Site icon Vistara News

BJP Karnataka : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿದ್ದೆ; ಸಿಗಲ್ಲ ಎಂದು ಗೊತ್ತಾಗಿ ಹಿಂದೆ ಸರಿದೆ ಎಂದ ಶ್ರೀರಾಮುಲು

Former Minister Sriramulu

ಗದಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಸೋಲಿನ ಬಳಿಕ ಬಿಜೆಪಿಯಲ್ಲಿ (BJP Karnataka) ರಾಜ್ಯಾಧ್ಯಕ್ಷರ ಬದಲಾವಣೆ ಮಾತುಗಳು ಕೇಳಿಬಂದಿದ್ದವು. ಹಾಲಿ ಅಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಸಹ ಒಂದು ಹಂತದಲ್ಲಿ ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದರು. ಅಲ್ಲದೆ, ಈ ಹುದ್ದೆಗೆ ಬಿಜೆಪಿಯಿಂದ ಹಲವು ನಾಯಕರು ಗಾಳ ಹಾಕಿದ್ದರು. ಅವರಲ್ಲಿ ಮಾಜಿ ಸಚಿವ ಶ್ರೀರಾಮುಲು (Former Minister Sriramulu) ಸಹ ಒಬ್ಬರಾಗಿದ್ದಾರೆ. ಹೀಗಾಗಿ ಅವರು ಈ ಹುದ್ದೆಯನ್ನು ಶತಾಯಗತಾಯ ಪಡೆಯಲೇಬೇಕು ಎಂದು ಸಾಕಷ್ಟು ಪ್ರಯತ್ನವನ್ನು ಮಾಡಿದ್ದರು. ಕೊನೆಗೆ ಇದು ತನ್ನ ಕೈಗೆಟಕುವುದಿಲ್ಲ ಎಂದು ಅರಿತು ಈ ರೇಸ್‌ನಿಂದ ಅವರಾಗಿಯೇ ಹಿಂದೆ ಸರಿದಿದ್ದಾರೆ. ಇದು ಬೇರೆ ಯಾರೋ ಹೇಳಿದ ವಿಷಯವಲ್ಲ. ಖುದ್ದು ಶ್ರೀರಾಮುಲು ಅವರೇ ಮಾಧ್ಯಮದವರಿಗೆ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಪ್ರಯತ್ನಿಸಿದೆ. ಆದರೆ ಆಗಲ್ಲ ಅಂತ ಗೊತ್ತಾಗಿ ಸುಮ್ಮನಾದೆ. ನಾನು ಎಲೆಕ್ಷನ್‌ನಲ್ಲಿ ಸೋತಿದ್ದೇನಲ್ಲ. ಹೀಗಾಗಿ ಪಾರ್ಟಿಯ ಕೆಲಸ ಮಾಡಿಕೊಂಡು ಹೋದರೆ ಆಯಿತು. ಈಗ ಖಾಲಿ ಇದ್ದೇನೆ. ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ಲೋಕಸಭಾ ಚುನಾವಣೆ ಸಮಯ ಇದಾಗಿದ್ದರಿಂದ ಪಕ್ಷದ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ತಾವು ಚುನಾವಣೆ ಸೋತ ಕಾರಣಕ್ಕೇ ತಮಗೆ ಈಗ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಶ್ರೀರಾಮುಲು ಪರೋಕ್ಷವಾಗಿ ಹೇಳಿಕೆ ನೀಡಿದಂತೆ ಆಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಡಿಸಿಎಂ ಆಗಲು ಶ್ರೀರಾಮುಲು ಬಹಳವೇ ಪ್ರಯತ್ನ ಪಟ್ಟಿದ್ದರು. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಆಗಿರುವ ತಮಗೆ ಉಪ ಮುಖ್ಯಮಂತ್ರಿ ಪಟ್ಟ ಕೊಡಬೇಕು ಎಂದು ಲಾಬಿ ಮಾಡಿದ್ದರು. ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್‌ ಮನಸ್ಸು ಮಾಡಿತ್ತಾದರೂ, ಬದಲಾದ ಸನ್ನಿವೇಶದಲ್ಲಿ ಯಾರನ್ನೂ ಡಿಸಿಎಂ ಮಾಡದೇ ಇರಲು ತೀರ್ಮಾನ ಮಾಡಿತ್ತು. ತನ್ನ ನಿರ್ಧಾರವನ್ನು ಕಾಯ್ದಿರಿಸಿತ್ತು. ಹೀಗಾಗಿ ಡಿಸಿಎಂ ಆಗಿಯೇ ಬಿಡುತ್ತೇನೆ ಅಂದುಕೊಂಡಿದ್ದ ಶ್ರೀರಾಮುಲು ಆಸೆಗೆ ಬ್ರೇಕ್‌ ಬಿದ್ದಿತ್ತು.

ಈಗ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವ ಸಂಬಂಧ ಶ್ರೀರಾಮುಲು ಪ್ರಯತ್ನ ಮಾಡಿದ್ದರು. ಆದರೆ, ಹೈಕಮಾಂಡ್‌ ಮಾತ್ರ ಅದಕ್ಕೆ ಮನಸ್ಸು ಮಾಡಿಲ್ಲ. ಈ ಮೊದಲು ಮಾಜಿ ಸಚಿವ ಸಿ.ಟಿ. ರವಿ ಅವರ ಹೆಸರೂ ಕೇಳಿಬಂದಿತ್ತು. ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಮುಖರಾದ ಕೂಡಲೇ ರಾಜ್ಯಕ್ಕೆ ಬಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಆದರೆ, ಅವರನ್ನೂ ಹೈಕಮಾಂಡ್‌ ಪರಿಗಣಿಸಿದಂತೆ ಕಾಣುತ್ತಿಲ್ಲ. ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಕೇಳಿ ಬಂದಿದ್ದು, ಬಿಜೆಪಿ ಹೈಕಮಾಂಡ್‌ ತನ್ನ ನಿರ್ಣಯವನ್ನು ಇನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: Karnataka Politics : ಎಚ್‌ಡಿಕೆ ಮೊದಲು ಎನ್‌ಡಿಎನಿಂದ ಆಚೆ ಬಂದು ನನ್ನ ಬೆಂಬಲಿಸಲಿ: ಡಿಕೆಶಿ ತಿರುಗೇಟು

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರು, ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಭಾರಿ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಹಂಪಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಏನೂ ಆಗಿಯೇ ಇಲ್ಲ ಎಂಬತೆ ಇದ್ದಾರೆ. ಜನ ಗುಳೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಯಾರೇ ಅನ್ನದೇ ಸಿಎಂ ಸಂತೋಷದಿಂದ ಇದ್ದಾರೆ. ಜನ್ರ ಸಂಕಷ್ಟ ಕೇಳಬೇಕಾದ ಸಿಎಂ ಈ ರೀತಿ ಕುಣಿದರೆ ಹೇಗೆ‌? ಎಂದು ಪ್ರಶ್ನೆ ಮಾಡಿದ್ದಾರೆ. ಬೇರೆ ಪಕ್ಷದವರು ಏನಾದರೂ ಈ ರೀತಿ ಡ್ಯಾನ್ಸ್ ಮಾಡಿದ್ದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈ ಸರ್ಕಾರದ ಬಗ್ಗೆ ಏನು ಹೇಳಬೇಕು ಎಂದೇ ಗೊತ್ತಾಗುತ್ತಿಲ್ಲ ಎಂದು ಶ್ರೀರಾಮುಲು ಹೇಳಿದರು.

Exit mobile version