ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ದುಡಿದ ಪ್ರಮುಖರಲ್ಲೊಬ್ಬರಾದ ದಿವಂಗತ ಅನಂತಕುಮಾರ್ ಅವರನ್ನು ಮರೆಯಲಾಗುತ್ತಿದೆ ಎಂದು ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಹತ್ತಿರವಾದಂತೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ನಾಯಕರು ಉದ್ಘಾಟಿಸುತ್ತಿದ್ದಾರೆ. ಆದರೆ ಯಾವುದೇ ಯೋಜನೆಗೆ ಅನಂತಕುಮಾರ್ ಹೆಸರನ್ನು ನಾಮಕರಣ ಮಾಡುವುದಾಗಲಿ ಮಾಡಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಪ್ರಸ್ತಾಪ ಮಾಡಿ ಕೇಂದ್ರದ ಒಪ್ಪಿಗೆ ಪಡೆದವರು ಅನಂತಕುಮಾರ್ ಆದರೂ ಆ ಕಾರ್ಯಕ್ರಮದಲ್ಲಿಯೂ ಸ್ಮರಿಸಿಲ್ಲ. ಬೆಂಗಳೂರು ಮೆಟ್ರೊ ಯೋಜನೆಗೆ ಅನಂತಕುಮಾರ್ ಕೊಡುಗೆ ಅಪಾರವಾಗಿದ್ದರೂ ಮೆಟ್ರೊ ಉದ್ಘಾಟನೆಯಾಗಲಿ ಅಥವಾ ಬೆಂಗಳೂರು ಸಂಬಂಧಿತ ಯಾವುದೇ ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರನ್ನು ಸ್ಮರಿಸಿಲ್ಲ.
ಇದನ್ನೂ ಓದಿ: Tejaswini Ananth Kumar | ತೇಜಸ್ವಿನಿ ಅನಂತಕುಮಾರ್‌ಗೆ ʼಬಸವಾತ್ಮಜೆʼ ಪ್ರಶಸ್ತಿ
ಈ ಕುರಿತು ಟ್ವೀಟ್ ಮಾಡಿರುವ ವಿಜೇತಾ ಅನಂತಕುಮಾರ್, “ಅಪ್ಪ ಅಧಿಕೃತವಾಗಿ 1987ರಲ್ಲಿ ಬಿಜೆಪಿ ಸೇರಿದರು ಹಾಗೂ ಅವರ ಅಂತಿಮ ಉಸಿರಿನವರೆಗೂ ಪಕ್ಷಕ್ಕೋಸ್ಕರ ದುಡಿದಿದ್ದಾರೆ. ಯಾವುದೇ ಯೋಜನೆಯ ಉದ್ಘಾಟನೆಯಾಗಲಿ, ರಸ್ತೆಯಾಗಲಿ, ರೈಲ್ವೆ ಮಾರ್ಗಕ್ಕಾಗಲಿ ಅವರ ಹೆಸರನ್ನು ಇರಿಸದೇ ಇರುವುದು ಕ್ಷುಲ್ಲಕವೆನಿಸುತ್ತದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುವ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಅ ಮುಗುವಿಗೆ ಬಹುಶಃ ಗೊತ್ತಿಲ್ಲ ಅನ್ಸುತ್ತೆ. ಪಕ್ಷ ಎಂದೂ ಅನಂತಕುಮಾರ ಅವರನ್ನು ಮರೆತಿಲ್ಲ. ಸದಾಕಾಲವೂ ಅವರನ್ನ ನೆನಪಿಸಿಕೊಳ್ಳುತ್ತದೆ. ತೇಜಸ್ವಿನಿ ಅವರು ಉಪಾಧ್ಯಕ್ಷರಾಗಿದ್ದಾರೆ, ಹಾಗಾಗಿ ಎಲ್ಲವೂ ಅವರಿಗೆ ಗೊತ್ತಿದೆ. ಪಕ್ಷವು ಅನಂತಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ. ಆ ಹೆಣ್ಣು ಮಗುವಿಗೆ ಗೊತ್ತಿಲ್ಲ ಅಂದ್ರೆ ನಾವು ತಿಳಿಸುತ್ತೇವೆ ಎಂದಿದ್ದಾರೆ.