ಬೆಂಗಳೂರು: ರಾಜ್ಯ ಬಿಜೆಪಿ (BJP Karnataka) ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರದಲ್ಲಿ ಅಲ್ಲೋಲ ಕಲ್ಲೋಲವಾಗುವ ಬೆಳವಣಿಗೆಗಳು ನಡೆಯುತ್ತಿದ್ದು, ಪಕ್ಷದ ಸೋಲಿಗೆ ಬಹಿರಂಗವಾಗಿ ವಿಮರ್ಶೆ ಮಾಡುವವರಿಗೆ ಈಗಾಗಲೆ ಎಚ್ಚರಿಕೆ ನೀಡಲಾಗಿದೆ. ಸತತ ಮೂರು ದಿನಗಳಿಂದಲೂ ಬಿಜೆಪಿ ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ದಾವಣಗೆರೆಯಲ್ಲಿ ಕಳೆದ ಎರಡು ದಿನದಿಂದ ವಾಗ್ದಾಳಿ ನಡೆಸುತ್ತಿದ್ದ ರೇಣುಕಾಚಾರ್ಯ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಪಕ್ಷದ ವಿಚಾರಗಳಲ್ಲಿ ಯಾರೂ ಮಾತಾಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ ನಂತರವೂ ಎಂ.ಪಿ. ರೇಣುಕಾಚಾರ್ಯ ಮಾತು ಮುಂದುವರಿಸಿದ್ದು, ನಾನು ಪಕ್ಷದ ವಿರುದ್ಧವಾಗಿ ಮಾತಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಕೆಲವು ದೌರ್ಬಲ್ಯಗಳ ಬಗ್ಗೆ ನಾನು ಮಾತಡಬೇಕಾಗುತ್ತದೆ.
ಮಾಧ್ಯಮದ ಮುಂದೆ ಮಾತಡಬಾರದು ಅಂತ ಗೊತ್ತಿದೆ. ಪಕ್ಷ ಅಧಿಕಾರವಿದ್ದ ಸಮಯದಲ್ಲಿ ಯಡಿಯೂರಪ್ಪ ಕೆಳಗೆ ಇಳಿಸುವತನಕ ಮಾತಾಡುತ್ತಾ ಇದ್ದರು. ಏಕೆ ಮಾತಾಡುತ್ತಿದ್ದಿರಿ ನೀವು? ಯಡಿಯೂರಪ್ಪ ಇಳಿಸಬೇಕು ಎಂದೇ ಮಾತಾಡುತ್ತಿದ್ದಿರ? ಅದರಿಂದ ಯಡಿಯೂರಪ್ಪಗೆ ಏನೂ ನಷ್ಟ ಆಗಿಲ್ಲ.
ಅವರನ್ನ ಕೆಳಗೆ ಇಳಿಸಿದ್ದಕ್ಕೆ ಸಮಾಧಾನ ಆಯಿತ? ಇಳಿಸಿದ ಮೇಲೂ ನಿರಂತರವಾಗಿ ಅವರ ವಿರುದ್ಧವಾಗಿ ಮಾತಾಡಿದಿರಿ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈಗ ಸ್ಥಿತಿ ಬರುತ್ತಿರಲಿಲ್ಲ. ಆರು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದಿರಿ. ಯಾವ ಕಾರಣಕ್ಕಾಗಿ ಸಚಿವ ಸ್ಥಾನ ಹಾಗೇ ಬಿಟ್ಟಿದ್ದಿರಿ? ಎಂದಿದ್ದರು.
ರಾಜ್ಯ ಬಿಜೆಪಿ ಕಚೇರಿಯನ್ನು ಕೆಲವರು ಕಾರ್ಪೊರೇಟ್ ಕಚೇರಿ ಮಾಡಿಕೊಂಡಿದ್ದಾರೆ. ಸೂಜಿ ಹಾಗೂ ದಾರದ ರೀತಿಯಲ್ಲಿ ಜೋಡಿಸುವ ಕೆಲಸವನ್ನು ರಾಜ್ಯ ಕಚೇರಿ ಮಾಡಬೇಕು ಎಂದು ಅದನ್ನು ಕಟ್ಟಲಾಗಿದೆ. ಆದರೆ ಕತ್ತರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು. ಇದೀಗ ಅದೇ ಬಿಜೆಪಿ ಕಚೇರಿ ವಿಳಾಸದಿಂದಲೇ ರೇಣುಕಾಚಾರ್ಯ ಅವರಿಗೆ ಶೋಕಾಸ್ ನೋಟಿಸ್ ಬಂದಿದೆ.
ಶಿಸ್ತು ಸಮಿತಿ ನೋಟಿಸ್
ಪದೇಪದೇ ತಿಳಿ ಹೇಳಿದರೂ ತಾವು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ಈ ನೋಟಿಸನ್ನು ನೀಡಲಾಗಿದೆ. ಈ ನೋಟಿಸ್ ತಲುಪಿದ ಒಂದು ವಾರದೊಳಗೆ ತಾವು ಲಿಖಿತ ರೂಪದಲ್ಲಿ ಉತ್ತರವನ್ನು ನೀಡಬೇಕೆಂದು ತಿಳಿಸಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: BJP Karnataka: ಬಿಜೆಪಿ ಕಚೇರಿಯಲ್ಲಿ ಕತ್ತರಿ ಹಾಕುವವರಿದ್ದಾರೆ: ವಾಗ್ದಾಳಿ ಮುಂದುವರಿಸಿದ ಹೊನ್ನಾಳಿ ರೇಣುಕಾಚಾರ್ಯ
ಸದ್ಯ ನೋಟಿಸ್‌ನಲ್ಲಿ ಉತ್ತರಿಸುವಂತೆ ಮಾತ್ರ ತಿಳಿಸಲಾಗಿದೆ. ಉತ್ತರಿಸದಿದ್ದರೆ ಯಾವುದೇ ಕ್ರಮದ ಸ್ಪಷ್ಟತೆ ನೀಡಿಲ್ಲ. ಆದರೆ ರೇಣುಕಾಚಾರ್ಯ ಪದೇಪದೇ ಹೀಗೆ ಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಘಟಕದಲ್ಲಿ ಮತ್ತಷ್ಟು ಜನರು ಮಾತಾಡುವ ಸಾಧ್ಯತೆಯಿದೆ. ಹಾಗಾಗಿ ರೇಣುಕಾಚಾರ್ಯ ಅವರನ್ನು ಆರು ವರ್ಷದವರೆಗೆ ಪಕ್ಷದಿಂದ ಅಮಾನತು ಮಾಡುವ ಅಥವಾ ಉಚ್ಛಾಟನೆ ಮಾಡುವ ನಿರ್ಧಾರವನ್ನು ಮುಂದಿನ ವಾರದಲ್ಲಿ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.