ವಿಜಯಪುರ: ವಿಧಾನಸಭೆ ಚುನಾವಣೆಲ್ಲಿ ಸೋಲಿನ ಕಾರಣಗಳನ್ನು ವಿಶ್ಲೇಷಿಸಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಸಂಸದ ರಮೇಶ್ ಜಿಗಜಿಣಗಿ, ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಅಂಡರ್ ಕರೆಂಟ್. ಇಷ್ಟು ವರ್ಷದ ರಾಜಕಾರಣ ಮಾಡಿದ್ದೇನೆ, ನನಗೇ ಗೊತ್ತಾಗದ ಅಂಡರ್ ಕರೆಂಟ್. ನಾನು ಸರ್ಕಾರ ಬೀಳುತ್ತೆ ಅಂದ್ರೆ, ಮರುದಿನ ಆ ಸರಕಾರ ಬಿದ್ದಿದೆ, ಅದು ನನ್ನ ರಾಜಕೀಯ ಅನುಭವದ ಮಾತು. ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳ ಅಂಡರ್ ಕರೆಂಟ್ ಎಂದಿದ್ದಾರೆ.
ಜಿಲ್ಲೆಯಲ್ಲಿ ಕನಿಷ್ಠ 4 ರಿಂದ 5 ಸ್ಥಾನ ಗೆಲ್ಲುತ್ತೇವೆಂದು ವಿಶ್ವಾಸವಿತ್ತು. ಹಂಡ್ರೆಡ್ ಪರ್ಸೆಂಟ್ ಗೆಲ್ಲುತ್ತೇವೆ ಎನ್ನುವುದು ಇಷ್ಟು ವರ್ಷದ ಅನುಭವ ಹೇಳ್ತಿತ್ತು. ಆದರೆ ಗೊತ್ತಾಗದ ವಿಷಯ ಈ ಕಾಂಗ್ರೆಸ್ ಗ್ಯಾರಂಟಿಗಳ ಅಂಡರ್ ಕರೆಂಟ್ ಎಂದರು.
ಟಿಕೆಟ್ ಹಂಚಿಕೆ ಕುರಿತು ಮಾತನಾಡಿ, ನಮ್ಮ ಪಕ್ಷ ಅತಿಹೆಚ್ಚು ಹೊಸಬರಿಗೆ ಟಿಕೆಟ್ ಕೊಟ್ಟಿದ್ದು ಇನ್ನೊಂದು ತಪ್ಪು. ಯಾಕಾಯ್ತು ಅನ್ನೋದು ನಿಮಗೂ ಗೊತ್ತಿರ್ತದ, ನಮಗೂ ಗೊತ್ತಿರ್ತದ. 70 ಮಂದಿ ಹೊಸಬರಿ ಟಿಕೆಟ್ ಕೊಡುವ ಅವಶಯಕತೆ ಏನಿತ್ತಪ್ಪ? ಹೊಸಬರಿಗೆ ಕೊಡಬೇಕು, ಕೊಡಬಾರದು ಎಂದು ನಾ ಅನ್ನಲ್ಲ. 70 ಜನರಿಗೆ ಕೊಟ್ಟೆವು, ಗೆದ್ದೆವ? 70 ರಲ್ಲಿ 10 ಸೀಟ್ ಗೆದ್ರಾ? ಮತ್ತೆ ನೀವು ಈ 70 ಸೀಟನ್ನ ಹಳಬರಿಗೆ ಕೊಟ್ಟಿದ್ರೆ ಕನಿಷ್ಠ 30 – 35 ಸೀಟು ಬರ್ತಿದ್ದವು. ಇದು ಎರಡನೇಯ ತಪ್ಪು ಎಂದರು.
ಯಾರು..? ಯಾರು ಇದಕ್ಕೆ ಸಲಹೆ ಮಾಡ್ಯಾರೋ ಅವರಿಗೇ ಬಿಟ್ಟದ್ದು. ಅವರಿಗೇ ಏನ್ ಮಾಡ್ತೀರಿ ಮಾಡ್ರಿ. ನೇಣು ಬೇಕಾದ್ರೆ ಹಾಕಿ, ಕಾಲು ಬೇಕಾದ್ರೆ ತೆಗೀರಿ, ನನಗೇನು ಸಂಬಂಧ ಇಲ್ಲ ಎಂದು ಹೊಸಬರಿಗೆ ಟಿಕೆಟ್ ನೀಡಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸವದಿ ಅವರು ಕಾಂಗ್ರೆಸ್‌ಗೆ ಹೋಗಿದ್ದು ಪರಿಣಾಮ ಬೀರಿದೆಯೇ? ಎಂಬ ಕುರಿತು ಪ್ರತಿಕ್ರಿಯಿಸಿ, ಸ್ವಲ್ಪ ಮಟ್ಟಿಗೆ ಉತ್ತರ ಕರ್ನಾಟಕದಲ್ಲಿ ಪರಿಣಾಮ ಬೀರಿದೆ. ಇದೇನಾದ್ರೂ ಲೋಕಸಭೆ ಎಲೆಕ್ಷನ್ ಮೇಲೂ ಪರಿಣಾಮ ಬೀರಲಿದೆಯಾ? ಎಂಬ ಕುರಿತು ಮಾತನಾಡಿ, ನೋಡ್ರಿ, ಇದು ಜನ ಓಟು ಹಾಕಿದ್ದು ಗ್ಯಾರಂಟಿ ಕಾರ್ಡುಗಳಿಗಾಗಿ. ಗ್ಯಾರಂಟಿ ಕಾರ್ಡುಗಳ ಸರ್ಕಾರ ನಡೆಸುವವರು ರಾಜ್ಯ ಸರ್ಕಾರದವರು. ರಾಜ್ಯ ಸರಕಾರಕ್ಕೇನು ಬೇಕು ಅದನ್ನ ಬರೋಬ್ಬರಿ ವ್ಯವಸ್ಥಾ ಮಾಡಿ ಕೊಟ್ಟಾರ ಜನ ಈಗ. ಇವ್ರದೇನದಪಾ ಅಲ್ಲಿ ಲೋಕಸಭಾದಾಗ? ಏನ್ ಮಾಡ್ಯಾರ, ಯಾರ ಮಾಡ್ಯಾರ, ಕಾಂಗ್ರೆಸ್ಸಿನವರು ಮಾಡ್ಯಾರ..? ದೇಶಾನೆ ಮಾರ್ಕೊಂಡ್ ಹೊಂಟಾರ ಇವರು ಕಾಂಗ್ರೆಸ್ಸಿನವರು. ಮೋದಿ ಸಾಹೇಬ ಇದ್ದಾನಂತ ಹಿಡ್ಕೊಂಡು ನಿಂತಾನ.
ಬೇರೆಯವರ ಕೈಯಲ್ಲಿ ದೇಶ ಇದ್ದಿದ್ರೆ, ಇಂದು ಏನಾಗಿರೋದು ದೇಶದ ಸ್ಥಿತಿ. ಯಾರು ಬಂದ್ರು, ಯಾವ ಪಕ್ಷದವರಿದ್ರು, ಯಾವ ಲೀಡರ್ ಇದ್ದರೂ ಮೋದಿಯವರನ್ನ ಈ ಸಲ ಸಹ ಸೋಲಿಸಲು ಆಗುವುದಿಲ್ಲ. ಖಂಡಿತ ಮತ್ತೆ ಬಿಜೆಪಿ ಸರ್ಕಾರವೇ ಕೇಂದ್ರದಲ್ಲಿ ಬರುತ್ತದೆ. ಮತ್ತೆ ಮೋದಿಯವರೇ ಪ್ರಧಾನಮಂತ್ರಿ ಆಗುತ್ತಾರೆನ್ನುವ ನೂರಕ್ಕು ನೂರು ಗ್ಯಾರಂಟಿ ನಮಗಿದೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಅದಕ್ಕೂ, ಇದಕ್ಕೂ ಸಂಬಂಧವೇ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕರಿದ್ದಾರೆ ಹೇಳಿ ನೋಡೋಣ. ಆ ಹುಡುಗ ನಾಯಕನಾ..? ಅಥವಾ ಆ ಹುಡುಗಿ ನಾಯಕಿಯಾ..? ಯಾರು ನಾಯಕರು…? ಖರ್ಗೆಯಂಥವರು ಅದಾರ, ಹಿರಿಯ ನಾಯಕರು. ಇಲ್ಲಾ ಎನ್ನುವುದಿಲ್ಲ. ಆದರೆ ಈ ಹಿಂದೆಯೂ ಸಹ ದಲಿತರನ್ನ ಈ ದೇಶದ ಪ್ರಧಾನ ಮಂತ್ರಿ ಮಾಡಬೇಕಾದರೆ ಉಂಡಿಲ್ಲೇನಪಾ.. ನಾವು. ಗೊತ್ತದ ಅದೆಲ್ಲಾ ನಾವು ಭಾಳ ಮಾತಾಡೋದು ಬೇಡ ಈಗ. ದಲಿತರ ಬಗ್ಗೆ.. ಈ ದೇಶದಲ್ಲಿ ಜನರ ಭಾವನಾ ಏನಿದೆ ಅನ್ನೋದು ನಮಗೂ ಗೊತ್ತದ. ಅಷ್ಟು ಸುಲಭವಾಗಿ ಒಪ್ಕೋಳ್ತಾರಾ? ದಲಿತರನ್ನ ಒಪ್ಪಿಕೊಳ್ಳೋದಿಲ್ಲ.
ದಲಿತ ಸಿಎಂ ಬೇಡಿಕೆ ಇನ್ನೂ ಈಡೇರುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನೂರಕ್ಕ ನೂರಾ ಒಂದು ಪರ್ಸೆಂಟ್ ಈಡೇರ್ತದ ನೋಡು. ಅದನ್ನ ಸಾವಿರ ಸಲ ಹೇಳಿನಿ, ಅದನ್ನ ಬಿಡಂಗಿಲ್ಲ, ಬಿಡಂಗಿಲ್ಲಂದ್ರ ಬಿಡೋದಿಲ್ಲ. ದಲಿತ ಸಿಎಂ ಆಗೇ ಅಗ್ತಾರೆ, ಅದನ್ನ ಯಾರೂ ತಪ್ಪಿಸಲು ಸಾಧ್ಯವಿಲ್ಲ. ನೀವೂ ಇರ್ತಿರಲ್ಲ, ನೋಡ್ತೀರಿ ಸಣ್ಣವರಿದ್ದೀರಿ ಇನ್ನ. ನೋಡ್ಕೋತ ನಡೀರಿ ಇನ್ನ. ಇದು ಏನರೆ ತಪ್ಪಿದರೆ ನೀವು ಹೇಳಿದ್ದು ನಾ ಕೇಳ್ತೀನಿ. ತಪ್ಪಲು ಸಾದ್ಯವೇ ಇಲ, ದಲಿತ ಸಿಎಂ ಆಗೇ ಆಗ್ತಾರ. ಬಿಜೆಪಿ ಮುಂದಿನ ಸಲ ದಲಿತ ಸಿಎಂ ಕುರಿತಂತೆ ಪ್ರಸ್ಥಾಪಿಸಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಮುಂದುವರಿತದೋ ಬಿಡ್ತದೋ. ದಲಿತರೆಲ್ಲಾ ಏಳ್ತಾರೆ ಇನ್ನ. ಆ ಕುರಿತು ಭಾಳ ಮಾತಾಡೋದು ಬ್ಯಾಡ ಇನ್ನು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷವನ್ನ ಹಾಗೆ ಬಿಟ್ಟೇ ಬಿಡ್ತಾರ? ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೇ ಮಾಡ್ತಾರೆ, ಆ ವಿಶ್ವಾಸವಿದೆ. ಯಾರನ್ನ ಮಾಡ್ತಾರೆ, ಯಾರನ್ನ ಮಾಡಬೇಕು ಅನ್ನೋದನ್ನ ನನಗೆ ಕೇಳಬೇಡಿ. ನನಗದರ ಸಂಬಂಧವೂ ಇಲ್ಲ. ನಾನೊಬ್ಬ ಲೋಕಸಭಾ ಸದಸ್ಯ ಮಾತ್ರ. ನಾನು ಕೈ ಎತ್ತಾವ ಇದ್ರೆ ಹೇಳ್ತಿದ್ದೇ, ಇಂಥವರನ್ನೇ ಮಾಡ್ರಿ ಅಂತ. ಯತ್ನಾಳ ಅವರನ್ನೇ ಮಾಡಲಿ, ಮತ್ಯಾರು ಬೇಕಾದವರನ್ನ ಮಾಡಲಿ, ನಂದೇನೂ ಅಭ್ಯಂತರ ಇಲ್ಲ ಎಂದರು.
ಇದನ್ನೂ ಓದಿ: BJP Karnataka: ಪ್ರತಾಪ್ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!