ಬೆಂಗಳೂರು: ರಾಜ್ಯ ಬಿಜೆಪಿ (BJP Karnatakata) ನಾಯಕರ ವಿರುದ್ಧ ವಾಗ್ದಾಳಿಯನ್ನು ಮಾಜಿ ಶಾಸಕ ಎಂ. ರೇಣುಕಾಚಾರ್ಯ ಮುಂದುವರಿಸಿದ್ದಾರೆ. ಈಗಾಗಲೆ ರಾಜ್ಯ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದರೂ ಕ್ಯಾರೆ ಎನ್ನದ ರೇಣುಕಾಚಾರ್ಯ, ಮುಖತಃ ಭೇಟಿಯಾಗಲು ನಾಯಕರು ಬರಹೇಳಿದರೂ ರಾಜ್ಯ ಬಿಜೆಪಿ ಕಚೇರಿ ಕಡೆಗೆ ಸುಳೀಯಲಿಲ್ಲ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಯಡಿಯೂರಪ್ಪ ವಿರುದ್ಧ ಮಾತಾಡಿದವರಿಗೆ ನೋಟಿಸ್ ಕೊಟ್ಟಿಲ್ಲ, ನನಗೆ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಕೊಟ್ಟಿದ್ದಕ್ಕೆ ನಾನು ಸಭೆಗೆ ಹೋಗಿಲ್ಲ. ಲಿಂಗಾಯತ ನಾಯಕರನ್ನು ಮುಗಿಸಲು ಹೊರಟಿದ್ದಾರೆ. ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರನ್ನು ಮುಗಿಸಿದರು. ಈಶ್ವರಪ್ಪ ಅವರನ್ನು ಮುಗಿಸಿದರು. ಯಾರು ಇವರ ವಿರುದ್ಧ ಮಾತಾಡುತ್ತಾರೋ ಅವರನ್ನು ಮಗಿಸಿದರು.
ಸೋತಾಗ ಯಾರೂ ಕರೆ ಮಾಡಿಲ್ಲ. ಯಡಿಯೂರಪ್ಪ ಅವರು ಪಕ್ಷ ಕಟ್ಟಿದ್ದಾರೆ. ಸಂಘಟನೆ ಮಾಡಿದ್ದಾರೆ, ಸರ್ಕಾರ ರಚನೆ ಮಾಡಿದ್ದರು. ಶಿಸ್ತು ಸಮಿತಿ ಇದೆ ಎಂದು ನಿನ್ನೆ ನನಗೆ ಗೊತ್ತಾಗಿದೆ. ಎಲ್ಲಾ ಸಮುದಾಯಗಳನ್ನು ತೆಗೆದುಕೊಂಡು ಹೋಗುವವವರು ರಾಜ್ಯಾದ್ಯಕ್ಷರು ಆಗಬೇಕು. ಪ್ರಣಾಳಿಕೆ ಸರಿಯಾಗಿ ಕೊಡಲಿಲ್ಲ. ಚಿನ್ನದ ತಟ್ಟೆಯಲ್ಲಿ ಕೊಟ್ಟು ಕಾಂಗ್ರೆಸ್ ನವರಿಗೆ ಅಧಿಕಾರ ಕೊಟ್ಟರು. ನಾನು ಈ ಬಗ್ಗೆ ಕೇಂದ್ರ ನಾಯಕರಿಗೆ ಪತ್ರ ಬರೆಯುತ್ತೇನೆ. ಬಿಜೆಪಿ ಉಳಿಸಿ ಎಂದು ಅಭಿಯಾನ ಮಾಡುತ್ತೇನೆ. ಬಹಿರಂಗ ಹೇಳಿಕೆ ಕೊಡಬಾರದು ಎಂದಿದೆ, ಆದರೆ ನಾನು ಅನಿವಾರ್ಯವಾಗಿ ಮಾತಾಡಿದ್ದೇನೆ ಎಂದರು.
ಕೇಂದ್ರದ ಕೆಲ ನಾಯಕರನ್ನು ಭೇಟಿ ಮಾಡಿ ಮಾತಾಡಿದ್ದೆ. ಪಕ್ಷದ ವಾಸ್ತವಸ್ಥಿತಿ ಹೇಳಿ ಬಂದಿದ್ದೆ. ಕರ್ನಾಟಕದಲ್ಲಿ ಇದೆ ಪರಿಸ್ಥಿತಿ ಇದ್ದರೆ ಪಕ್ಷ ಗೆಲ್ಲುವುದಿಲ್ಲ ಎಂದು ಹೇಳಿ ಬಂದಿದ್ದೆ. ಯಡಿಯೂರಪ್ಪ ಅವರನ್ನು 2013 ರಲ್ಲಿ ಪಕ್ಷದಿಂದ ಹೊರಗೆ ಕಳಿಸಿದರು. ಪಕ್ಷ ಹೀನಾಯ ಸೋಲು ಕಂಡಿತು. ಮೋದಿ, ಶಾ ಅವರು ಕರೆದು ಯಡಿಯೂರಪ್ಪ ಅವರನ್ನು ರಾಜ್ಯಾದ್ಯಕ್ಷರನ್ನಾಗಿ ಮಾಡಿದರು. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದರು.
ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು, ಆದರೆ ಬೊಮ್ಮಾಯಿ ಅವರ ಕೈ ಕಟ್ಟಿಹಾಕಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಹಿರಿಯರನ್ನು ಮಾಡಬೇಕಿತ್ತು. ಒಳ ಮೀಸಲಾತಿಯಿಂದ 45 ಕ್ಷೇತ್ರಗಳಲ್ಲಿ ಸೋಲು ಆಯಿತು. ಅಕ್ಕಿ ಕೊಡಲಿಲ್ಲ , ಎನ್.ಪಿ ಎಸ್ ಕೊಡಲಿಲ್ಲ. ಇದರಿಂದ ಬಿಜೆಪಿಗೆ ಸೋಲು ಆಯಿತು. ನನಗೆ ನಿನ್ನೆ ದಿನ ನೋಟಿಸ್ ಬಂದಿದೆ. ಲಿಖಿತವಾಗಿ ಒಂದು ವಾರದಲ್ಲಿ ಉತ್ತರಕೊಡುವಂತೆ ತಿಳಿಸಿದ್ದಾರೆ. ಆದರೆ ಸಭೆಗೆ ಬರುವಂತೆ ಕರೆ ಮಾಡಿಲ್ಲ.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ತಾಯಿ ಸಮಾನ, ಮೋದಿಯವರು ವಿಶ್ವ ನಾಯಕರು, ಪಕ್ಷದ ವಿರುದ್ಧ ಮಾತನಾಡಿಲ್ಲ. ಅನಿವಾರ್ಯವಾಗಿ ನನ್ನ ನೋವನ್ನ ಹೇಳಿದ್ದೇನೆ. 4 ವರ್ಷದ ಹಿಂದೆ ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ನನ್ನ ಅನಿಸಿಕೆ ತಿಳಿಸಿದ್ದೇನೆ. ಇದೇ ರೀತಿ ಆದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಹೇಳಿ ಬಂದಿದ್ದೆ. ಪಕ್ಷದಲ್ಲಿ ಶಿಸ್ತುಪಾಲನ ಸಮಿತಿ ಇದೆ ಎಂದು ನಿನ್ನೆ ಮಧ್ಯಾಹ್ನ ನನಗೆ ಗೊತ್ತಾಗಿದ್ದು. ನನಗೊಬ್ಬನಿಗೆ ಏಕೆ ನೋಟಿಸ್ ಕೊಟ್ಟಿದ್ದಾರೆ? ಬೇರೆಯವರು ಎಷ್ಟು ಮಂದಿ ಮಾತನಾಡಿದ್ದಾರೆ ಅವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ…? ಎಂದು ಪ್ರಶ್ನಿಸಿದರು.
ನಾನು ಕೋವಿಡ್ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದ್ದೆ. ಒಬ್ಬರಾದರೂ ಒಳ್ಳೆಯ ಕೆಲಸ ಎಂದು ಹೇಳಿಲ್ಲ. ಸಿದ್ದರಾಮಯ್ಯ, ಡಿಕೆಶಿ ಸಹ ಒಳ್ಳೆಯ ಕೆಲಸ ಮಾಡಿದ್ಯಿಯಾ ಎಂದು ಹೇಳಿದ್ದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ- ಡಿಕೆಶಿ ಆಗುತ್ತಿರಲಿಲ್ಲ. ಅವರಿಬ್ಬರು ಪೋಟೋ ಶೂಟ್ ಮಾಡಿಸಿ ಒಗ್ಗಟ್ಟು ತೋರಿಸಿದರು. ನಮ್ಮಲ್ಲಿ ಕತ್ತರಿ ಕೆಲಸ ಮಾಡಿದರೇ ಹೊರತು ಸೂಜಿ ದಾರದ ಕೆಲಸ ಮಾಡಲಿಲ್ಲ ಎಂದರು.
ಇದನ್ನೂ ಓದಿ: BJP Karnataka: ರೇಣುಕಾಚಾರ್ಯ ಉಚ್ಚಾಟನೆ?: ʼಕತ್ತರಿʼ ಹೇಳಿಕೆಗೆ ಕಚೇರಿಯಿಂದಲೇ ಬಂತು ನೋಟಿಸ್
ಪಕ್ಷದಿಂದ ಹೊರಹೋಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ರೇಣುಕಾಚಾರ್ಯ ಯಾವಗಿದ್ದರೂ ಬಿಜೆಪಿಯವನೆ. ಇವರಾಗಿಯೇ ಕಳಿಸುತ್ತಾರೆಂದರೆ ಗೊತ್ತಿಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಬಿಜೆಪಿ ತಾಯಿ ಸಮಾನ, ಕಾಂಗ್ರೆಸ್ ಹೋಗುತ್ತೇನೆ ಎಂದು ಯಾರು ಪ್ರಚಾರ ಮಾಡಿದರೆ ನಾನು ಏನು ಮಾಡಲಿ? ನನ್ನ ಮುಂದಿನ ನಡೆ, ಸಮಾನ ಮನಸ್ಕರ ಜೊತೆ ಮಾತುಕತೆ ಮಾಡುತ್ತೇನೆ. ಬಿಜೆಪಿ ಉಳಿಸಿ ಎಂದು ಅಭಿಯಾನ ಮಾಡುತ್ತೇನೆ. ಮೋದಿಯವರು ಪಿಎಂ ಆಗಬೇಕು ಅದಕ್ಕೆ ವೇದಿಕೆ ರೆಡಿ ಮಾಡುತ್ತೇನೆ ಎಂದರು.
ಯಡಿಯೂರಪ್ಪ ಸಭೆಗೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಡಿಯೂರಪ್ಪ ಅವರು ಅಗ್ರಮಾನ್ಯ ನಾಯಕರು. ದೇಶಕ್ಕೆ ಮೋದಿ ಹೇಗೂ, ಹಾಗೆ ಕರ್ನಾಟಕಕ್ಕೆ ಯಡಿಯೂರಪ್ಪ ನಾಯಕರು. ಯಡಿಯೂರಪ್ಪ ಅವರು ಕರೆಯೊದೆ ಬೇಡ ನಾನೇ ಹೋಗುತ್ತೇನೆ ಎಂದು ತಿಳಿಸಿದರು.