ಬೆಂಗಳೂರು: ಈ ಚುನಾವಣೆಯಲ್ಲಿ ಫೋರು ಸಿಕ್ಸು ಹೊಡೆಯೋಕೆ ಹೋಗಿ ಬೌಲ್ಡ್ ಆಗಿದ್ದೇನೆ ಎಂದು ತಿಳಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ (BJP Karnataka) ವಿ. ಸೋಮಣ್ಣ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ನೇರವಾಗಿ ದಾಳಿಗಿಳಿದಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ವಿ. ಸೋಮಣ್ಣ, ನಾನು ಈ ಚುನಾವಣೆಯಲ್ಲಿ ಫೋರ್, ಸಿಕ್ಸ್ ಹೊಡೆಯೋಕ್ಕೆ ಹೋಗಿ ಬೌಲ್ಡ್ ಆಗಿದೀನಿ. ನಾನು ಸನ್ಯಾಸಿ ಅಲ್ಲ, ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂತ ಹೇಳಿದೀನಿ. ಪಕ್ಷ ಏನು ತೀರ್ಮಾನ ಮಾಡುತ್ತೋ ನೋಡಬೇಕು. ನಾನು ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿದೀನಿ. ಎಂಥ ಸಂದರ್ಭದಲ್ಲೂ ವಿಚಲಿತ ಅಗಿಲ್ಲ.
ಪಕ್ಷ ಜವಾಬ್ದಾರಿ ಕೊಟ್ರೆ ನಿಭಾಯಿಸ್ತೇನೆ, ಕೊಡದಿದ್ರೆ ಬೇಸರ ಇಲ್ಲ, ಪಕ್ಷದ ಕೆಲಸ ಮಾಡ್ತೇನೆ. ನಾನು ಸುಮ್ಮನೆ ಕೂರೋನಲ್ಲ. ನಾನು ನಿದ್ರೆ ಮಾಡಲ್ಲ, ಇನ್ನೊಬ್ಬರಿಗೂ ನಿದ್ರೆ ಮಾಡಲು ಬಿಡಲ್ಲ. ನಾನು ಏನು ಕಳೆದುಕೊಂಡಿದ್ದೇನೋ ಅದನ್ನು ಪಡ್ಕೋತೇನೆ. ಉಪ್ಪು ಖಾರ ಏನು ಹಾಕಬೇಕೋ ಹಾಕಿಕೊಳ್ಳಿ ಎಂದರು.
ರಾಜ್ಯಾಧ್ಯಕ್ಷ ಸ್ಥಾನ ಸಿಗದೇ ಇದ್ರೆ ಲೋಕಸಭೆ ಚುನಾವಣೆಗೆ ಸೋಮಣ್ಣ ಜವಾಬ್ದಾರಿ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಸ್ಥಾನಮಾನ ಕೊಡೋದು ಬಿಡೋದು ಅವರಿಗೆ ಬಿಟ್ಡಿದ್ದು. ನನಗೆ ಮುಜುಗರ ಇಲ್ಲ. ನನಗಿಂತ ಬುದ್ದಿವಂತರು ಇದ್ದರೆ ಕೊಡ್ಲಿ. ನಾನು ನಿದ್ರೆ ಮಾಡೋನಲ್ಲ, ಬೇರೆಯವ್ರಿಗೂ ನಿದ್ರೆ ಮಾಡೋಕೂ ಬಿಡಲ್ಲ. ಹಿಂದೆ ಮುಂದೆ ಮಾತಾಡೋವ್ರ ನೀತಿ ಪಾಠ ಗೊತ್ತು. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸ್ತೇನೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಕುರಿತು ಹೇಳಿದ ನಂತರ ಹೆಚ್ಚು ಕ್ರಿಯಾಶೀಲರಾಗಿರುವ ವಿ. ಸೋಮಣ್ಣ, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾನು ಹೇಳಬೇಕಾಗಿದ್ದನ್ನ ಹೇಳಿದ್ದೇನೆ. ನನಗೆ ಇತಿಮಿತಿ ಇದೆ. ಫೋರ್ ಸಿಕ್ಸ್ ಎಲ್ಲ ಇಲ್ಲೆ ಹೊಡಿತಿನಿ ಅಂತ ಹೇಳಿದ್ದೀನಿ. ಈಗ ಬೋಲ್ಡ್ ಕೂಡ ಆಗಿದ್ದೀನಿ. ಪಕ್ಷ ಕೊಡುವ ಸಂದೇಶ ಮಾಡುತ್ತೀನಿ. ಡಬಲ್ ಸ್ಟ್ಯಾಂಡರ್ಡ್ ನನಗೆ ಇಲ್ಲ. ಎಲ್ಲ ಪಕ್ಷದಲ್ಲಿ ಕೆಲಸ ಮಾಡಿದ್ದೀನಿ. ಬಿಜೆಪಿಗೆ ಬಂದು ಎಂತೆಂತಹ ಸಂದರ್ಭದಲ್ಲೂ ಕೆಲಸ ಮಾಡಿದ್ದೇನೆ. ಪಕ್ಷ ಕೊಡುವ ಕೆಲಸ ಮಾಡಿದ್ದೇನೆ. ಈಗಲೂ ಅವಕಾಶ ಕೊಟ್ಟರೆ ಮಾಡ್ತೀನಿ, ಇಲ್ಲಾಂದ್ರೆ ಇಲ್ಲ.
ರಾಜ್ಯಾಧ್ಯಕ್ಷರ ಶ್ರಮ ಪಕ್ಷದ ಏಳಿಗೆ ಇದೆ. ಚುನಾವಣೆ ಸೋಲಿಗೆ ಕಾರಣ ಎಲ್ಲ ಪಕ್ಷದಲ್ಲಿ ಮಾತನಾಡುತ್ತಾರೆ. ನಳಿನ್ ಕುಮಾರ್ ಕಟೀಲ್, ಪಕ್ಷದ ಶ್ರಮಜೀವಿ. ಸೋಲಿನ ಹೊಣೆ ಹೊತ್ತಿದ್ದಾರೆ. ಅವರು ದೂರದೃಷ್ಟಿ ಇರುವ ವ್ಯಕ್ತಿ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ: BJP Karnataka: 100 ದಿನ ಅವಕಾಶ ಕೊಡಿ ನಾನೇನು ಅಂತ ತೋರಿಸ್ತೀನಿ: ರಾಜ್ಯ ಬಿಜೆಪಿ ಅಧ್ಯಕ್ಷರಾಗಲು ವಿ. ಸೋಮಣ್ಣ ರೆಡಿ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ಪ್ರತಿಕ್ರಿಯಿಸಿದ ವಿ. ಸೋಮಣ್ಣ, 2019ರ ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆ ವಿಚಾರ ಪ್ರಸ್ತಾಪಿಸಿದರು. ಚಿಂಚೋಳಿ ಚುನಾವಣೆಯಲ್ಲಿ ಸೋಮಣ್ಣ, ರವಿಕುಮಾರ್ ಚುನಾವಣಾ ಉಸ್ತುವಾರಿ ಆಗಿದ್ದೆವು. ಕುಂದಗೋಳಕ್ಕೆ ಯಡಿಯೂರಪ್ಪ, ಪ್ರಲ್ಹಾದ ಜೋಷಿ, ಡಿ.ವಿ. ಸದಾನಂದಗೌಡರು ಉಸ್ತುವಾರಿಗಳಾಗಿದ್ದರು. ಆಗ ಬಿಜೆಪಿ ಚಿಂಚೋಳಿ ಗೆದ್ದು, ಕುಂದಗೋಳದಲ್ಲಿ ಸೋಲು ಅನುಭವಿಸಿತ್ತು ಎಂದು, ತಮಗೂ ಪಕ್ಷ ಸಂಘಟನೆಯ ಸಾಮರ್ಥ್ಯ ಇದೆ ಎಂದು ತಿಳಿಸಿದರು.