ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲೇಬೇಕೆಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನದ ಮಹಾಘಟಬಂಧನ ಸಭೆ (Opposition Meet) ಕುರಿತು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ದರೋಡೆಕೋರರು, ಒಡೆದ ಮಡಕೆ, ಅಣಬೆಗಳೂ ಎನ್ನುವ ನುಡಿಮುತ್ತುಗಳ ಮೂಲಕ ಈ ಸಭೆಯು ವ್ಯರ್ಥ ಪ್ರಯತ್ನ ಎಂದಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ನರೇಂದ್ರ ಮೋದಿಯವರನ್ನು ಸೋಲಿಸುವುದು ಅಸಾಧ್ಯ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ತಿಂಗಳಾಗಿದೆ. ಬರಗಾಲದ ಛಾಯೆ ಎದುರಾಗಿದೆ. ರೈತರ ಆತ್ಮಹತ್ಯೆ ಹೆಚ್ಚಿದೆ. ಹಿಂದೂ ಕಾರ್ಯಕರ್ತರ, ಜೋಡಿ ಕೊಲೆಯಾಗಿದೆ. ನರೇಂದ್ರ ಮೋದಿಯವರನ್ನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಒಟ್ಟಾಗ್ತಿದ್ದಾರೆ. ಜಾಮೀನು ಮೇಲೆ ಇರೋ ಎಲ್ಲಾ ಕುಟುಂಬಗಳು ಕರ್ನಾಟಕದಲ್ಲಿ ಒಟ್ಟಿಗೆ ಸೇರಿವೆ. ಮತ್ತೆ ಮೋದಿ ಬಂದ್ರೆ ಜೈಲೇ ಗತಿ ಅನ್ನೋದು ಗೊತ್ತಾಗಿದೆ. ಹಾಗಾಗಿ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗಿನ ಎಲ್ಲಾ ದರೋಡೆಕೋರರು ಒಟ್ಟಿಗೆ ಸೇರ್ತಿದ್ದಾರೆ.
ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ವಿಪಕ್ಷಗಳು ಒಗ್ಗೂಡಿ ಸಭೆ ಮಾಡ್ತಿವೆ. ದೇಶದ ವಿಪಕ್ಷಗಳ ಕಥೆ ಹೇಗಾಗಿದೆ ಎಂದರೆ, ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಎನ್ನುವ ರೀತಿ. ಅಂತಹ ಪರಿಸ್ಥಿತಿ ವಿಪಕ್ಷಗಳಿಗೆ ಆಗಿದೆ. ಮೋದಿಯವರ ನಾಯಕತ್ವ ಜಗತ್ತು ಕೊಂಡಾಡುತ್ತಿವೆ, 20ಕ್ಕೂ ಹೆಚ್ಚು ರಾಷ್ಟ್ರಗಳು ನಾಗರಿಕ ಪ್ರಶಸ್ತಿ ನೀಡಿವೆ. ದೇಶದ ವಿಪಕ್ಷಗಳಿಗೆ ದೇಶ ಕಟ್ಟುವ ಚಿಂತನೆ ಇಲ್ಲ. ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ಇವರ ಉದ್ದೇಶ. ಮತ್ತೆ ಮೋದಿ ಪ್ರಧಾನಿ ಆಗಬಾರದು ಅನ್ನೋ ಒನ್ ಲೈನ್ ಅಜೆಂಡಾ ಇವರದ್ದು. ಅವರಿಗೆ ಶುಭವಾಗಲಿ, ನಿವೇನೇ ಮಾಡಿದ್ರು ಜನ ಇದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೂರನೇ ಬಾರಿ ಮೋದಿ ಪ್ರಧಾನಿ ಆಗೋದನ್ನ ತಡೆಯಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಆ ವಿಚಾರ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ. ನಾನು ಮೊದಲ ಬಾರಿ ಶಾಸಕ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ನನ್ನ ಬೆಂಬಲವೂ ಇದೆ ಎಂದರು.
ಮಳೆ ಕೊರತೆ, ರೈತರ ಆತ್ಮಹತ್ಯೆಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡ್ತೀವಿ. ಸದನದಲ್ಲಿ ಇದು ಚರ್ಚೆಯಾಗಬೇಕು. ಮಳೆಮುಂದುವರೆದು ಹೋಗ್ತಿದೆ. ರೈತರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡಬೇಕು. ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಆರ್. ಆಶೋಕ್ ಮಾತನಾಡಿ, ಇದೊಂದು ಫೋಟೋ ಶೋ ಬಿಟ್ರೆ ಬೇರೆ ಏನು ಆಗಲ್ಲ. ಇವರಿಗೆ ಸಿದ್ದಾಂತದ ಕ್ಲಾರಿಟಿ ಇಲ್ಲ. ಆ ರಾಜ್ಯಗಳಲ್ಲಿ ಕಾಂಗ್ರೆಸ್ ಜತೆ ಕಾರ್ಯಕರ್ತರು ಹೊಡೆದಾಡುತ್ತಾರೆ. ಮೋದಿಯನ್ನ ಟಾರ್ಗೆಟ್ ಮಾಡುವುದು ಇವರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಕಾರ್ಯಗಳು ಜನರ ಮೆಚ್ಚುಗೆಗೆ ಕಾರಣವಾಗಿವೆ. ಘಟಬಂಧನ್ ಒಂದು ಫೋಟೋ ಶೋ ಬಿಟ್ರೆ ಬೇರೆ ಏನು ಲಾಭ ಆಗಲ್ಲ ಎಂದರು.
UPA ಅನ್ನೋದು ಹೊಡೆದು ಹೋಗಿರುವ ಮಡಕೆ. ಒಡೆದು ಹೋಗಿರುವ ಮಡಕೆಯಲ್ಲಿ ಏನೂ ನಿಲ್ಲಲ. ಹಾಗೇ ಅಲ್ಲಿರುವ ನಾಯಕರಲ್ಲಿ ಹೊಂದಾಣಿಕೆಯೇ ಇಲ್ಲ , ಗೊಂದಲದಲ್ಲಿ ಸೇರುತ್ತಿದ್ದಾರೆ. ಕಳೆದ ಬಾರಿ ಕೂಡ ಹೀಗೆ ಸಭೆ ಮಾಡಿದ್ರೂ ಏನೂ ಇದೊಂದು ವ್ಯರ್ಥ ಪ್ರಯತ್ನ. ಕರ್ನಾಟಕವನ್ನ ATM ಮಾಡಿಕೊಳ್ಳುವ ಬೇಸ್ ಮಾಡ್ಕೊಂಡಿದ್ದಾರೆ. ಮೋದಿ ಸೂಪರ್ ಮ್ಯಾನ್ ಅಂತ ಗೊತ್ತಾದ ಮೇಲೆ ಅವರನ್ನೇ ಟಾರ್ಗೆಟ್ ಮಾಡೊದು. ಕರ್ನಾಟಕದ ನಂತರ ದೇಶ ಗೆಲ್ಲುತ್ತೇನೆ ಎನ್ನೋದು ಅವರ ಭ್ರಮೆ ಅಷ್ಟೆ ಎಂದರು.
ಇದನ್ನೂ ಓದಿ: Opposition Meet : ಮಹಾಘಟಬಂಧನ್ ಮೇಲೆ ಆಕ್ರಮಣ; ಆಹ್ವಾನ ಕೊಟ್ಟರೂ, ಬಿಟ್ಟರೂ ಒಂದೇ ಎಂದ HDK
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಈ ಮಹಾಘಟನಬಂದನ್ ಯಾವ ಕಾರಣಕ್ಕೆ ಅನ್ನೋದು ಅವರಿಗೇ ಗೊತ್ತಿಲ್ಲ. ಮೋದಿ ಅವರನ್ನ ಸೋಲಿಸಬೇಕು ಅನ್ನೋ ನಿಟ್ಟಿನಲ್ಲಿ ಸಭೆ ಮಾಡ್ತಿದಾರೆ. ಯುನೈಟೆಡ್ ದಿ ಸ್ಟ್ಯಾಂಡ್ ಎಂಬ ಪೋಸ್ಟ್ ಹಾಕಿದಾರೆ. ಇಲ್ಲಿ ಸೇರೋ ಎಲ್ಲರೂ ಅವರ ಸಿದ್ಧಾಂತ, ತತ್ವಗಳು ಬೇರೆ. ಹೀಗಿರುವಾಗ ಹೇಗೆ ಒಂದಾಗ್ತಾರೆ? ಇವರಿಗೆ ನೀತಿ ಸಿದ್ಧಾಂತಗಳೇ ಇಲ್ಲ. ಮುಫ್ತಿ ಮೊಹಮ್ಮದ್ ಬರ್ತಿದಾರೆ, ಅವರ ಸಿದ್ಧಾಂತ ದೇಶ ಒಡೆಯೋದು. ಇವೆರೆಲ್ಲರೂ ಕುತಂತ್ರ ಮಾಡಲು ಬರುತ್ತಿದಾರೆ. ಮಳೆಯಲ್ಲಿ ಅಣಬೆಗಳ ರೀತಿ ಹುಟ್ಟುಕೊಂಡಿದಾರೆ.. ಇದೊಂದು ಟೂರ್ ರೀತಿಯಲ್ಲಿ ಬಂದಿದಾರೆ. ವಿರೋಧ ಪಕ್ಣವಾಗಲು ಯೋಗ್ಯರಿಲ್ಲದವರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದಾರೆ, ಅವರು ಸಂಸದರೂ ಅಲ್ಲ, ಅನರ್ಹಗೊಂಡಿದಾರೆ. ಈ ದೇಶವನ್ನ ಹರಾಜಿಗಿಡೋ ಪ್ರಯತ್ನ ಮಾಡ್ತಿದಾರೆ. ಅಲ್ಲಿ ವೆಚ್ಚವಾಗುವ ಒಂದೊಂದು ರೂಪಾಯಿಯೂ ಸರ್ಕಾರದ ಖರ್ಚಾಗಿದ್ದರೆ ತಿರುಗಿಬೀಳ್ತೇವೆ. 150 ತಾಲೂಕಿನಲ್ಲಿ ಮಳೆ ಇಲ್ಲ .. ಕುಡಿಯುವ ನೀರು ಇಲ್ಲ. ಅದನ್ನ ನೋಡ್ತಿಲ್ಲ, ನಿಮ್ಮ ಗ್ಯಾರಂಟಿ ಗಳು ಹಳ್ಳಕ್ಕೆ ಬೀಳ್ತಿವೆ ಎಂದು ವಾಗ್ದಾಳಿ ನಡೆಸಿದರು.