Site icon Vistara News

BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ

BJP karnataka

BJP lose in karnataka

ಬೆಳಗಾವಿ/ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಜಿಲ್ಲಾ ಕಾರ್ಯಕರ್ತರ ಸಭೆಗಳು ನಡೆಯುತ್ತಿದ್ದು, ಎಲ್ಲ ಕಡೆ ಸೋಲಿನ ಅವಲೋಕನ ಆಗುತ್ತಿದೆ. ಪ್ರಮುಖವಾಗಿ ಈ ಬಾರಿ ಚುನಾವಣೆಯಲ್ಲಿ ನಾಯಕರು ಕೈಗೊಂಡ ನಿರ್ಧಾರಗಳು, ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದೆ.

ಬೆಳಗಾವಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕರು ಸೇರಿ ಎಲ್ಲರೂ ಅಧೈರ್ಯ ಆಗಿದ್ದಾರೆ. ನಮಗಿಂತ ಕಾಂಗ್ರೆಸ್ ಕೇವಲ ಹನ್ನೆರಡು ಲಕ್ಷ ವೋಟ್ ಹೆಚ್ಚು ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಆ ವೋಟ್ ತಿರುಗಿಸಿಕೊಳ್ಳಬಹುದು.

ಕೆಲವು ಜನ ಬಿಜೆಪಿ ಜತೆಗೆ ಇದ್ದು ಬಲಿಷ್ಠರಾಗಿ ನಮ್ಮವರನ್ನ ಸೋಲಿಸಿದ್ದಾರೆ. ರಾಮದುರ್ಗ, ಕಿತ್ತೂರಿನಲ್ಲಿ ಈ ರೀತಿ ನಮ್ಮವರನ್ನ ಸೋಲಿಸಿದ್ದಾರೆ. ಇಂತವರನ್ನ ಪಕ್ಷಕ್ಕೆ ತೆಗೆದುಕೊಳ್ಳಬೇಡಿ. ಅವರನ್ನ ಬಿಟ್ಟು ಚುನಾವಣೆ ಮಾಡೋಣ. ನಮ್ಮ ಜತಗೆ ಪ್ರಧಾನಿ ಮೋದಿಯವರಂತಹ ನಾಯಕರಿದ್ದಾರೆ. ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಬಹಳ ನೋವಾಗಿದೆ.

ಟಿಕೆಟ್ ಫೈನಲ್ ಆದ ಮೇಲೆ ಕೆಲವರು ವಿರೋಧ ಮಾಡುವ ಕೆಲಸ ಮಾಡಿದರು. ಒಂದೂ ಸೀಟ್‌ ಗೆಲ್ಲಿಸದವರನ್ನು ಕೋರ್ ಕಮಿಟಿಯಲ್ಲಿ ಇಟ್ಟುಕೊಳ್ಳಬೇಡಿ‌. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಕೈ ಬಿಡಿ ಎಂದು ಕಾರ್ಯಕ್ರಮದಲ್ಲಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಬೆಂಗಳೂರು ಉತ್ತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರು ಕೋಲಾಹಲ ಎಬ್ಬಿಸಿದ್ದಾರೆ. ದಾಸರಹಳ್ಳಿ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದರು. ಬೆನ್ನಿಗೆ ಚೂರಿ‌ ಹಾಕಿದವರನ್ನ ಪಕ್ಷದಿಂದ ದೂರ‌ ಇಡೋಣ. ಸಾಮಾನ್ಯ ಕಾರ್ಯಕರ್ತರಿಗೆ‌ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಎಂದು ಹೇಳಿದರು.

ಇದನ್ನೂ ಓದಿ: BJP Karnataka: ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ನೇರ ದಾಳಿ: ಹಳೆ ಕಥೆ ಬಿಚ್ಚಿಟ್ಟ ರಾಜ್ಯಾಧ್ಯಕ್ಷ ಆಕಾಂಕ್ಷಿ ವಿ. ಸೋಮಣ್ಣ

ಈ ನಡುವೆ ನೆರೆದಿದ್ದ‌ ಕಾರ್ಯಕರ್ತರು ಎದ್ದು ಆಕ್ರೋಶ ವ್ಯಕ್ತಪಡಿಸಿದರು. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ ಎಂದು ಕೂಗಿದರು. ಕಾರ್ಯಕರ್ತರು ತಪ್ಪು ಮಾಡಿದಾಗ ಕಾರ್ಯಕರ್ತರಿಗೆ ಬುದ್ದಿ ಹೇಳುತ್ತೀರ. ಆದರೆ ನಾಯಕರು ತಪ್ಪು‌ಮಾಡಿದಾಗ ಯಾಕೆ ಬುದ್ದಿ ಹೇಳಲ್ಲ? ಈ ಹಿಂದೆ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ? ಎಂದು ಪ್ರಶ್ನಿಸಿದರು.

ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುನಿರಾಜು ಪ್ರಯತ್ನಿಸಿದರೈ ಸಾಧ್ಯವಾಗಲಿಲ್ಲ. ವೇದಿಕೆಯಲ್ಲಿದ್ದ ಬಿ.ಎಸ್‌. ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿದರು. ನಾನು ಸಮಯ ಕೊಡ್ತೇನೆ. ಸಭೆ ನಂತರ ಬಂದು ನನ್ನ ಜೊತೆ ಚರ್ಚಿಸಿ.‌ ನಿಮ್ಮ ಸಮಸ್ಯೆ‌ ಬಗೆಹರಿಸ್ತೇನೆ ಎಂದರು. ಬಳಿಕ‌ ಕಾರ್ಯಕರ್ತರು ತಣ್ಣಗಾದರು.

ಬ್ಯಾಟರಾಯನಪುರದಲ್ಲಿ ಆಕ್ರೋಶ

ಬಿಜೆಪಿ ಜಿಲ್ಲಾ ಮಟ್ಟದ ಸಭೆಯಲ್ಲಿ ಬ್ಯಾಟರಾಯನಪುರ ಬಿಜೆಪಿ ಅಭ್ಯರ್ಥಿ ತಮ್ಮೇಶ್‌ಗೌಡ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಪರ ಕೆಲಸ ಮಾಡಿರುವ ಬಿಜೆಪಿಯ ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುನೀಂದ್ರ ಕುಮಾರ್ ಹೊರಗೆ ಕಳಿಸುವಂತೆ ಆಗ್ರಹ ಮಾಡಿದರು. ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಎದುರು ಆಕ್ರೋಶ ಹೊರಹಾಕಿದ ತಮ್ಮೇಶ್ ಗೌಡ, ವೇದಿಕೆಯಿಂದ ಮುನೀಂದ್ರ ಕುಮಾರ್‌ ಅವರನ್ನು ಇಳೀಸಿ ಎಂದರು. ಈ ವೇಳೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಗಮಿಸಿದರು. ಯಡಿಯೂರಪ್ಪ ಕಾಲಿಗೆ ಎರಗಿ ಬೇಸರ ಹೊರಹಾಕಿದ ತಮ್ಮೇಶ್ ಗೌಡ, ಕಾಂಗ್ರೆಸ್ ಪರ ಕೆಲಸ ಮಾಡಿದ ಮುನೀಂದ್ರ ಕುಮಾರ್ ರನ್ನ ವೇದಿಕೆ ಮೇಲೆ ಕೂರಿಸಿದ್ದಾರೆ. ಇದರಿಂದ ಬೇಸರ ಆಗಿದೆ, ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಮ್ಮೇಶ್ ಗೌಡ ಹೇಳಿದರು. ತಮ್ಮೇಶ್ ಗೌಡರನ್ನು ಸಮಾಧಾನಪಡಿಸಿದ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಕರೆತಂದರು.

Exit mobile version