ಬೆಂಗಳೂರು: ಬಿಜೆಪಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವುದನ್ನೇ ಮುಂದಾಗಿಸಿಕೊಂಡು ನಮ್ಮ ಪಕ್ಷದ ನಾಯಕರನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭೆ ಸಂಸದ ಡಿ.ವಿ. ಸದಾನಂದ ಗೌಡ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ವಿ. ಸದಾನಂದಗೌಡ, ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ನಿರೀಕ್ಷೆ ಮೀರಿ ಹಿನ್ನಡೆಯಾಗಿದೆ. ಕಳೆದ ಹಲವು ದಿನದಿಂದ ಬೇರೆ ಬೇರೆ ರೀತಿಯ ಚರ್ಚೆ ವಿಶ್ಲೇಷಣೆ ನಡೆದಿದೆ. ಇದು ಅಳೆದು ತೂಗಿ ತೆಗೆದುಕೊಳ್ಳುವ ಸಂದರ್ಭ. ನಾವು ಮಾಡಿಕೊಳ್ಳಬೇಕಾದು ಆತ್ಮಾವಲೋಕನ ಅಲ್ಲ. ನಾವು ಸೋತ ಕಾರಣ ಹುಡುಕಿ ಮುಂದಿನ ದಿನ ಪಕ್ಷ ತೀರ್ಮಾನ.
ಚುನಾವಣೆ ಫಲಿತಾಂಶ ಬಳಿಕ ಕಾರ್ಯಕರ್ತರ ಮನೋಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. ಸೋಲಿನಿಂದಾಗಿ ಎಲ್ಲವೂ ಮುಗಿಯಿತು ಅಂತ ಅಂದುಕೊಳ್ಳುವುದಲ್ಲ. ಯಡಿಯೂರಪ್ಪ ಅವರಂತಹ ನಾಯಕ ಉಳಿದ ಕಾರಣ ಅಧಿಕಾರಕ್ಕೆ ಬಂದೆವು. ಸೋಲು ತಾತ್ಕಾಲಿಕ ಹಿನ್ನಡೆ ಅಷ್ಟೆ. ಲೋಕಸಭಾ ಸದಸ್ಯನಾಗಿ, ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ಆಗಿ ಹೇಳ್ತೀನಿ, ಧೃತಿಗೆಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಕಟ್ಟಬೇಕಾದ ಅವಶ್ಯಕತೆ ಇದೆ ಎಂದರು.
ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡೋಣ. ಜನಾದೇಶದ ಆಡಳಿತ ವೈಖರಿ ಕಂಡು ನಾವು ಕಾಲಿಡಬೇಕಿದೆ. ಸೋಲು ಆದ ಕಾರಣ ಬೇರೆ ಬೇರೆ ವ್ಯಕ್ತಿಗಳ ಮೇಲೆ ಗೂಬೆ ಕೂರಿಸೋ ಕೆಲಸ ಆಗುತ್ತಿದೆ. ಕಳೆದ ಎರಡು ದಿನದ ಫೋನ್ ಕರೆಗಳಿಗೆ ಉತ್ತರ ಕೊಡಲಾಗದೆ ರಾಜ್ಯದ ಜನತೆಗೆ ಉತ್ತರ ಕೊಡಲು ಸುದ್ದಿಗೋಷ್ಟಿ ಮಾಡ್ತಿದ್ದೇನೆ. ಕಳೆದ ಎರಡು ಮೂರು ದಿನಗಳಿಂದ ಕೆಲ ಮಾಧ್ಯಮಗಳು ನಡೆಸುತ್ತಿರುವ ರಾಜಕೀಯ ಚಟುವಟಿಕೆ ಸಮಾಜಕ್ಕೆ ಮಾರಕ. ಎಲ್ಲರೂ ಹಾಗಲ್ಲ, ಕೆಲವು ಮಾಧ್ಯಮ ಟಿಆರ್‌ಪಿಗಾಗಿ ಮಾಡ್ತಿದ್ದಾರೆ.
ಮೂರ್ನಾಲ್ಕು ಬಾರಿ ನನ್ನ ತೇಜೋವದೆ ಮಾಡುವ ಕೆಲಸ ಮಾಡಲಾಗಿದೆ. ನಮ್ಮ ಪಕ್ಷವನ್ನೂ ಮುಗಿಸೋ ಕೆಲಸ ಮಾಡ್ತಿವೆ. ಗಂಭೀರ ಹೆಜ್ಜೆ ಇಡುವ ಕೆಲಸ ಮಾಡಬೇಕಿದೆ. ನಮ್ಮ ಫೋಟೋವನ್ನ ಚೆಂದವಾಗಿ ಅಚ್ಚು ಮಾಡ್ತಾರೆ. ಅದರ ಕೆಳಗೆ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ. 15 ಸಂಸದರಿಗೆ ಮಸಿ ಬಳಿಯೋ ಕೆಲಸ ಮಾಡಲಾಗ್ತಿದೆ. ಅವರಿಗೆ ಮುಂದೆ ಸೀಟುಗಳಿಲ್ಲ ಅಂತ ಹೇಳಲಾಗ್ತಿದೆ. ಅವರು ಈ ಪಕ್ಷದ ಅಧ್ಯಕ್ಷರಾ.?
ಆಯ್ಕೆ ಮಾಡಿದ ಮತದಾರರಿಗೆ ಅಪಮಾನ ಮಾಡಲಾಗ್ತಿದೆ. ಅದಕ್ಕಾಗಿ ಎಲ್ಲರಿಗೂ ಗೊತ್ತಾಗಲಿ ಅಂತ ಈ ರೀತಿ ಮಾಡ್ತಿದ್ದಾರೆ. ಬಿಜೆಪಿಯಲ್ಲಿ 13ಜನ ಅಯೋಗ್ಯರು ಅಂತ ಹೇಳ್ತಿದ್ದಾರೆ. ಈ ರೀತಿಗೆ ಕೌಂಟರ್ ಕೊಡುವುದು ನಮ್ಮಂತಹ ನಾಯಕರ ಜವಾಬ್ದಾರಿ.
ಉದಾಸಿ ಸ್ವಯಂ ಪ್ರೇರಣೆಯಾಗಿ ರಾಜೀನಾಮೆ ಕೊಟ್ರು. ಅವರು ಹೇಳಿದಂತಹ ಹೇಡಿಗಳು ನಮ್ಮ 13ಜನ ಎಂಪಿಗಳು ಅಲ್ಲ. ಅವರೆಲ್ಲಾ ಮುದುಕರಂತೆ. ಎಸ್.ಎಸ್ ಮಲ್ಲಿಕಾರ್ಜುನ್ ಅವರ ತಂದೆ ಅವರ ವಯಸ್ಸು ಯಾರೂ ಪ್ರಶ್ನೆ ಮಡುವುದಿಲ್ಲ? ನಮ್ಮ ಪಕ್ಷದ ನಾಯಕರನ್ನ ನಿರ್ವೀರ್ಯರನ್ನ ಮಾಡೋದನ್ನ ನಾನು ವಿರೋಧೀಸುತ್ತೇನೆ. ಇದರ ಬಗ್ಗೆ ಯಾರಾದ್ರೂ ಮಧ್ಯವಹಿಸಬೇಕಿದೆ. ಸತತವಾಗಿ ಆರು ಬಾರಿ ನಾನು ಗೆದ್ದಿದ್ದೇನೆ. ನಾನು ಎಂದೂ ಕೂಡ ನನಗೆ ಇಂತಹ ಸ್ಥಾನ ನೀಡಿ ಅಂತ ಮನವಿ ಮಾಡಿಲ್ಲ. ನಾನು ಯಾರ ಮನವೊಲಿಸೋ ಕೆಲಸ ಮಾಡಿಲ್ಲ.
ನನಗೆ ಸಿಕ್ಕ ರಾಜ್ಯಾಧ್ಯಕ್ಷ, ಸಿಎಂ, ಕೇಂದ್ರ ಸಚಿವ, ಪ್ರಧಾನ ಕಾರ್ಯದರ್ಶಿ ಎಲ್ಲವೂ ಪಕ್ಷ ನನಗೆ ಕೊಟ್ಟಿದ್ದು. ನಾನು ಯಾರ ಹಿಂದೆಯೂ ಹೋಗಲಿಲ್ಲ, ಫೋಟೋ ತೆಗೆಸಿಕೊಳ್ಳಲಿಲ್ಲ. ಕೆಎಂಎಫ್ ಅಧ್ಯಕ್ಷ ಸ್ಥಾನ ಕೆಳಿದ್ದು ಬಿಟ್ರೆ, ನಾನು ಯಾವುದನ್ನೂ ಕೇಳಲಿಲ್ಲ. ನಾನು ಅಧ್ಯಕ್ಷ ಆದಾಗ ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಮಾಡಿದೆ. ಈಗ ನನ್ನ ಮನೋ ಸ್ಥೈರ್ಯ ಕುಗ್ಗಿಸುವ ಪ್ರಯತ್ನಗಳು ಆಗುತ್ತಿವೆ ಎಂದು ಬೇಸರಪಟ್ಟುಕೊಂಡರು.
ಇದನ್ನೂ ಓದಿ: ವಿಸ್ತಾರ TOP 10 NEWS : ಬಾಡಿಗೆದಾರನಿಗೆ ಇಲ್ಲ ಫ್ರೀ ಕರೆಂಟ್, ಬಿಜೆಪಿಗೆ ಆರ್ಎಸ್ಎಸ್ ಪಾಠ ಇತ್ಯಾದಿ ಪ್ರಮುಖ ಸುದ್ದಿಗಳಿವು