ಬೆಂಗಳೂರು: ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯವಾಗುತ್ತಿರುವ ನಡುವೆಯೇ, ಮನೆಮನೆಗೆ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಎರಡು ದಿನ ʼಮಹಾ ಪ್ರಚಾರ ಅಭಿಯಾನʼವನ್ನು ಬಿಜೆಪಿ ಹಮ್ಮಿಕೊಂಡಿದೆ.
ಮಂಗಳವಾರ ಹಾಗೂ ಬುಧವಾರ ನಡೆಯುವ ಈ ಅಭಿಯಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಸೇರಿ 98 ನಾಯಕರು ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ.
ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದು, 224 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ಭಾನುವಾರ ಎಲ್ಲ ಕ್ಷೇತ್ರಗಳಲ್ಲಿ ಮನೆಮನೆ ಭೇಟಿ ನಡೆಸಲಾಗಿದೆ. ಎಲ್ಲ ಚುನಾವಣೆಗಳಲ್ಲೂ ಮನೆ ಭೇಟಿಗೆ ಆದ್ಯತೆ ಕೊಡುತ್ತೇವೆ. ಭೂತ್ ವಿಜಯ ಸಂಕಲ್ಪದ ಅಭಿಯಾನದ ಅಂಗವಾಗಿ ಒಂದು ಸುತ್ತಿನ ಅಭಿಯಾನ ನಡೆಸಲಾಗಿದೆ. ಡಬಲ್ ಎಂಜಿನ್ ಸರ್ಕಾರದ ಸಾಧನೆ, ಯೋಜನೆಗಳನ್ನು ತಿಳಿಸಲಾಗಿತ್ತು.
ಈಗ ಅಭ್ಯರ್ಥಿಗಳ ಪರಿಚಯದ ಕಾರಣಕ್ಕೆ ಮನೆಮನೆಗೆ ಭೇಟಿ ನೀಡಲಿದ್ದೇವೆ. ವಿಶೇಷ ಮಹಾ ಪ್ರಚಾರ ಅಭಿಯಾನವನ್ನು ಏಪ್ರಿಲ್ 25 ಹಾಗೂ 26ರಂದು ರಾಜ್ಯದ ಜಿಲ್ಲೆ, ತಾಲೂಕು ಹಾಗೂ ಕೇಂದ್ರದ ನಾಯಕರುಗಳೊಂದಿಗೆ ನಡೆಸಲಾಗುತ್ತದೆ.
224ಕ್ಷೇತ್ರಗಳಲ್ಲೂ ಅಭಿಯಾನ ನಡೆಯುತ್ತದೆ. ಒಂದು ಪತ್ರಿಕಾ ಗೋಷ್ಠಿ, 98 ಕೇಂದ್ರದ ಸಚಿವರು ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಾರೆ. ರಾಜ್ಯದ 150 ಕ್ಕೂ ಹೆಚ್ಚು ನಾಯಕರಿರುತ್ತಾರೆ. ಮುಖ್ಯಮಂತ್ರಿಯಿಂದ ತಾಲೂಕು ಪಂಚಾಯಿತಿವರೆಗೆ ಇರುತ್ತಾರೆ. ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಬೆಳಗ್ಗಿನಿಂದ ಸಂಜೆವರೆಗೂ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಹೋಬಳಿ ಹಾಗೂ ತಾಲೂಕು ಕೇಂದ್ರದಲ್ಲಿ ರೋಡ್ ಶೋ ಜತೆಗೆ ಪ್ರಮುಖ ಫಲಾನುಭವಿಗಳ ಜತೆಗೆ ಸಭೆ ನಡೆಸಬೇಕು. ಅಲ್ಲಿರುವ ರಾಷ್ಟ್ರಪುರುಷರ ಪ್ರತಿಮೆಗಳಿಗೆ ಮಾಲಾರ್ಪಣೆ, ಸಣ್ಣ ಸಭೆಗಳನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ಮನಸುಖ್ ಮಂಡಾವಿಯಾ, ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವೀಸ್, ಸ್ಮೃತಿ ಇರಾನಿ, ಸಿ.ಟಿ. ರವಿ ಸೇರಿ ಅನೇಕರು ಆಗಮಿಸಲಿದ್ದಾರೆ.
ಈ ಅಭಿಯಾನದ ಮೂಲಕ ನಮ್ಮ ಸಾಧನೆಗಳನ್ನು ತಿಳಿಸುತ್ತೇವೆ. ಈ ಬಾರಿ ನಮ್ಮ ಆಯ್ಕೆಯಲ್ಲಿ, 75ಜನರು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುವವರಿದ್ದಾರೆ. ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಈಶ್ವರ ಸಿಂಗ್ ಠಾಕೂರ್ ಸೇರಿ ಅನೇಕ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ ಎಂದರು.
ಬಂಡಾಯದ ಮನವೊಲಿಕೆ ಕೆಲಸ ಆಗಿದೆ, ಇಂದು ಕೆಲವರು ನಾಮಪತ್ರ ಹಿಂಪಡೆಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಕಟೀಲ್ ಹೇಳಿದರು.
ಶೋಭಾ ಕರಂದ್ಲಾಜೆ ಮಾತನಾಡಿ, ಯೋಗಿ ಆದಿತ್ಯನಾಥ್ ಅವರ ಪ್ರವಾಸವನ್ನು ರಾಜ್ಯದ ನಾಲ್ಕು ಭಾಗದಲ್ಲಿ ಹಂಚಿದ್ದೇವೆ. ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಆಯಾ ಕ್ಷೇತ್ರದಲ್ಲಿ ಮಹಾಪುರುಷರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇವೆ. ಸಂಜೆ ರ‍್ಯಾಲಿ ನಡೆಯಲಿದೆ. ಸಾರ್ವಜನಿಕ ಸಭೆ ಕೂಡ ಆಯೋಜನೆ ಮಾಡುತ್ತೇವೆ. ಏಕಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಾ ಪ್ರಚಾರ ಅಭಿಯಾನ ನಡೆಯಲಿದೆ. ಮಠ ಮಂದಿರಗಳ ಭೇಟಿ ಇರಲಿದೆ, ದೇವಾಲಯಗಳ ಜತೆಗೆ ಚರ್ಚ್, ಮಸೀದಿ ಭೇಟಿ ನೀಡುವ ವಿಚಾರವನ್ನು ಬಿಜೆಪಿಯ ಆಯಾ ಕ್ಷೇತ್ರದ ಅಭ್ಯರ್ಥಿಗಳ ವಿವೇಚನೆಗೆ ಬಿಡಲಾಗಿದೆ ಎಂದರು.
ಇದನ್ನೂ ಓದಿ: Yogi Adityanath: ಏಪ್ರಿಲ್ 26ರಂದು ಕರಾವಳಿಯಲ್ಲಿ ಯೋಗಿ ‘ಅಲೆ’, ಅಬ್ಬರದ ಪ್ರಚಾರಕ್ಕೆ ಬಿಜೆಪಿ ಸಿದ್ಧತೆ