ಬೆಂಗಳೂರು: ಟಿಕೆಟ್ ಘೋಷಣೆಗಳ ನಂತರ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೆ ಮಾಜಿ ಸಿಎಂ, ಮಾಜಿ ಡಿಸಿಎಂ ಸೇರಿ ಅನೇಕರು ಪಕ್ಷ ತೊರೆದಿರುವ ಬೆನ್ನಿಗೇ, ಹಾಲಿ ಸಚಿವ ಆನಂದ ಸಿಂಗ್ ಸಹೋದರಿ ರಾಣಿ ಸಂಯುಕ್ತ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ.
ವಿಜಯನಗರದಲ್ಲಿ ರಾಣಿ ಸಂಯುಕ್ತ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಹೋದರ ಆನಂದ ಸಿಂಗ್ ಬದಲಿಗೆ ತಮಗೇ ಟಿಕೆಟ್ ನೀಡಿ ಎಂದು ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯೆಯೂ ಆಗಿರುವ ರಾಣಿ ಸಂಯುಕ್ತ ಒತ್ತಡ ಹೇರಿದ್ದರು. ಆದರೆ ಆನಂದ ಸಿಂಗ್ ಟಿಕೆಟ್ ನಿರಾಕರಿಸಿ ತಮ್ಮ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ವಾರವೇ ಈ ಕುರಿತು ಸುದ್ದಿಗೋಷ್ಠಿ ನಡೆಸಿ ರಾಣಿ ಸಂಯುಕ್ತ ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ 30 ವರ್ಷದಿಂದ ಎಲೆ ಮರೆ ಕಾಯಿಯಂತೆ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇವೆ. ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲೂ ಸಾಕಷ್ಟು ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಕ್ಷೇತ್ರದ ಆಕಾಂಕ್ಷಿಗಳ ಹೆಸರಿನಲ್ಲಿ ಎಲ್ಲೂ ಇಲ್ಲದ ಸಿದ್ಧಾರ್ಥ ಸಿಂಗ್ ಹೆಸರನ್ನು ಸೇರಿಸಲಾಗಿದೆ. ಆನಂದ ಸಿಂಗ್‌ಗೆ ಟಿಕೆಟ್ ನೀಡಿದ್ದರೂ ತೊಂದರೆ ಇರಲಿಲ್ಲ, ಆದರೆ ಈ ರೀತಿ ದೋಷಪೂರಿತವಾಗಿ ಟಿಕೆಟ್ ನೀಡಲಾಗಿದೆ ಎಂದಿದ್ದರು.
ಇದೀಗ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಜೈರಾಮ್ ರಮೇಶ್ ಮತ್ತು ಎಐಸಿಸಿ ವಕ್ತಾರ ಗೌರವ್ ವಲ್ಲಬ್ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಣಿ ಸಂಯುಕ್ತ, ನಾನು ಸೇರದ ಬೇಕಾದ ಜಾಗಕ್ಕೆ ಬಂದಿದ್ದೇನೆ. ಇಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತೆ. ನನಗೆ ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆ ಆಗುತ್ತಿಲ್ಲ. ಅಲ್ಲಿ ನಾಯಕರಿಗೆ ಬೆಲೆ ಇಲ್ಲ. ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಬಂದಿದ್ದಾರೆ. ಇವತ್ತು ನಾನು ಬಂದಿದ್ದೇನೆ. ಮುಂದೆ ಹಲವರು ಬರುತ್ತಾರೆ. ಇನ್ನೇನ್ನಿದ್ದರೂ ಕಾಂಗ್ರೆಸ್ ಬಲ ಪಡಿಸುವ ಕೆಲಸ ಮಾಡ್ತೀನಿ ಎಂದರು.
ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಿಎಂ ಕಚೇರಿ ದುರುಪಯೋಗ ಆಗ್ತಿದೆ. ಚುನಾವಣಾ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಫೋನ್ ಟ್ರ್ಯಾಪ್ ಆಗ್ತಿದೆ. ಎಲ್ಲ ಸಂಸ್ಥೆಗಳು ಬಿಜೆಪಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿವೆ. ನಾವು ದೂರು ಕೊಟ್ಟರೂ ಪ್ರಯೋಜನ ಇಲ್ಲ ಅಂತ ಸುಮ್ಮನಿದ್ದೇವೆ ಎಂದರು.
ಇದನ್ನೂ ಓದಿ: Karnataka Election 2023: ಆನಂದ್, ಸಿದ್ಧಾರ್ಥ ಸಿಂಗ್‌ಗೆ ಇಲ್ಲ ನನ್ನ ಬೆಂಬಲ; ಶೀಘ್ರ ಮುಂದಿನ ನಿರ್ಧಾರ: ರಾಣಿ ಸಂಯುಕ್ತ
ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯೆ ಬಿ.ಎಲ್ ರಾಣಿ ಸಂಯುಕ್ತ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದು, ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ಮೂರನೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವಾಗಿದ್ದು, ಇದು ರಾಜ್ಯದಲ್ಲಿ ಬದದಲಾವಣೆಗೆ ಸಾಕ್ಷಿಯಾಗಿದೆ.
ಬಿಜೆಪಿಯ ಹಲವು ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು, ಮೇ 10ರಂದು ಕರ್ನಾಟಕ ರಾಜ್ಯದ ಜನ ಬದಲಾವಣೆಗಾಗಿ ಮತ ಹಾಕಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣದಿಂದ ಮುಕ್ತಿ ಪಡೆಯಲು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ.
ರಾಣಿ ಸಂಯುಕ್ತ ಅವರ ಜತೆಗೆ 18 ಇತರ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಪಕ್ಷದ ಎಲ್ಲಾ ನಾಯಕರ ಪರವಾಗಿ ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇನೆ.