ಬೆಂಗಳೂರು: ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರಿಗೆ ಟಿಕೆಟ್ ನೀಡಿರುವುದನ್ನು ಮತ್ತು ಸೈಲೆಂಟ್ ಸುನೀಲ್‌ಗೆ ಟಿಕೆಟ್ ತಪ್ಪಿರುವುದನ್ನು ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಸೈಲೆಂಟ್ ಸುನೀಲ್ ಬೆಂಬಲಿಗರು ವಿರೋಧಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ನೂರಾರು ಕಾರ್ಯಕರ್ತರು ಹೊರಭಾಗದಲ್ಲಿ ಸಾಕಷ್ಟು ಹೊತ್ತು ಪ್ರತಿಭಟನೆ ನಡೆಸಿದರು. ನಂತರ ಬಿಜೆಪಿ ಕಚೇರಿಯೊಳಕ್ಕೇ ನುಗ್ಗಿ ಮುತ್ತಿಗೆ ಹಾಕಿದರು.
ಕಚೇರಿಯಲ್ಲೇ ಪ್ರತಿಭಟನೆ ಕುಳಿತು, ಮಲಗಿ ಅಸಮಾಧಾನ ಹೊರಹಾಕಿದರು. ಕಚೇರಿ ಸಿಬ್ಬಂದಿ ಆಗಮಿಸಿ ತಿಳಿ ಹೇಳಿದರೂ ಕೇಳಲಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಮಂಡಲ ಅಧ್ಯಕ್ಷ ಕೇಶವ್, ನಿನ್ನೆ ಪಟ್ಟಿ ಬಿಡುಗಡೆ ಆಗಿದೆ. ಬಾಸ್ಕರ್ ರಾವ್ ಅವರನ್ನ ಆಯ್ಕೆ ಮಾಡಲಾಗಿದೆ. ಪಕ್ಷ ಆಗುಹೋಗುಗಳನ್ನ ಅನುಭವಿಸಿದ್ದೇವೆ. ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಬಿಜೆಪಿ ಪಕ್ಷದ ಬಾವುಟ ಹಾರಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ.
ನಿನ್ನೆಯ ಪಟ್ಟಿಯಲ್ಲಿ ಬಂದಿರುವ ಹೆಸರು ಕೋರ್ ಕಮಿಟಿಯಿಂದ ಹೋಗಿಯೇ ಇರಲಿಲ್ಲ. ರಾಜೀನಾಮೆ ಕೊಡಲು ಬಂದಾಗ ರವಿಕುಮಾರ್ ಬರವಸೆ ನೀಡಿದ್ದಾರೆ. ಬಾಸ್ಕರ್ ರಾವ್ ಬೇಡ ಅಂತ ಪತ್ರ ನೀಡಿದ್ದೇವೆ. ರವಿಕುಮಾರ್ ಅವರಿಗೆ ಈ ಕೆಲಸ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
ನಂತರ ಮಾತನಾಡಿದ ರವಿಕುಮಾರ್, ಚಾಮರಾಜಪೇಟೆ ಅಭ್ಯರ್ಥಿ ಬಾಸ್ಕರ್ ರಾವ್ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಮಂಡಲ ಅಧ್ಯಕ್ಷರು ಹಾಗೂ ಚಾಮರಾಜಪೇಟೆ ಕಾರ್ಯಕರ್ತರಿಗೆ ಮನವಿ ಮಾಡ್ತೀನಿ, ನಿಮ್ಮ ಹಾಗೆ ನಾನೂ ಕಾರ್ಯಕರ್ತ. ನಿಮ್ಮ ಬೇಡಿಕೆ ಬಗ್ಗೆ ಬರೆದುಕೊಡಿ. ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡ್ತೀನಿ. ಕೇಂದ್ರಕ್ಕೆ ಕಳಿಸಿಕೊಡ್ತೀನಿ. ಚಾಮರಾಜಪೇಟೆ ಸದ್ಯದ ಪರಿಸ್ಥಿತಿ ಏನು ಅಂತ ವರದಿ ಕಳಿಸ್ತೀವಿ. ನಮ್ಮ ಕಾರ್ಯಕರ್ತರಾಗಿರೋದ್ರಿಂದ ನ್ಯಾಯ ಕೊಡಿಸಲೇಬೇಕಿದೆ. ಚಾಮರಾಜಪೇಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕರೆ ನೀಡಿದರು. ಸೈಲೆಂಟ್ ಸುನೀಲ್ ಬೆಂಬಲಿಗರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಈ ನಡುವೆ ಬಿಜೆಪಿ ಕಚೇರಿಗೆ ಆಗಮಿಸಿದ ಭಾಸ್ಕರ ರಾವ್, ಬಿ ಫಾರಂ ಪಡೆದು ತೆರಳಿದರು. ಇದಕ್ಕೂ ಮೊದಲು ಮಾಧ್ಯಮಗಳ ಜತೆಗೆ ಭಾಸ್ಕರ ರಾವ್ ಮಾತನಾಡಿದರು. ಚಾಮರಾಜಪೇಟೆಯಲ್ಲಿ ಟಿಕೆಟ್‌ಗಾಗಿ ರೌಡಿ ಶೀಟರ್ ವರ್ಸಸ್ ಐಪಿಎಸ್ ಸ್ಪರ್ಧೆಯೇ ಎಂಬ ಪ್ರಶ್ನೆಗೆ, ರಾಜಕೀಯ ಬೇರೆ ಪೋಲಿಸ್ ಇಲಾಖೆ ಬೇರೆ. ಪೋಲಿಸ್ ಇಲಾಖೆ ಬಿಟ್ಟು ಆಗಿದೆ. ಅದೇ ಬೇರೆ ಚಾಪ್ಟರ್, ಇದೇ ಬೇರೆ ಚಾಪ್ಟರ್.
ಸಂವಿಧಾನದ ಅಡಿಯಲ್ಲಿ ಯಾರ‍್ಯಾರಿಗೆ ಅವಕಾಶವಿದ್ಯೋ ಅವರನ್ನು ಗೌರವಿಸುವುದು ನನ್ನ ಕರ್ತವ್ಯ. ಏನು ಕೇಸ್ ಇದೆ, ಇಲ್ಲ ಅನ್ನೋದೆಲ್ಲ ಸೆಕೆಂಡರಿ. ಸಂವಿಧಾನ ಅವ್ರಿಗೆ ಒಂದು ಅವಕಾಶ ಕೊಟ್ಟಿದೆ. ಸಂವಿಧಾನದ ಅಡಿಯ ವೇದಿಕೆಯಲ್ಲಿ ಸರಿಸಮಾನರಾಗಿದ್ದೇವೆ. ಪೋಲಿಸ್ ಬ್ಯಾಗೆಜ್ ತಗೊಂಡು ರಾಜಕೀಯಕ್ಕೆ ಬಂದ್ರೆ ಸರಿಹೋಗಲ್ಲ. ಅದು ಆಲ್‌ರೆಡಿ ಕ್ಲೋಸಡ್ ಚಾಪ್ಟರ್ ಎಂದರು.
ಇದನ್ನೂ ಓದಿ: Karnataka Elections : ಚುನಾವಣೆಗೆ ರೆಡಿ ಆಗುತ್ತಿದ್ದ ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಪೊಲೀಸರ ಖಡಕ್ ಎಚ್ಚರಿಕೆ