ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಬಿಜೆಪಿ (BJP Karnataka) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಶಾಸಕರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
ವಿಧಾನಸೌಧದಿಂದ ರಾಜಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ. ಸಾಮಾನ್ಯರು ಭಯ ಭೀತಿ ಇಲ್ಲದೆ ಓಡಾಡುವಂತಿಲ್ಲ. ಜೈನ ಮುನಿ ಕೊಲೆಯಾಗಿದೆ, ನಮ್ಮ ಕಾರ್ಯಕರ್ತರ ಕೊಲೆಯಾಗಿದೆ. ಜನ ಸಾಮಾನ್ಯರ ಕೊಲೆಯಾಗಿದೆ. ಇಬ್ಬರು ಟೆಕ್ಕಿಗಳ ಕೊಲೆಯಾಗಿದೆ. ಕೊಲೆ ಮಾಡಿ ಆ ವ್ಯಕ್ತಿ ತನ್ನ ಇನ್‌ಸ್ಟಾ ಗ್ರಾಂನಲ್ಲಿ ಹಾಕುತ್ತಾನೆ.
ಕೊಲೆಗಡುಕರಿಗೆ ಯಾವುದೇ ಭಯ ಇಲ್ಲ. ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವ್ಯವಹಾರ ತಡೆಯಲು ಹೋಗಿದ್ದ ಪೊಲಿಸ್ ಅಧಿಕಾರಿಯನ್ನೆ ಕೊಲೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸರ್ಕಾರದ ಮುಂದೆ ತಲೆಬಾಗಿ ಅವರ ಮುಂದೆ ನಿಂತಿದ್ದಾರೆ. ಹೀಗಾಗಿ ಕೊಲೆಗಡುಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ದಪ್ಪ ಚರ್ಮದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Murder Case: ವೇಣುಗೋಪಾಲ್ ಕೊಲೆ ಆಕಸ್ಮಿಕ ಎಂದ ಸಿಎಂ ಸಿದ್ದರಾಮಯ್ಯ: ಸರ್ಕಾರದ ಸಮರ್ಥನೆಗೆ ಬಿಜೆಪಿ ಆಕ್ರೋಶ
ಕಾನೂನು ಸುವ್ಯವಸ್ಥೆ ಕಲ್ಪಿಸಲು ಡಿಜಿ ಐಜಿಯನ್ನು ಕರೆಸಿಕೊಂಡು ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ. ಅವರು ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಮಾತನಾಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ರೀತಿಯ ಸೂಚನೆ ನೀಡುತ್ತಾರೆ ನೊಡಿಕೊಂಡು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.