧಾನ ಸ್ಫೋಟ

BJP Meeting 1

#image_title

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮೊದಲ ಬಾರಿಗೆ ನಡೆಸಿದ ಅವಲೋಕನ ಸಭೆಯಲ್ಲಿ, ಪರಾಜಿತ ಅಭ್ಯರ್ಥಿಗಳು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಶಾಸಕರಿಗೆ ಬೆಳಗ್ಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಂಜೆ ಅವಲೋಕನ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆಗಳು ನಡೆದವು.

ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಿ.ಸಿ. ಪಾಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಜಿ ವಿ ರಾಜೇಶ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಉಪಸ್ಥಿತರಿದ್ದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗೆದ್ದ ಶಾಸಕರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ ಬಗ್ಗೆ, ಸಾಧನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚರ್ಚೆ ಆಯಿತು. ಪಕ್ಷ ಸಂಘಟನೆ, ಕಾಂಗ್ರೆಸ್ ವಿರುದ್ಧ ಹೋರಾಟ ಬಗ್ಗೆ ಚರ್ಚೆ ನಡೆದಿದೆ. ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಇನ್ನೂ ಏನೇನು ಮಾಡಬಹುದಿತ್ತು ಎಂಬ ಚರ್ಚೆ ನಡೆದಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತದೆ ಎಂದರು. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಅರುಣ್‌ ಸಿಂಗ್‌ ಅವರು ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ತಿಳಿಸಿದರು.

#image_title

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, 16ನೇ ವಿಧಾನಸಭೆಗೆ ಆಯ್ಕೆಯಾದ ಚುನಾವಣೆಗೆ ಆಯ್ಕೆಯಾದ ಶಾಸಕರ ಜೊತೆ ಸಭೆ ಮಾಡಲಾಗಿದೆ. 22 ನೂತನವಾಗಿ ಮೊದಲ ಬಾರಿಗೆ ಆಯ್ಕೆಯಾಗಿರೋ ಸದಸ್ಯರ ಪರಿಚಯದೊಂದಿಗೆ ಎಲ್ಲ ಶಾಸಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯ್ತು. ಉತ್ತಮ ಕಾರ್ಯಕ್ಕೆ ಸರ್ಕಾರಕ್ಕೆ ಬೆಂಬಲ ಕೊಡುವುದು, ಜನವಿರೋಧಿ ನಿರ್ಧಾರ ತೆಗೆದುಕೊಂಡ್ರೆ ಸದನದ ಒಳಗೆ, ಹೊರಗೆ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.

1985ರಲ್ಲಿ ಹೊರತುಪಡಿಸಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿಲ್ಲ ಅನ್ನೋದು ವಾಸ್ತವಿಕ ವಿಚಾರ. 1994ರಲ್ಲಿ 34ಸ್ಥಾನಕ್ಕೆ ಕುಸಿಯಿತು. ನಂತರ ಕೃಷ್ಣಾ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂತು. ಪ್ರತೀ ಐದು ವರ್ಷಕ್ಕೊಮ್ಮೆ ಬದಲಿಸುವ ಟ್ರೆಂಡ್ ಕರ್ನಾಟಕದಲ್ಲಿ ಕಾಣಬಹುದು. ಇದರ ಹೊರತಾಗಿ 36% ಮತಗಳನ್ನ ಪಡೆದಿದ್ದೇವೆ. ಸ್ಥಾನ ಗಳಿಕೆಯಲ್ಲಿ ಹೊಡತ ಬಿದ್ದಿದೆ. ಗ್ಯಾರಂಟಿ ಕಾರ್ಡ್ ನಂಬಿ ಜನ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ.

ಸೋಲಿಗೆ ಕಾರಣ ಕೂಡ ಹುಡುಕಲಾಗಿದೆ‌, ಬಿಜೆಪಿ ಎದೆಗುಂದುವ ಪಕ್ಷವಲ್ಲ. ಬಿಜೆಪಿ 84ರ ಚುನಾವಣೆಗೆ 2 ಸ್ಥಾನ ಗೆದ್ದಿತ್ತು, ಒಬ್ಬರು ರಾಜೀನಾಮೆ ನೀಡಿದ್ರು, ಆದರೂ ಎದೆಗುಂದಲಿಲ್ಲ. ಯಡಿಯೂರಪ್ಪ ಒಬ್ಬರೇ ಹೋರಾಟ ಮಯನ್ನಡೆಸಿದ್ರು. ಪರಿಣಾಮಕಾರಿ ವಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.

ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕರ ವ್ಯಕ್ತಿಗತ ಅಭಿಪ್ರಾಯ ಸಂಗ್ರಹ ಮಾಡಲಾಗ್ತಿದೆ. ಅರುಣ್‌ ಸಿಂಗ್ ಅವರು ಅಭಿಪ್ರಾಯ ಸಂಗ್ರಹ ಮಾಡ್ತಿದ್ದು, ಹೈಕಮಾಂಡ್ ಜೊತೆ ಚರ್ಚಿಸಿ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ ಎಂದರು.

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಬಂದಿಲ್ಲ. ಕೇಂದ್ರಕ್ಕೆ ಒಂಭತ್ತು ವರ್ಷ ತುಂಬಿದೆ. ಆ ವಿಚಾರ ಮಾತ್ರ ಚರ್ಚೆಯಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಗೊಂದಲ ಬಗೆಹರಿಸಬೇಕು. ನನಗೂ ಫ್ರೀ, ನಿನಗೂ ಫ್ರೀ ಅಂದಿದ್ರು. ಸಿ.ಟಿ ರವಿ ಮನೆಯವರಿಗೂ ಫ್ರೀ ಅಂತ ಹೇಳಿದ್ರು. ಈಗ ಐ.ಟಿ ಕಟ್ಟೋರಿಗಿಲ್ಲ, ಸರ್ಕಾರಿ ನೌಕರರಿಗೆ ಇಲ್ಲ ಅತಿದ್ದಾರೆ. ಎಲ್ಲಾ ಗೊಂದಲ ಬಗೆಹರಿಸಬೇಕು ಎಂದು ಹೇಳಿದರು.

ಸುಧಾಕರ್‌, ಸೋಮಣ್ಣ, ಕಾಗೇರಿ ಗೈರು
ಪರಾಜಿತ ಅಭ್ಯರ್ಥಿಗಳ ಸಭೆ ಸಂಜೆ ನಡೆಯಿತಾದರೂ ಪ್ರಮುಖವಾಗಿ ಡಾ. ಸುಧಾಕರ್‌, ವಿ. ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ ಗೈರಾಗಿದ್ದರು. ಇತರೆ ಪರಾಜಿತ ಅಭ್ಯರ್ಥಿಗಳಾದ ಪರಾಜಿತ ಅಭ್ಯರ್ಥಿಗಳಾದ ಬಿ.ಸಿ ನಾಗೇಶ್, ಎಂಟಿಬಿ ನಾಗರಾಜ್, ಸಿ.ಪಿ‌ಯೋಗೇಶ್ವರ್, ಪ್ರೀತಮ್ ಗೌಡ, ವರ್ತೂರು ಪ್ರಕಾರ, ಮುರುಗೇಶ್ ನಿರಾಣಿ , ನಾರಾಯಣ್ ಗೌಡ, ಬಿ.ಸಿ ಪಾಟೀಲ್, ಜೀವರಾಜ್, ವಿಜಯಶಂಕರ್, ಮಹೇಶ್ ಕುಮಟಹಳ್ಳಿ, ಪಿ.ರಾಜೀವ್, ರಾಜ್ಕುಮಾರ್ ಪಾಟೀಲ್ ತೇಲ್ಕೂರು, ರೂಪಾಲಿ ನಾಯಕ್, ಉಮೇಶ್ ಶೆಟ್ಟಿ, ಪದ್ಮನಾಭ ರೆಡ್ಡಿ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ನಾಗೇಂದ್ರ, ಹಾಲಪ್ಪ ಆಚಾರ್, ತಮ್ಮೇಶ್ ಗೌಡ, ಸಪ್ತಗಿರಿ ಗೌಡ, ಪೂರ್ಣಿಮಾ ಶ್ರೀನಿವಾಸ್ , ಅಪ್ಪಚ್ಚು ರಂಜನ್, ಭಾಸ್ಕರ್ ರಾವ್,ಗೋವಿಂದ ಕಾರಜೋಳ, ಸುನಿಲ್ ನಾಯಕ್, ಹರ್ಷವರ್ಧನ್ ಸಭೆಯಲ್ಲಿ ಭಾಗಿಯಾಗಿದ್ದರು.

ಸಭೆಯಲ್ಲಿ ಪ್ರಾರಂಭದಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದ್ದಾರೆ. ವಿಧಾನಸಭೆ ಸೋಲಿನ ಬಗ್ಗೆ ಯಾರೂ ತಲೆಕೆಡಿಸಿಕೊಳಬೇಡಿ. ಎರಡು ಸ್ಥಾನದಿಂದ ಇಲ್ಲಿಯವರೆಗೆ ಪಕ್ಷ ಕಟ್ಟಿದ್ದೇನೆ. ಸದನದಲ್ಲಿ ಒಮ್ಮೆ ಇಬ್ಬರೇ ಶಾಸಕರಿದ್ವಿ. ವಸಂತಬಂಗೇರ ಪಾರ್ಟಿಯನ್ನು ಬಿಟ್ಟು ಹೋದರು, ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಸೋತ ವಿಚಾರ ಮರೆತು ಬಿಡ ಮುಂದಿನ ಚುನಾವಣೆಗಳಿಗೆ ಪಕ್ಷ ಸಂಘಟಿಸಿ. ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ‌ ಮಾಡಿ. ಮೋದಿ ಯೋಜನೆಯನ್ನು ಮನೆ ಮನೆಗೆ ತಲುಪಿಸಿ. ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

ಆದರೆ ಸೋತ ಅಭ್ಯರ್ಥಿಗಳು ಯಾವ ನಾಯಕನ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಎಂಟಿಬಿ ನಾಗರಾಜ್‌ ಮಾತನಾಡಿ, ಕಾಂಗ್ರೆಸ್‌ನಲ್ಲಿದ್ದಾಗ ಮೂರು ಸಾರಿ ಗೆದ್ದಿದ್ದೆ. ಆದರೆ ಬಿಜೆಪಿಗೆ ಬಂದು ಎರಡು ಸಾರಿಯೂ ಸೋತಿದ್ದೇನೆ. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದ ಎಂಟಿಬಿ ನಾಗರಾಜ್‌, ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಸಿಟ್ಟಾದರು.

ಸುಧಾಕರ್‌ನಿಂದಾಗಿಯೇ ನಾನು ಸೋತಿದ್ದು, ಸುಧಾಕರ್ ತಾವೂ ಸೋತು, ನಮ್ಮನ್ನೂ‌‌ ಸೋಲಿಸಿದರು. ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಎಂದರು. ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು, ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ ಆಯಿತು ಎಂದರು.

ನಾಯಕರ ವಿರುದ್ಧ ಗರಂ
ಅನೇಕ ಶಾಸಕರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವರು ಸರ್ಕಾರ ಇದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ಆಯಿತು. ನಾಯಕರು ಮಾಡಿರುವ ತಪ್ಪಿನಿಂದ ನಾವು ಬಲಿಯಾದೆವು.

ಕಾಂಗ್ರೆಸ್ ನ ಗ್ಯಾರಂಟಿಗಳಿಂದಲೂ ಸೋಲಾಗಿದೆ. ನಮ್ಮ ಪ್ರಣಾಳಿಕೆ ಕಾಂಗ್ರೆಸ್ ನವರಂತೆ ಇರಲಿಲ್ಲ. ನಮ್ಮ ಪ್ರಣಾಳಿಕೆ ಬಿಡುಗಡೆ ಕೂಡ ತಡವಾಯಿತು. ಪ್ರಣಾಳಿಕೆಯಲ್ಲಿ ಜನ ಮುಟ್ಟುವಂತ ಸ್ಕೀಮ್ ಗಳನ್ನು ಮಾಡಬೇಕಿತ್ತು. ಅದನ್ನು ಜನರಿಗೆ ತಿಳಿಸಲು ಅಗತ್ಯ ಕ್ರಮ ವಹಿಸಬೇಕಿತ್ತು. ಆದರೆ ಕಾಂಗ್ರೆಸ್‌ನವರು ಅವರ ಗ್ಯಾರಂಟಿ ಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದರು. ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಗ್ಯಾರಂಟಿದ್ದ ಬಗ್ಗೆ ಜನರು ಕೇಳುತ್ತಿದ್ದರು. ಅವ್ರು 2000 ಕೊಡ್ತಾರೆ, ನೀವು ಕೊಡ್ತೀರಾ ಎಂದು ಪ್ರಶ್ನೆ ಮಾಡಿದ್ರು. ಕಾಂಗ್ರೆಸ್ ನ ಗ್ಯಾರಂಟಿ ಗಳನ್ನು ನಾವು ಸಮರ್ಥವಾಗಿ ಎದುರಿಸಿಲ್ಲ. ಅದಕ್ಕಾಗಿ ನಮಗೂ ಸೋಲು ಆಯಿತು.

ಸ್ಥಳೀಯ ಸಚಿವರು ಬಿಟ್ಟು, ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿದ್ದು ಚುನಾವಣೆ ಸೋಲಿಗೆ ಕಾರಣ ಆಯಿತು. ಸಚಿವರಾಗಿದ್ದಂತವರಿಗೆ ಮೂಲ ಜಿಲ್ಲೆಗಳ ಉಸ್ತುವಾರಿ ಕೊಡಬೇಕಿತ್ತು. ಅದು ಬಿಟ್ಟು ಬೇರೆ ಯಾವುದೋ ಜಿಲ್ಲೆಗೆ ಉಸ್ತುವಾರಿ ನೀಡಿದ್ರಿ. ಅಲ್ಲಿ ಬಂದು ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಿ ಹೋದ್ರೆ ಸಾಕಾ..? ಸ್ಥಳೀಯ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ಆ ಸಚಿವರ ಹಿಡಿತ ಸಾಧ್ಯ ಆಗುತ್ತಾ? ಅಲ್ಲಿ ಸಚಿವರಿಂದಲೂ ಪಕ್ಷ ಸಂಘಟನೆಯೂ ಆಗಿಲ್ಲ, ಅಲ್ಲಿ ಎಲ್ಲೋ ರಾಜ್ಯಗಳಲ್ಲಿ ಈ ರೀತಿ ಮಾಡಿದ್ದಾರೆ ಅಂತ ಅದನ್ನು ನಮ್ಮ ರಾಜ್ಯದಲ್ಲಿ ಮಾಡಿದ್ರೆ ಯಶಸ್ವಿ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Vijayanagara News: ಗೆಲುವಿಗೆ ಎಲ್ಲರೂ ತಂದೆ, ಸೋಲು ಅನಾಥ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು

Exit mobile version