ನವದೆಹಲಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನವದೆಹಲಿಯಲ್ಲಿ ಶುಕ್ರವಾರ ಸಂಜೆ ನಡೆಯಬೇಕಿದ್ದ ಪೂರ್ವಭಾವಿ ಸಭೆ ರದ್ದಾಗಿದೆ.
ಶನಿವಾರ ಸಂಜೆ ಟಿಕೆಟ್ ಆಯ್ಕೆ ಸಭೆ ನಡೆಯಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿ ಎಲ್ಲರೂ ಉಪಸ್ಥಿತರಿರಲಿದ್ದಾರೆ. ಆದರೆ ಅದಕ್ಕೂ ಮುನ್ನ, ಕರ್ನಾಟಕದ ಸದಸ್ಯರು ಒಂದು ಸಭೆ ನಡೆಸುವುದು ನಿರ್ಧಾರವಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಬಿ.ಎಲ್. ಸಂತೋಷ್, ಪ್ರಲ್ಹಾದ ಜೋಶಿ ಸೇರಿ ಅನೇಕರು ಭಾಗವಹಿಸುವ ಯೋಜನೆಯಿತ್ತು. ಇದಕ್ಕಾಗಿ ಶುಕ್ರವಾರ ಮದ್ಯಾಹ್ನವೇ ಯಡಿಯೂರಪ್ಪ ನವದೆಹಲಿಗೆ ಹೊರಟಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಸಂಜೆ ವಿಶೇಷ ವಿಮಾನದಲ್ಲಿ ತೆರಳುವವರಿದ್ದರು.
ಇದೀಗ ಪೂರ್ವಭಾವಿ ಸಭೆಯನ್ನು ರದ್ದು ಮಾಡಲಾಗಿದೆ ಎಂದು ದೆಹಲಿ ಕಚೇರಿ ಮೂಲಗಳು ತಿಳಿಸಿವೆ. ಶುಕ್ರವಾರ ತಡವಾಗಿ ನಾಯಕರು ದೆಹಲಿಗೆ ಆಗಮಿಸಲಿದ್ದು, ಶನಿವಾರ ಬೆಳಗ್ಗೆ ಪೂರ್ವಭಾವಿ ಸಭೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಿಕೆಟ್ ಆಯ್ಕೆ ಸಭೆಗೆ ತೆರಳುವ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಶನಿವಾರ ಸಂಸದೀಯ ಮಂಡಳಿ ಸಭೆ ಜರುಗಲಿದ್ದು, ದೆಹಲಿಗೆ ತೆರಳುತ್ತಿದ್ದೇನೆ. ಈಗಾಗಲೇ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹವಾಗಿದೆ. ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡು-ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು.
ಆಕಾಂಕ್ಷಿ ಮಧ್ಯೆ ಆಣೆ-ಪ್ರಮಾಣ ಮಾಡಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆಣೆ ಪ್ರಮಾಣ ಹೊಸದೇನಲ್ಲ. ಆಯಾ ಕ್ಷೇತ್ರದ ಹಂತದಲ್ಲಿ ಆಣೆ ಪ್ರಮಾಣ ನಡೆಯುತ್ತದೆ. ಅದರ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದರು. ಸಿದ್ದರಾಮಯ್ಯ ವಿರುದ್ದ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಈ ಬಗ್ಗೆ ಯಾವುದೇ ವಿಚಾರ ತೀರ್ಮಾನ ಆಗಿಲ್ಲ. ನಾಳೆ ಎಲ್ಲ ಕ್ಷೇತ್ರದ ಜತೆ ವರುಣಾ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.
ಮುಖ್ಯಮಂತ್ರಿಗಳಿಗೆ ನಟ ಸುದೀಪ್ ಬೆಂಬಲ ನೀಡಿರುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಕುಮಾರಸ್ವಾಮಿ ಹಿಂದೆ ಯಾವ ಸ್ಟಾರ್ ನಟರನ್ನು ನಿಲ್ಲಿಸಿರಲಿಲ್ವಾ..? 1996 ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದು ಮರೆತಿದ್ದಾರಾ? ನಾವೇ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೇವೆ.
ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು ಹೊಸದೇನಲ್ಲ. ಎಲ್ಲ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಇದೆ, ಹಾಗೆ ಕರ್ನಾಟಕದಲ್ಲೂ ಇದೆ. ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದರೆ ಇವರಿಗೆ ಯಾಕೆ ತಳವಳ.
ಅವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು. ಗೋಡೆ ಮೇಲಿನ ಬರಹದ ರೀತಿ ಅವರಿಗೆ ಸೋಲು ಕಾಣುತ್ತಿದೆ. ನಮಗೆ ಗೆಲುವಿನ ವಿಶ್ವಾಸ ಇದೆ, ಅವರಿಗೆ ಸೋಲಿನ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: Karnataka Election 2023: ಬೊಮ್ಮಾಯಿ, ಬಿ.ಸಿ. ಪಾಟೀಲ್, ಶ್ರೀರಾಮುಲು ಸೇರಿ ಹಲವರಿಗೆ ಬಿಜೆಪಿ ಟಿಕೆಟ್ ಫಿಕ್ಸ್