ಬೆಂಗಳೂರು: ವಿಧಾನಮಂಡಲ ಅಧೀವೇRಶನ ಆರಂಭವಾದರೂ ಪ್ರತಿಪಕ್ಷ ನಾಯಕನ ಸ್ಥಾನ ಘೋಷಣೆ ಮಾಡುವಲ್ಲಿ ಬಿಜೆಪಿ (BJP Karnataka) ವಿಫಲವಾಗಿದೆ. ಈಗಾಗಲೆ ಗೊಂದಲದ ಗೂಡಾಗಿರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯೇ ನಡೆಸಲು ಆಗುತ್ತಿಲ್ಲ. ಇದೀಗ ಮೂರು ದಿನದಲ್ಲಿ ಸತತ ಎರಡನೇ ಬಾರಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ ಆಗಿದೆ.
ಪ್ರತಿಪಕ್ಷ ನಾಯಕ ಸ್ಥಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಪ್ರಮುಖ ಸ್ಥಾನ. ಅದರಲ್ಲೂ ಕೆಳಮನೆ, ಅಂದರೆ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನವನ್ನು, ಮುಖ್ಯಮಂತ್ರಿ ಹುದ್ದೆ ಜತೆಗೆ ಹೋಲಿಕೆ ಮಾಡಲಾಗುತ್ತದೆ. ಸರ್ಕಾರವು ದಾರಿ ತಪ್ಪದಂತೆ, ಜನವಿರೋಧಿಯಾಗದಂತೆ ತಡೆಯುವ ಪ್ರಮುಖ ಸ್ಥಾನ. Shadow Chief MInister ಎಂದೇ ಕರೆಯಲಾಗುವ ಪ್ರತಿಪಕ್ಷ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಲು ಬಿಜೆಪಿಗೆ ಒಂದು ತಿಂಗಳಾದರೂ ಸಾಧ್ಯವಾಗಿಲ್ಲ.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಪ್ರಮುಖವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಆರ್. ಆಶೋಕ್, ಸುನಿಲ್ ಕುಮಾರ್ ಹೆಸರು ಚಾಲ್ತಿಯಲ್ಲಿದೆ. ಇದೀಗ ಮತ್ತೊಬ್ಬ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೆಸರೂ ಮುನ್ನೆಲೆಗೆ ಬಂದಿದೆ.
ಸ್ಥಾನಕ್ಕೆ ಪೈಪೋಟಿ ಇರುವುದನ್ನು ಗಮನಿಸಿರುವ ಬಿಜೆಪಿ ವರಿಷ್ಠರು ಈಗಾಗಲೆ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಆದರೆ ಈ ಭೇಟಿ ವೇಳೆ ಯಡಿಯೂರಪ್ಪ ಅವರು ಬಯಸಿದಂತೆ ಏನೂ ಆಗಿಲ್ಲ ಎನ್ನಲಾಗಿದೆ. ಆದ್ಧರಿಂದ, ಯಡಿಯೂರಪ್ಪ ಯಾವ ಹೆಜ್ಜೆ ಇಡಲಿದ್ದಾರೆ ಎಂಬ ಕುತೂಹಲ ಇದೆ.
ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನು ಭಾನುವಾರ ನಡೆಸಲಾಗುತ್ತದೆ ಎಂದು ಬಿಜೆಪಿ ಮೊದಲಿಗೆ ಘೋಷಿಸಿತ್ತು. ಆದರೆ ಈ ವೇಳೆಗೆ ಮಧ್ಯ ಪ್ರವೇಶಿಸಿದ ಕೇಂದ್ರದ ವರಿಷ್ಠರು, ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ಇಬ್ಬರು ವೀಕ್ಷಕರನ್ನು ರಾಷ್ಡ್ರೀಯ ಬಿಜೆಪಿ ನೇಮಕ ಮಾಡಿದೆ. ವಿನೋದ್ ತಾವ್ಡೇ ಹಾಗೂ ಮನಸೂಖ್ ಮಂಡಾವಿಯಾ ಅವರನ್ನು ನೇಮಕ ಮಾಡಲಾಗಿದೆ. ಇಬ್ಬರೂ ಸೋಮವಾರ ಮದ್ಯಾಹ್ನ ಬೆಂಗಳೂರಿಗೆ ಆಗಮಿಸುವವರಿದ್ದರು ಹಾಗೂ ಸಂಜೆ 6 ಗಂಟೆಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಸಭೆ ನಡೆಸಬೇಕಿತ್ತು. ಆದರೆ ಈಗ ಮತ್ತೊಮ್ಮೆ ಶಾಸಕಾಂಗ ಪಕ್ಷ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಮೂರು ದಿನದಲ್ಲಿ ಎರಡನೇ ಬಾರಿಗೆ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ ಆಗಿದೆ. ಇದು ಈಗಾಗಲೆ ಗೊಂದಲದ ಗೂಡಾಗಿರುವ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲವನ್ನು ಉಂಟುಮಾಡಿದೆ. ಬಸವರಾಜ ಬೊಮ್ಮಾಯಿ ಅವರನ್ನೇ ವರಿಷ್ಠರು ಆಯ್ಕೆ ಮಾಡಬಹುದು ಎಂಬ ಮಾತುಗಳು ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಎಸ್. ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರುಗಳು ಬೊಮ್ಮಾಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗೇಲಿ ಮಾಡಿದ ಕಾಂಗ್ರೆಸ್
ಪ್ರತಿಪಕ್ಷ ಸ್ಥಾನಕ್ಕೆ ಆಐಕೆ ಮಾಡುವಲ್ಲಿನ ವಿಳಂಬವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಾಂಗ್ರೆಸ್ ಟೀಕೆ ಮಾಡುವುದನ್ನು ಮುಂದುವರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, dear ಬಿಜೆಪಿ, ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ!
ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ. ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ‘ಯೂ ಇಲ್ಲ! ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಕಲಾಪ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಈ ಕಪ್ಪು ಚುಕ್ಕೆಯನ್ನಿಟ್ಟಿದ್ದು ಬಿಜೆಪಿ ಎಂದಿದೆ.
ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು,
— Karnataka Congress (@INCKarnataka) July 3, 2023
ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು,
dear @BJP4Karnataka ,
ಸದನವೂ ಪ್ರಾರಂಭವಾಯ್ತು.
ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ?
ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ! pic.twitter.com/d4zQO0gzgF