ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿರುವಾಗ ಅತ್ತ ನಗರದ ಹೊರ ವಲಯದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸದಸ್ಯರು ತಲೆಕೆಡಿಸಿಕೊಂಡು ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಇತ್ತ ಕಂಪ್ಯೂಟರ್ ಮುಂದೆ ಕುಳಿತ ಕಿಲಾಡಿಗಳು ನೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಬಿಟ್ಟಿದ್ದಾರೆ. ಅದರ ಇನ್‌ಸೈಡ್ ಸ್ಟೋರಿ (Inside Story) ಇಲ್ಲಿದೆ.
ಆಗಿದ್ದಿಷ್ಟು. ಹೊರವಲಯದ ಗೋಲ್ಡನ್ ಪಾಮ್ಸ್ ರೆಸಾರ್ಟ್‌ನಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರಭಾರಿ ಅರುಣ್ ಸಿಂಗ್, ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್, ಸಹ ಪ್ರಭಾರಿಗಳಾದ ಮನ್‌ಸುಖ್ ಮಂಡಾವಿಯಾ, ಅಣ್ಣಾಮಲೈ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಭೆಯಲ್ಲಿದ್ದಾರೆ.
ಇಡೀ ರಾಜ್ಯದ ಎಲ್ಲ ಕ್ಷೇತ್ರಗಳ ಆಕಾಂಕ್ಷಿಗಳು, ಅವರ ಕುರಿತು ವಿವಿಧ ಸಮೀಕ್ಷೆ ವರದಿಗಳು, ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಟಿಕ್ ಮಾಡುತ್ತಾ ಇದ್ದರು. ಇದೇ ವೇಳೆಗೆ ಮದ್ಯಾಹ್ನ 1 ಗಂಟೆ ವೇಳೆಗೆ ವಾಟ್ಸ್‌ಪ್‌ನಲ್ಲಿ ಬಂದ ಮೆಸೇಜ್, ಅಲ್ಲಿದ್ದವರನ್ನು ದಂಗುಬಡಿಸಿದೆ.
ಅಲ್ಲಿ ನೋಡಿದರೆ, ಯಥಾವತ್ತು ಬಿಜೆಪಿ ಕೇಂದ್ರ ಕಚೇರಿಯಿಂದಲೇ ಬಿಡುಗಡೆ ಮಾಡಿದಂತೆ ಇರುವ ಪಟ್ಟಿ. ಅದೂ ಬಿಜೆಪಿ ಸಾಮಾನ್ಯವಾಗಿ ಬಿಡುಗಡೆ ಮಾಡುವ ಶೇ.100 ಮಾದರಿಯಲ್ಲೇ ಸಿದ್ಧಪಡಿಸಿ, 100 ಅಭ್ಯರ್ಥಿಗಳ ಹೆಸರು ಹಾಕಲಾಗಿತ್ತು. ಬಿಜೆಪಿ ಸೀಲ್ ಸಹ ಹಾಕಿದೆ. ಇದೆಲ್ಲಕ್ಕೂ ಮುಖ್ಯವಾಗಿ, ಅದೇ ಸಭೆಯಲ್ಲಿ ಕುಳಿತು ಅಭ್ಯರ್ಥಿ ಆಯ್ಕೆ ಮಾಡುತ್ತಿರುವ ಅರುಣ್ ಸಿಂಗ್ ಸಹಿಯನ್ನೇ ಹಾಕಲಾಗಿತ್ತು.
ಇಡೀ ಸಭೆ ಒಂದಷ್ಟು ಹೊತ್ತು ಗಂಭೀರವಾಗಿದೆ. ಹೋಗಲಿ 100 ಹೆಸರುಗಳು ಯಾವುವು ಎಂದು ನೋಡಿದರೆ ಅಲ್ಲೂ ಶಾಕ್ ಆಗುವ ವಿಚಾರ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಚುನಾವಣಾ ಲೆಕ್ಕಾಚಾರಗಳು, ಜಾತಿ ಕಾಂಬಿನೇಷನ್, ಹಿರಿತನ ಎಲ್ಲವನ್ನೂ ಪರಿಗಣಿಸಿ ʼಟಿಕೆಟ್ ಘೋಷಣೆʼ ಮಾಡಲಾಗಿದೆ.
ಬಸವನಗುಡಿಯಿಂದ ಭಾಸ್ಕರ ರಾವ್, ಜಯನಗರದಿಂದ ಎನ್.ಆರ್. ರಮೇಶ್ ಹೆಸರು ಸೂಚಿಸಲಾಗಿದೆ. ಇತರರಿಗೆ ಟಿಕೆಟ್ ನೀಡೋ ಸ್ಥಾನದಲ್ಲಿದ್ದು, ಅದೇ ಸಭೆಯಲ್ಲಿ ಕುಳಿತಿದ್ದ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಬ್ಯಾಟರಾಯನಪುರಕ್ಕೆ ವರ್ಗಾಯಿಸಿ ಪದ್ಮನಾಭನಗರದಲ್ಲಿ ಎಲ್. ಶ್ರೀನಿವಾಸ್, ಸಚಿವ ಡಾ. ಅಶ್ವತ್ಥನಾರಾಯಣ ಅವರನ್ನು ರಾಮನಗರದಿಂದ ಕಣಕ್ಕಿಳಿಸಿ ಮಲ್ಲೇಶ್ವರದಲ್ಲಿ ಅಶೋಕ್ ಹಾರನಹಳ್ಳಿ ಹೆಸರು ಸೂಚಿಸಲಾಗಿದೆ.
ಇದೆಲ್ಲದರ ಜತೆಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮಂಡ್ಯ ಸಂಸದೆ ಸುಮಲತಾ, ಕೋಲಾರ ಸಂಸದ ಮುನಿಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ, ಹುಬ್ಬಳ್ಳಿ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರನ್ನು ವಿಧಾನಸಭೆಯ ಅಭ್ಯರ್ಥಿಗಳಾಗಿ ಘೋಷಿಸಲಾಗಿತ್ತು. ಕಾರ್ಕಳದಿಂದ ಸಚಿವ ಸುನಿಲ್ ಕುಮಾರ್ ಅವರನ್ನು ಉಡುಪಿಗೆ ಕಳಿಸಿ ಅವರ ಗುರು ಪ್ರಮೋದ್ ಮುತಾಲಿಕ್‌ರಿಗೆ ಟಿಕೆಟ್ ನೀಡಲಾಗಿತ್ತು.
ಇದೆಲ್ಲದರ ಜತೆಗೆ ಸೈಲೆಂಟ್ ಸುನಿಲ್ ಹೆಸರು ಚಾಮರಾಜಪೇಟೆಗೆ, ಸರ್ಕಾರದ ಪ್ರಭಾವಿ ಸಚಿವರಲ್ಲೊಬ್ಬರಾದ ಸಿ.ಸಿ. ಪಾಟೀಲರಿಗೆ ಟಿಕೆಟ್ ತಪ್ಪಿಸಿ ಅನಿಲ್ ಮೆಣಸಿನಕಾಯಿ ಅವರಿಗೆ ನೀಡಿರುವಂತಹ ಆಘಾತಕಾರಿ ವಿಚಾರಗಳೂ ಸಭೆಯಲ್ಲಿದ್ದವರಿಗೆ ಕಂಡುಬಂದವು. ಗಡಿಬಿಡಿಯಲ್ಲೇ ಸಿಬ್ಬಂದಿಯನ್ನು ಕರೆದ ಅರುಣ್ ಸಿಂಗ್, ಕೂಡಲೇ ಒಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಎಂದು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಪ್‍ಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿದ್ದವರಿಗೆಲ್ಲರಿಗೂ, ಇದು ನಕಲಿ ಸುದ್ದಿ ಎಂದು ಟ್ವೀಟ್ ಮಾಡುವಂತೆ ತಿಳಿಸಿದ್ದಾರೆ. ಎಲ್ಲ ನಾಯಕರೂ ಕೈಗೆ ಮೊಬೈಲ್ ತೆಗೆದುಕೊಂಡು ತಂತಮ್ಮ ಸಾಮಾಜಿಕ ಜಾಲತಾಣ ನಿರ್ವಹಣಾ ತಂಡಕ್ಕೆ ತಿಳಿಸಿ, ಇದು ನಕಲಿ ಪಟ್ಟಿ ಎನ್ನುವುದರ ಜತೆಗೆ ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ವಾಗ್ದಾಳಿಯನ್ನೂ ನಡೆಸಿದರು.
ಒಟ್ಟಿನಲ್ಲಿ, ಅತ್ಯಂತ ಗಂಭೀರವಾಗಿ ನಡೆಯುತ್ತಿದ್ದ ಸಭೆಯಲ್ಲಿ ಈ ನಕಲಿ ಪಟ್ಟಿ ಸಂಪೂರ್ಣ ಸಂಚಲನ ಉಂಟುಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಇಷ್ಟು ಲೆಕ್ಕಾಚಾರದಲ್ಲಿ, ಹೇಳಿರುವ ಎಲ್ಲ ಹೆಸರುಗಳಿಗೂ ಸಮರ್ಥನೆ ಇರುವಂತೆ ಪಟ್ಟಿ ರೆಡಿ ಮಾಡಿದ್ದಾರೆ. ಹೀಗೆ ಪಟ್ಟಿ ರೆಡಿ ಮಾಡಿದಾರೆ ಎಂದರೆ ಮೊದಲಿಗೆ, ಅವರು ಬಿಜೆಪಿಯ ಟಿಕೆಟ್ ಬಿಡುಗಡೆ ಕುರಿತು ಒಳ್ಳೆಯ ಮಾಹಿತಿ ಹೊಂದಿದ್ದಾರೆ. ಜತೆಗೆ, ರಾಜ್ಯದ ಚುನಾವಣಾ ಆಗುಹೋಗುಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನೇ ಇಟ್ಟುಕೊಂಡಿದ್ದಾರೆ ಎಂದು ನಾಯಕರೇ ಮಾತನಾಡಿಕೊಂಡಿದ್ದಾರೆ. ಇದರ ಮೂಲ ಯಾವುದಿರಬಹುದೆಂದು ಪತ್ತೆ ಹಚ್ಚಲೂ ತಿಳಿಸಿದ್ದಾರೆ ಎನ್ನಲಾಗಿದೆ.