Site icon Vistara News

BJP Karnataka: ನಾನೇ ವಿಪಕ್ಷ ನಾಯಕನಾಗುವೆ ಎಂದ ಯತ್ನಾಳ್‌:‌ ಅಸಾಧ್ಯ ಎಂದ ಸಿದ್ದರಾಮಯ್ಯ

Basanagouda patil yatnal siddaramaiah

ಬೆಂಗಳೂರು: ಚುನಾವಣೆ ಫಲಿತಾಂಶ ಹೊರಬಂದು ತಿಂಗಳು ಕಳೆದರೂ ವಿಧಾನಸಭೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ (BJP Karnataka) ನಡೆಯು ಪದೇಪದೆ ಚರ್ಚೆಗೆ ಬರುತ್ತಲೇ ಇದೆ. ಬುಧವಾರ ವಿಧಾನಸಭೆಯಲ್ಲಿ ಈ ವಿಚಾರ ಮತ್ತೆ ಚರ್ಚೆಗೆ ಬಂದಿತು.

ಪದೇಪದೆ ಅನೇಕ ವಿಚಾರಗಳಲ್ಲಿ ಎದ್ದುನಿಂತು ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ನೀವು ಎಷ್ಟೇ ಬಾರಿ ಎದ್ದು ನಿಂತುಕೊಂಡು ಮಾತನಾಡಿದರೂ ವಿಪಕ್ಷ ನಾಯಕ ಆಗಲ್ಲ ಎಂದರು.

ಇದಕ್ಕೆ ಉತ್ತರಿಸಿದ ಯತ್ನಾಳ್‌, ಹಾಗಾದರೆ ನೀವು ನಮ್ಮವರ ಜತೆ ಅಡ್ಜೆಸ್ಟ್ಮೆಂಟ್ ಆಗಿದ್ದೀರಿ ಅಂತ ಆಯಿತು ಎಂದರು. ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾನು ಯಾವತ್ತೂ ವಿಪಕ್ಷ ನಾಯಕರಾದವರ ಜತೆ ಮಾತನಾಡಿಲ್ಲ. ಮಂತ್ರಿಗಳ ಜತೆ ಸಹ ಮಾತನಾಡಿಲ್ಲ. ಯಾರಾದರೂ ಸಾಬೀತುಪಡಿಸಲಿ ರಾಜಕೀಯ ನಿವೃತ್ತಿ ಆಗ್ತೀನಿ. ನಾನು ಯಾರ ಮನೆಗೂ ಹೋಗಿಲ್ಲ ಎಂದರು.

ಇದನ್ನೂ ಓದಿ: Assembly Session: ವಿಧಾನಸಭೆಯಲ್ಲಿ ಯತ್ನಾಳ್‌-ಡಿಕೆಶಿ ಗುದ್ದಾಟ: ಸಂಧಾನ ಸಭೆಯನ್ನೂ ಬಹಿಷ್ಕರಿಸಿದ ಬಿಜೆಪಿ

ಮನೆಗೆ ಹೋಗದಿದ್ರೆ ಏನು? ಹೋಟೆಲ್‌ಗೆ ಹೋಗಬಹುದು ಎಂದು ಯತ್ನಾಳ್‌ ಕಾಲೆಳೆದರು. ನಾನು ಎಲ್ಲೂ ಹೋಗಿಲ್ಲ. ಪ್ರತಿಪಕ್ಷ ನಾಯಕನ ರೇಸ್‌ನಲ್ಲಿ ಆರಗ ಜ್ಞಾನೇಂದ್ರ ಹೆಸರು ಇಲ್ಲ. ಅಶ್ವತ್ಥನಾರಾಯಣ, ಆರ್. ಆಶೋಕ್ ಹೆಸರು ಇದೆ ಎಂದರು. ಅಶೋಕ್‌ ಮತ್ತು ಅಶ್ವತ್ಥನಾರಾಯಣ ಇದನ್ನು ನಿರಾಕರಿಸಿದರೂ, ನಿಮ್ಮಿಬ್ಬರ ಹೆಸರು ಚರ್ಚೆ ಆಗುತ್ತಿದೆ. ನನ್ನ ಮಾಹಿತಿ ಪ್ರಕಾರ ಯತ್ನಾಳ್ ಆಗಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನೀವು ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿರಿ. ಅಪ್ಪನಾಣೆ ಅವರು ಸಿಎಂ ಆಗಲ್ಲ ಎಂದಿದ್ದರೂ ಅವರು ಸಿಎಂ ಆಗಿಬಿಟ್ಟರು ಎಂದು ಕಿಚಾಯಿಸಿದರು. ಇದಕ್ಕೆ ಯತ್ನಾಳ್‌ ಪ್ರತಿಕ್ರಿಯಿಸಿ, ನೀವು ಹೇಳಿದಕ್ಕಾದ್ರೂ ನಾನು ಪ್ರತಿಪಕ್ಷ ನಾಯಕ ಆಗುತ್ತೇನೆ ಎಂದರು.

Exit mobile version