Site icon Vistara News

BJP Karnataka: ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ?: ರೇಸ್‌ನಲ್ಲಿ ಐವರು; ಭಾನುವಾರ ಶಾಸಕಾಂಗ ಪಕ್ಷದ ಸಭೆ

BJP Meeting 1

#image_title

ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿರುವ ರಾಜ್ಯ ಬಿಜೆಪಿ (BJP Karnataka) ಕೊನೆಗೂ ಇದಕ್ಕೊಂದು ಮುಹೂರ್ತ ನಿಗದಿಪಡಿಸಿದೆ.

ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಭಾನುವಾರ ಆಯೋಜಿಸಿದ್ದಾರೆ. ಸದ್ಯ ಜಯಗಳಿಸಿರುವ 66 ಶಾಸಕರನ್ನು ಆಹ್ವಾನಿಸಲಾಗಿದೆ.

ಸದ್ಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅನುಭವಿಯನ್ನೇ ಆಯ್ಕೆ ಮಾಡಬೇಕು ಎಂಬ ಮಾತಿದೆ. ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಎದುರಿಸಲು ಅನುಭವಿ ಹಾಗೂ ಹೆಚ್ಚಿನ ತಿಳುವಳಿಕೆ ಇರುವವರಾಗಬೇಕು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ. ವರಿಷ್ಠರೂ, ಬೊಮ್ಮಾಯಿ ಅವರಿಗೆ ಹೆಚ್ಚಿನ ಮನ್ನಣೆ ನೀಡುತ್ತಾರೆ ಎಂಬ ಮಾತುಗಳಿವೆ.

ಬೊಮ್ಮಾಯಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಮುನ್ಸೂಚನೆ ಸಿಕ್ಕ ನಡುವೆಯೇ ಸಂಸದ ಪ್ರತಾಪ್‌ ಸಿಂಹ ಮಾತನಾಡಿದ್ದರು. ಈ ಹಿಂದೆ ಸಿಎಂ ಆಗಿದ್ದಾಗ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡಿದ್ದರು ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದರ ನಂತರ ಈ ಕಡೆ ಬಿ.ಎಸ್‌. ಯಡಿಯೂರಪ್ಪ ಪರವಾಗಿಯೂ, ಅವರ ವಿರುದ್ಧವಾಗಿ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿದ್ದರು.

ಪರಸ್ಪರರ ವಿರುದ್ಧ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಆರೋಪ ಹೊರಿಸಿಕೊಂಡ ನಂತರದಲ್ಲಿ, ಯಾರೊಂದಿಗೂ ಹೊಂದಾಣಿಕೆ ಇಲ್ಲದವರನ್ನು ಆಯ್ಕೆ ಮಾಡಬೇಕು ಎಂಬ ಮಾತುಗಳು ಪಕ್ಷದಲ್ಲಿ ಜೋರಾಗಿವೆ. ಇದಕ್ಕಾಗಿ ಪ್ರತಿಪಕ್ಷ ನಾಯಕನಾಗಿ ಇನ್ನೂ ನಾಲ್ಕು ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ. ಬಸವರಾಜ ಬೊಮ್ಮಾಯಿ ಅವರ ಜತೆಗೆ ಬಸನಗೌಡ ಪಾಟೀಲ್ ಯತ್ನಾಳ್, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಆರ್. ಆಶೋಕ್ ಹಾಗೂ ಅರವಿಂದ್ ಬೆಲ್ಲದ್ ಇದ್ದಾರೆ.

ಬಸವರಾಜ ಬೊಮ್ಮಾಯಿ ಅವರಿಗೇ ಹೆಚ್ಚಿನ ಒಲವು ಇದ್ದು, ಉಳಿದ ನಾಲ್ವರಲ್ಲಿ ಯಾರಾದರೂ ಆಯ್ಕೆಯಾಗುವ ಸಾಧ್ಯತೆಯೂ ಇದೆ. ಭಾನುವಾರ ಬೆಳಗ್ಗೆ ಕಟೀಲ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಪ್ರಕ್ರಿಯೆಗೆ ವೀಕ್ಷಕರಾಗಿ ಮತ್ತೊಬ್ಬರು ನಾಯಕರು ಉಪಸ್ಥಿತರಿರಲಿದ್ದಾರೆ. ಈ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Shivamogga News : ಬಿಜೆಪಿ ಪಕ್ಷ ತತ್ವ ಸಿದ್ಧಾಂತವುಳ್ಳ ಶಿಸ್ತಿನ ಪಕ್ಷ: ಶಾಸಕ ಆರಗ ಜ್ಞಾನೇಂದ್ರ

ರಾಜ್ಯ ಅಧ್ಯಕ್ಷ ಬದಲಿಲ್ಲ?

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನೂ ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿದ್ದವು. ಆದರೆ ಸದ್ಯ ಕಟೀಲ್‌ ಅವರೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಹಾಗಾಗಿ ಸದ್ಯಕ್ಕಂತೂ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸುವ ಸಾಧ್ಯತೆಯಿಲ್ಲ ಎಂದೇ ಹೇಳಲಾಗುತ್ತಿದೆ.

Exit mobile version