ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋಲುಂಡ ನಂತರ ಮೌನವಾಗಿದ್ದ ಮಾಜಿ ಸಚಿವ ವಿ. ಸೋಮಣ್ಣ ಬಹಿರಂಗವಾಗಿ ಮಾತನಾಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಆಗಲು ತಾವು ಸಿದ್ಧ ಎಂದಿದ್ದಾರೆ.
ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಭೇಟಿ ಮಾಡಿ ಕೆಲ ಸಂಗತಿಗಳ ಬಗ್ಗೆ ಹೇಳಿ ಬಂದಿದ್ದೇನೆ. ನಾನು 45 ವರ್ಷ ರಾಜಕಾರಣ ಅನುಭವದ ಆಧಾರದ ಮೇಲೆ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದ್ದೇನೆ. ಪತ್ರವನ್ನು ಕೂಡ ನಾನು ಬರೆದಿದ್ದೇನೆ.
ಪಕ್ಷ ಕೊಟ್ಟ ಎಲ್ಲ ಟಾಸ್ಕ್‌ಗಳನ್ನೂ ಸ್ವೀಕಾರ ಮಾಡಿ ಅತ್ಯಂತ ಶ್ರಮ ಪಟ್ಟು ಅದನ್ನು ನಿರ್ವಹಣೆ ಮಾಡಿದ್ದೇನೆ. ಮೊನ್ನೆಯ ಚುನಾವಣೆ ಸಾಕಷ್ಟು ಹಿನ್ನಡೆ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇದೆಯಾ ಎಂದು ಕೆಲವರು ಮಾತಾಡಿಕೊಳ್ಳಬಹುದು. ಆದರೆ ನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ಎಲ್ಲರನ್ನು ನಾನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ದೊಡ್ಡವರ ರೀತಿಯಲ್ಲೇ ನಂದು ಒಂದು ತೆರೆದ ಪುಸ್ತಕ. 43 ದಿನ 50 ಡಿಗ್ರಿ ಬಿಸಲಲ್ಲಿ ಓಡಾಡಿ ಉಪ ಚುನಾವಣೆಗಳನ್ನು ಗೆಲ್ಲಿಸಿದ್ದೇನೆ.
ಪಕ್ಷದ ಬಹುತೇಕ ನಾಯಕರಿಗೆ ನಾನು ವಿನಂತಿ ಮಾಡಿದ್ದೇನೆ. ನನಗೂ ಒಂದೂವರೆ ತಿಂಗಳಿಂದ ಯಾವುದೇ ಕೆಲಸ ಇಲ್ಲ. ನನಗೂ ಒಂದು ಅವಕಾಶ ಮಾಡಿಕೊಡಿ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ. ಪಕ್ಷದ ಸಂಘಟನೆಯನ್ನು ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿಕೊಡ್ತೀನಿ ಎಂದಿದ್ದೇನೆ. ಪ್ರಧಾನಿಗಳನ್ನು ಹೊರತು ಪಡಿಸಿ, ಅಮಿತ್ ಶಾ, ಜೆ.ಪಿ. ನಡ್ಡಾ, ಬಿ. ಎಲ್. ಸಂತೋಷ್ ಸೇರಿ ಎಲ್ಲರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ.
ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಆರ್. ಅಶೋಕ್ ಕುರಿತು ಮಾತನಾಡಿದ ಸೋಮಣ್ಣ, ನಾನು ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ನನಗೆ ನೂರು ದಿನ ಕೊಡಲಿ. ನಾನೇನು ಹೇಡಿ ಅಲ್ಲ. ನಾನು ತೆಗೆದುಕೊಳ್ಳುವ ಯಾವುದೇ ಹುದ್ದೆ ಆದರೂ ಅದನ್ನು, ಚಾಲೆಂಜ್ ಆಗಿ ಪರಿಗಣಿಸುತ್ತೇನೆ. ಅಶೋಕ್ ರಾಜ್ಯಾಧ್ಯಕ್ಷ ಆದರೆ ಬೇಡ ಅಂತೀವಾ? ನಂದೆ ಒಂದು ಕಾರ್ಯವೈಖರಿ ಬೇರೆ. ನಾನು ತಗೊಂಡಿರೋ ರಿಸ್ಕ್ ಇವರು ಯಾರೂ ತಗೊಂಡಿಲ್ಲ. ಕನಕಪುರದಲ್ಲಿ ಅಶೋಕ್ ರಿಸ್ಕ್ ತಗೊಂಡಿಲ್ಲ ಎಂದು ಜನರೇ ಮಾತಾಡಿಕೊಳ್ತಿದ್ದಾರೆ. ನಾನು ಪಕ್ಷದಲ್ಲಿ ತಗೊಂಡಿರೋ ಒಂದು ಚಾಲೆಂಜನ್ನು ಇವ್ರು ಯಾವುದಾದರೂ ಒಂದು ತಗೊಂಡಿದ್ದೀರಾ ಕೇಳಿ. ನಾನು ಉಪ ಚುನಾವಣೆ ಸೇರಿ ಹಲವು ಚುನಾವಣೆ ಗಳನ್ನು ಚಾಲೆಂಜ್ ಆಗಿ ತಗೊಂಡಿದ್ದೇನೆ. ಇವರ ಎಲ್ಲರಕ್ಕಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ. ನನಗೇನು ಹುಚ್ಚು ಹಿಡಿದಿತ್ತಾ ಸಿದ್ದರಾಮಯ್ಯ ವಿರುದ್ಧ ಚುನಾವಣೆ ನಿಲ್ಲೋಕೆ ಎಂದರು.
ಇದನ್ನೂ ಓದಿ: Karnataka CM : ಸಿದ್ರಾಮಯ್ಯ ಹೈಕಮಾಂಡ್ ಕೈಗೊಂಬೆ, ಸಚಿವರ ಆಯ್ಕೆಗೂ ಅಧಿಕಾರವಿಲ್ಲ ಅಂದ ಕಟೀಲ್ ; ನೆಟ್ಟಿಗರು ಏನಂದ್ರು?
ರಾಜ್ಯಾಧ್ಯಕ್ಷ ಮಾಡಿದರೆ ಎಲ್ಲರೂ ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ, ನಾನು ರಾಜ್ಯಾಧ್ಯಕ್ಷ ಆಗೋದಕ್ಕೆ ಯಡಿಯೂರಪ್ಪ ನವ್ರು ಒಪ್ಕೊಬೇಕು, ಬೇರೆಯವರು ಒಪ್ಕೊಬೇಕು. ಯಾಕೆ ನಾವು ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಿಲ್ವಾ..? ಚುನಾವಣೆ ಮುಗಿದ ನಂತರ ಒಂದು ಫೋನೂ ಕೂಡ ಅವ್ರು ಮಾಡಿಲ್ಲ ನನಗೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಯಾವ ನಾಯಕರ ಜತೆಗೂ ನಾನು ಮಾತಾಡಿಲ್ಲ. ಇವರ ಕೈಯಲ್ಲಿ ಕಿಸಯದೇ ಇರುವ ಕೆಲಸ ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನ ಸರ್ವೀಸನ್ನು ಉಪಯೋಗಿಸಿ, ಆದರೆ ಕಡೆಗಣಿಸಬೇಡಿ. ನಾನು ಸೋತಿರಬಹುದು, ಆದರೆ ನನಗೆ ಕೊಟ್ಟ ಟಾಸ್ಕ್‌ನಲ್ಲಿ ಸೋತಿಲ್ಲ, ಗೆದ್ದಿದ್ದೇನೆ. ಸೋಲಿನ ಬಗ್ಗೆ ಯಾರಿಗೆ ತಿಳಿಸಬೇಕೋ ಅವರಿಗೆ ನಾನು ತಿಳಿಸಿದ್ದೇನೆ. ನಾನು ನಾನೇ, ನನ್ನ ಸ್ಟೈಲೇ ಬೇರೆ ಎಂದರು.
ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿ, ಈ ನಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚೆನ್ನಾಗಿ ಹೇಳಿದ್ದಾರೆ. ನೀವು 10 ಕೆ.ಜಿ. ಅಂದಾಗ ಕೇಂದ್ರ ಸರ್ಕಾರದ ಬಗ್ಗೆ ಹೇಳೇ ಇರಲಿಲ್ಲ. 10 ಕೆಜಿ ಅಕ್ಕಿ ಕೊಡೋದು ನಿಮ್ದು, ನೀವು ಕೊಡಿ. ಇನ್ನೂ ೧೦-೧೨ ದಿನ ಆಗಲಿ, ನಾನು ಇದರ ಬಗ್ಗೆ ನಮ್ದೇ ಆದ ಭಾಷೆಯಲ್ಲಿ ಮಾತಾಡ್ತೀನಿ ಎಂದರು.