ಬೆಂಗಳೂರು: ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ್ದಾರೆ.
2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಬಿಜೆಪಿಯ ಶರತ್ ಬಚ್ಚೇಗೌಡ ವಿರುದ್ಧ ಜಯಗಳಿಸಿದ್ದ ನಾಗರಾಜ್, 2019ರಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆದರೆ ಪಕ್ಷೇತರರಾಗಿ ಸ್ಪರ್ಧಿಸಿದ ಶರತ್ ಬಚ್ಚೇಗೌಡ ವಿರುದ್ಧ ಸೋಲುಂಡು ವಿಧಾನ ಪರಿಷತ್ ಮೂಲಕ ಶಾಸಕರಾಗಿದ್ದರು.
ಬಿ.ಎಸ್. ಯಡಿಯೂರಪ್ಪ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ನನ್ನ ಮಗನಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ಮಾಡಿದ್ದೇನೆ.
ಈಗ ಯಡಿಯೂರಪ್ಪ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಸಿಎಂ ಬೊಮ್ಮಾಯಿಗೂ ಮನವಿ ಮಾಡಿದ್ದೇನೆ. ಹೊಸಕೋಟೆಯಿಂದ ನನ್ನ ಮಗನಿಗೆ ಟಿಕೆಟ್ ಕೊಡ್ತಾರೆ, ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ.
ನಾನು ಎಲ್ಲೂ ಸ್ಪರ್ಧೆ ಮಾಡೋದಿಲ್ಲ, ನನ್ನ ಮಗನಿಗೆ ಟಿಕೆಟ್ ಕೊಡಿ ಗೆಲ್ಲಿಸಲಿದ್ದೇನೆ ಎಂದಿದ್ದೇನೆ. ಹೊಸಕೋಟೆಯಲ್ಲಿ ಈ ಬಾರಿ ನನ್ನ ಮಗ ಗೆಲ್ಲಲಿದ್ದಾನೆ ಎಂದರು.
ಕುರುಬ ಸಮುದಾಯಕ್ಕೆ 8 ಟಿಕೆಟ್ ನೀಡಬೇಕು ಎಂದು ಕೇಳಿದ್ದೇನೆ ಎಂದ ನಾಗರಾಜ್, ಗೆಲ್ಲುವ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದರು. ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆಯಿದೆ.
ಬಿಎಸ್‌ವೈ ನಿವಾಸಕ್ಕೆ ಮಾಜಿ ಸಚಿವ ರೋಷನ್ ಬೇಗ್ ಆಗಮಿಸಿ ಮಾತುಕತೆ ನಡೆಸಿದರು. ಶಿವಾಜಿನಗರ ಕ್ಷೇತ್ರದಿಂದ ಪುತ್ರ ರೆಹಾನ್ ಬೇಗ್‌ನನ್ನು ಕಣಕ್ಕಿಳಿಸುವ ಕಸರತ್ತು ನಡೆಸುತ್ತಿರುವ ರೋಷನ್ ಬೇಗ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: MTB Nagaraj : ಹೊಸಕೋಟೆಯಲ್ಲಿ ಕವ್ವಾಲಿ ಆಯೋಜಿಸಿದ ಸಚಿವ ಎಂಟಿಬಿ; ಗಾಯಕರ ಮೇಲೆ ಹಣ ತೂರಿ ಖುಷಿಪಟ್ಟ ಮುಖಂಡರು