ಬೆಂಗಳೂರು: ರಾಜ್ಯ ಬಿಜೆಪಿಯು (BJP Karnataka) ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರದಲ್ಲಿ ಮೌನವಾಗಿರುವ ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನೂ ಖಾಲಿ ಉಳಿಸಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ, ಡಿಸಿಎಂ, ಸಚಿವ ಸಂಪುಟ ರಚನೆಯಾಗಿ ಕಾರ್ಯಾರಂಭಿಸಿದೆ. ಕೇವಲ ನಾಲ್ಕು ದಿನದಲ್ಲಿ ವಿಧಾನಸಭೆ ಅಧೀವೇಶನ ಆರಂಬವಾಗಲಿದ್ದು, ಬಿಜೆಪಿಯ ಹಗ್ಗಜಗ್ಗಾಟದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ನನೆಗುದಿಗೆ ಬಿದ್ದಿದೆ.
ವಿಧಾನಸಭೆ ಚುನಾವಣೆ ಫಲಿತಾಂಶವು ಮೇ 13ರಂದು ಹೊರಬಿದ್ದಿತ್ತು. ಬಿಜೆಪಿ 66ಕ್ಕೆ ಕುಸಿದರೆ ಕಾಂಗ್ರೆಸ್ 135 ಸ್ಥಾನ ಪಡೆದು ಅಧಿಕಾರಕ್ಕೇರಿತು. ಇತ್ತ ಬಿಜೆಪಿಯಲ್ಲಿ ಸೋಲಿನ ಹೊಣೆ ಹೊತ್ತು ಹಾಗೂ ಈಗಾಗಲೆ ಅವಧಿಯೂ ಮುಕ್ತಾಯವಾಗಿರುವುದರಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆಗೆ ಮುಂದಾಗಿದ್ದರು ಎನ್ನಲಾಗಿದೆ. ಹಾಗೂ ಇತ್ತೀಚೆಗೆ ಸ್ವತಃ ಕಟೀಲ್ ಅವರು ಹೇಳಿದಂತೆ ವರಿಷ್ಠರಿಗೆ ರಾಜೀನಾಮೆ ಪತ್ರವನ್ನೂ ನೀಡಿದ್ದಾರೆ. ಆದರೆ ಕೇಂದ್ರದಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ಅವರೇ ಮುಂದುವರಿಯುತ್ತಿದ್ದಾರೆ.
ಇತ್ತ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತೂ ಚರ್ಚೆ ನಡೆಯುತ್ತಿದೆ. ಶಾಸಕರು ಪ್ರಮಾಣವಚನ ಸ್ವೀಕರಿಸಲು ಮೂರು ದಿನ ನಡೆದ ವಿಶೇಷ ಅಧಿವೇಶನದಲ್ಲಿ ಎರಡೂ ಮನೆಗಳಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲದಂತೆ ಜರುಗಿತು. ಈ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣಗಳ ನಡುವೆ ನಡೆದಿರುವ ಹಗ್ಗಜಗ್ಗಾಟವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಯಾರನ್ನು ಆಯ್ಕೆ ಮಾಡಬೇಕು?
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಲು ಸರ್ಕಾರದ ನಡಾವಳಿಗಳ, ಪ್ರಕ್ರಿಯೆಗಳ ಅರಿವು ಇರಬೇಕು. ಹಾಗೂ ಸದನಶೂರ ಸಿಎಂ ಸಿದ್ದರಾಮಯ್ಯ ಅವರನ್ನು ಎದುರಿಸುವ ಛಾತಿ, ಧೈರ್ಯ, ಮಾತುಗಾರಿಕೆಯೂ ಬೇಕು. ಈ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆಯ್ಕೆ ಮಾಡಬೇಕು ಎಂಬ ಮಾತುಗಳು ಪಕ್ಷದ ಕಡೆಯಿಂದ ಕೇಳಿಬರುತ್ತಿದೆ ಎನ್ನಲಾಗಿದೆ. ಆದರೆ ಬಿ.ಎಸ್. ಯಡಿಯೂರಪ್ಪ ಬಣ ಮೊದಲನೆಯದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪರಿಗಣಿಸಲು ಒತ್ತಡ ಹೇರುತ್ತಿದೆ. ಬೊಮ್ಮಾಯಿ ಅವರು ಆಗದಿದ್ದರೆ ಮೊದಲ ಬಾರಿ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನೇ ಪ್ರತಿಪಕ್ಷ ನಾಯಕನನ್ನಾಗಿ ಮಾಡಲು ಮುಂದಾಗಿದೆ.
ಈಗಾಗಲೆ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಮತಗಳು ಕೈತಪ್ಪಿಹೋಗಿವೆ. ಲೋಕಸಭೆ ಚುನಾವಣೆಯಲ್ಲೂ ಇದೇ ಟ್ರೆಂಡ್ ಮುಂದುವರಿದರೆ ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕ್ಷೇತ್ರಗಳನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತದೆ. ಹಾಗೆ ಆಗದೇ ಇರಬೇಕೆಂದರೆ ವಿಜಯೇಂದ್ರ ಅವರನ್ನು ಪರಿಗಣಿಸಬೇಕು ಎನ್ನುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಆ ಸಮುದಾಯವು ಪ್ರತ್ಯೇಕ ಮೀಸಲಾತಿಗೆ ಹೋರಾಟ ನಡೆಸುತ್ತಿದೆ. ಪಂಚಮಸಾಲಿ ಸಮುದಾಯದವರನ್ನು ಪ್ರತಿಪಕ್ಷ ನಾಯಕ ಅಥವಾ ರಾಜ್ಯ ಅಧ್ಯಕ್ಷನನ್ನಾಗಿ ಮಾಡಿದರೆ ಉಳಿದ ಎಲ್ಲ ವೀರಶೈವ ಲಿಂಗಾಯತ ಸಮುದಾಯಗಳು ಮುನಿಸಿಕೊಳ್ಳುತ್ತವೆ ಎಂಬ ವಾದವನ್ನು ಯಡಿಯೂರಪ್ಪ ಬಣ ಮುಂದಿಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಜಯೇಂದ್ರ ಹೆಸರನ್ನು ರಾಜ್ಯ ಅಧ್ಯಕ್ಷ ಸ್ಥಾನಕ್ಕೂ ಬಿ.ಎಸ್. ಯಡಿಯೂರಪ್ಪ ಬಣ ಪರಿಗಣಿಸಲು ಮುಂದಾಗಿದೆ. ಬಿ.ಎಲ್. ಸಂತೋಷ್ ಹಾಗೂ ಪಕ್ಷದ ಕಡೆಯಿಂದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಸಿ.ಟಿ. ರವಿ ಅವರ ಹೆಸರು ಕೇಳಿಬರುತ್ತಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ದುರ್ಬಲ ಇಲಾಖೆಗಳನ್ನು ನೀಡಲಾಗಿತ್ತು ಎಂದು ಸಿ.ಟಿ. ರವಿ ಮುನಿಸಿಕೊಂಡಿದ್ದರು. ನಂತರ ಅವರ ರಾಜೀನಾಮೆ ಕೊಡಿಸಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಮಾಡುವಲ್ಲಿ ಬಿ.ಎಲ್. ಸಂತೋಷ್ ಅವರ ನಿರ್ಧಾರ ಇದೆ ಎನ್ನಲಾಗಿದೆ. ಆ ಸಮಯದಲ್ಲಿ ಸಚಿವ ಸ್ಥಾನವನ್ನು ʼತ್ಯಾಗʼ ಮಾಡಿದ ಕಾರಣಕ್ಕೆ ಸಿ.ಟಿ. ರವಿ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಬೇಕು. ಅದೂ ಅಲ್ಲದೆ ಈಗ ಚುನಾವಣೆಯಲ್ಲೂ ಸೋಲುಂಡಿರುವುದರಿಂದ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕೈಬಿಡುವುದಿಲ್ಲ ಎಂಬ ಸಂದೇಶ ನೀಡಿದಂತಾಗುತ್ತದೆ ಎಂಬ ವಾದವನ್ನೂ ಮುಂದಿಡಲಾಗುತ್ತಿದೆ.
ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೇಂದ್ರದ ಸಚಿವ ಪ್ರಲ್ಹಾದ ಜೋಶಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರುಗಳೂ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿವೆ. ಎದುರಾಳಿ ಬಣದ ನಾಯಕರನ್ನು ರಾಜ್ಯ ಅಧ್ಯಕ್ಷ ಅಥವಾ ಪ್ರತಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಾರದು ಎಂಬ ಕಾರಣಕ್ಕೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ.
ಈ ಹಿಂದಿನ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಅಡ್ಜಸ್ಟ್‌ಮೆಂಟ್ ರಾಜಕಾರಣದ ಆರೋಪವನ್ನು ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ ಹಾಗೂ ಸಿ.ಟಿ. ರವಿ ಮಾಡಿದ್ದಾರೆ. ಇತ್ತ ಎ.ಎಸ್. ಪಾಟೀಲ್ ನಡಹಳ್ಳಿ, ಮುರುಗೇಶ್ ನಿರಾಣಿ ಮುಂತಾದವರು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ. ಹೀಗೆ ಎರಡೂ ಬಣಗಳು ಮತ್ತೊಂದು ಬಣದ ವಿರುದ್ಧ ಆರೋಪ ಪ್ರತ್ಯಾರೋಪ ಮಾಡುತ್ತಿವೆ.
ಇದನ್ನೂ ಓದಿ: Cash for Posting: ಆಡಳಿತದಲ್ಲಿ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಎಂದ ಎಚ್.ಡಿ. ಕುಮಾರಸ್ವಾಮಿ
ಜುಲೈ 3ರಿಂದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮಾರನೆಯ ದಿನದಿಂದಲೇ ಸದನದ ಕಾರ್ಯಕಲಾಪಗಳು ಆರಂಭವಾಗಲಿವೆ. ಜುಲೈ 7ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಜೆಪಿಯಲ್ಲಿನ ನಾಯಕತ್ವ ಕೊರತೆಯು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವರದಾನವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ನಿರಂತರ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತ, ಗ್ಯಾರಂಟಿ ಯೋಜನೆಗಳ ಜಾರಿ ಕುರಿತೂ ವಾದಾಳಿ ನಡೆಸುತ್ತ ಪ್ರತಿಪಕ್ಷ ನಾಯಕರಂತೆಯೇ ವರ್ತಿಸುತ್ತಿದ್ದಾರೆ. ಇನ್ನು ನಾಲ್ಕು ದಿನದೊಳಗೆ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.