ಬೆಂಗಳೂರು: ರಾಜ್ಯ ಬಿಜೆಪಿಯ ಆರಂಭದಿಂದಲೂ ಜತೆಯಲ್ಲೇ ಇರುವ ಹಾಗೂ ಬಹುತೇಕ ಎಲ್ಲ ಬಿಜೆಪಿ ಸರ್ಕಾರಗಳಲ್ಲೂ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ʼನಾನು ಸ್ವಯಿಚ್ಛೆಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ” ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ.
“ಕಳೆದ 40 ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು” ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ನಗರದಿಂದ ಸತತ ಶಾಸಕರಾಗುತ್ತಿರುವ ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬಾತ ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪೊಲೀಸ್ ತನಿಖೆಯಲ್ಲಿಒ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ನಂತರವಾದರೂ ತಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕು ಎಂದು ಈಶ್ವರಪ್ಪ ಸತತ ಪ್ರಯತ್ನ ಮಾಡಿದರು. ಆದರೆ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಕೇಂದ್ರದ ವರಿಷ್ಠರು ಒಪ್ಪಿಗೆ ನೀಡದ ಪರಿಣಾಮ ಈಶ್ವರಪ್ಪ ಸಚಿವರಾಗಲು ಸಾಧ್ಯವಾಗಲೇ ಇಲ್ಲ. ಇದೀಗ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲಿಗೆ ತಮಗೆ ಟಿಕೆಟ್ ನೀಡಬೇಕು ಎಂದು ಆಯನೂರು ಮಂಜುನಾಥ್ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.
ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿವಮೊಗ್ಗದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಈಶ್ವರಪ್ಪ ಮಾತನಾಡಿದ್ದಾರೆ.
ನಾನು ಬಿಜೆಪಿ ನಾಯಕರಿಗೆ ಕಳಿಸಿರುವ ಪತ್ರವನ್ನು ಕರ್ನಾಟಕದಲ ಎಲ್ಲ ಕಾರ್ಯಕರ್ತರೂ ಮೆಚ್ಚಿದ್ದಾರೆ. ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ತರಬೇಕು ಎನ್ನುವುದು ಮುಖ್ಯ. ಇದಕ್ಕಾಗಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ಮAಡುವವರು ಸ್ಪರ್ಧೆ ಮಾಡುತ್ತಾರೆ. ಎಲ್ಲರನ್ನೂ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು. ಕಾಂತೇಶ್ ಅವರಿಗೆ ಟಿಕೆಟ್ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಚುನಾವಣಾ ಸಮಿತಿ ಆ ನಿರ್ಧಾರ ಮಾಡಲಿದೆ ಎಂದಷ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ: Shivamogga News: ಕೆ.ಎಸ್. ಈಶ್ವರಪ್ಪ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ: ಮಾಜಿ ಶಾಸಕ ಪ್ರಸನ್ನ ಕುಮಾರ್