Site icon Vistara News

BJP Karnataka: ʼಹಿಂದು ಕಾರ್ಯಕರ್ತರʼ ರಕ್ಷಣೆಗೆ ವಕೀಲರ ಭದ್ರಕೋಟೆ: ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ!

#image_title

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹೂಡುವುದರಿಂದ ರಕ್ಷಿಸಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಮೂರು ಕಡೆಗಳಲ್ಲಿ ಒಟ್ಟು 50 ವಕೀಲರ ತಂಡವನ್ನು ಸಿದ್ಧಪಡಿಸಲಾಗಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾನೂನು ಪ್ರಕೋಷ್ಠ ಸಭೆ ಶನಿವಾರ ನಡೆದಿದೆ. ರಾಜ್ಯದ ಬೇರೆಬೇರೆ ಕಡೆಗಳಿಂದ 50 ವಕೀಲರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರರು ನಮ್ಮ ಕಾರ್ಯಕರ್ತರಿಗೆ ದಮ್ಕಿ ಹಾಕುತ್ತಿದ್ದಾರೆ, ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಸಭೆಯಲ್ಲಿ ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಅನೇಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಕಾರ್ಯಕರ್ತರಷ್ಟೆ ಅಲ್ಲದೆ, ಹಿಂದು ಪರ, ಬಿಜೆಪಿ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಳ್ಳುವವರ ವಿರುದ್ಧ ಸುಖಾಸುಮ್ಮನೆ ದೂರು ದಾಖಲಿಸಿಕೊಂಡು ರೌಡಿಶೀಟರ್‌ ಪಟ್ಟಿ ತೆರೆಯಲಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಕಾನೂನಿನ ದೌರ್ಜನ್ಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಸಭೆಯ ಕುರಿತು ಮಾಹಿತಿ ನೀಡಿದ ಸಂಸದ ತೇಜಸ್ವಿ ಸೂರ್ಯ, ಮುಂದೆ ನಮ್ಮ ಕಾರ್ಯಕರ್ತರ ಉಪಯೋಗಕ್ಕೆ ಹೆಲ್ಪ್ ಲೈನ್ ಬರಲಿದೆ. ಈ ಹೆಲ್ಪ್ ಲೈನ್ 24 ಗಂಟೆ ಕೆಲಸ ಮಾಡಲಿದೆ. ಕಾರ್ಯಕರ್ತರು ರಾಜ್ಯದ ಯಾವ ಭಾಗದಿಂದಲೂ ಪೋನ್ ಮಾಡಬಹುದು. ಕರ್ನಾಟಕದ ಮೂರು ಭಾಗದಲ್ಲಿ ಅಂದರೆ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿಯಲ್ಲಿ ವಕೀಲರ ತಂಡ ಇರಲಿದೆ.

ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವ, ಧಮಕಿ ಹಾಕುವ, ಸುಳ್ಳು ಅಪಾದನೆಗಳ ಮೂಲಕ ಕೇಸ್ ದಾಖಲಿಸುವುದು ನಮ್ಮ ಗಮನಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಇದೇ ರೀತಿ ದ್ವೇಷದ ರಾಜಕಾರಣ ಮಾಡಲಾಗಿತ್ತು. ನಮ್ಮ ಕಾರ್ಯಕರ್ತರ ಮೇಲೆ‌ ಅಂದು ರೌಡಿ ಶೀಟ್ ಓಪನ್ ಮಾಡುವ ಕೆಲಸ ಆಗಿತ್ತು.

ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಸರಿಯಾಗಿ ಕೇಸ್ ನಡೆಸದೇ ಇದ್ದಿದ್ದೂ ನಮ್ಮ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳನ್ನು ಎದುರಿಸಲು ಹೆಲ್ಪ್ ಲೈನ್ ನಂಬರ್ ಅನ್ನು ರಾಜ್ಯದಲ್ಲಿ ಘೋಷಣೆ ಮಾಡುತ್ತೇವೆ. ಗಣಪತಿ ಪೆಂಡಾಲ್‌ ಹಾಕಲೂ ಅನುಮತಿಗಾಗಿ ಕಾಯುವ ದೈನೇಸಿ ಸ್ಥಿತಿ ಬಂದಿತ್ತು. ಆ ಸ್ಥಿತಿ ಮತ್ತೆ ಬರದಂತೆ ಕೋರ್ಟ್‌ನಲ್ಲಿ ಪಿಐಎಲ್, ರಿಟ್ ಹಾಕಲು ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ವಕೀಲರ ತಂಡ ಇರಲಿದೆ ಎಂದರು.

ಇದನ್ನೂ ಓದಿ: Odisha Train Accident: ಕನ್ನಡಿಗರ ರಕ್ಷಣೆಗೆ 2013ರಲ್ಲಿದ್ದ ಸಚಿವರನ್ನೇ ನಿಯೋಜಿಸಿದ ಸಿದ್ದರಾಮಯ್ಯ: ಅಪಘಾತ ಸ್ಥಳಕ್ಕೆ ಹೊರಟ ಕರ್ನಾಟಕದ ತಂಡ

Exit mobile version