ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ಯಾವುದೇ ತನಿಖೆ ಇಲ್ಲದೆ ಮರುಕ್ಷಣವೇ ʻಭಯೋತ್ಪಾದಕʼ ಎಂದು ಘೋಷಿಸಿದ್ದೇಕೆ ಎಂಬ ಪ್ರಶ್ನೆ ಎತ್ತಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಉಗ್ರನನ್ನು ಉಗ್ರ ಎನ್ನದೆ ಡಿಕೆಶಿಯವರ ಹಾಗೆ ನಮ್ಮ ಬ್ರದರ್ಸ್ ಎನ್ನಬೇಕಿತ್ತೇ ಎಂದು ಕೇಳಿರುವ ಬಿಜೆಪಿ, ಉಗ್ರಗಾಮಿಗಳೇ ಅವನು ನಮ್ಮವನು ಎಂದು ಘೋಷಿಸಿದ್ದರೂ ಡಿ.ಕೆ ಶಿವಕುಮಾರ್ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ಮುಂದಿನ ಚುನಾವಣೆಯಲ್ಲಿ “ಸ್ಫೋಟಕ್ಕೆ ಬೆಂಬಲ”, “ಸ್ಫೋಟಕ್ಕೆ ಸಮರ್ಥನೆ” ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದರೂ ಆಶ್ಚರ್ಯವಿಲ್ಲ ಎಂದು ಗೇಲಿ ಮಾಡಿದೆ. ಕೋಮುವಾದಿ ಕಾಂಗ್ರೆಸ್ ಎಂಬ ಹ್ಯಾಷ್ ಟ್ಯಾಗ್ ಹಾಕಿಕೊಂಡು ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಬಿಜೆಪಿ ನೀಡಿದ ʻಸ್ಫೋಟಕʼ ಹೇಳಿಕೆಗಳು
೧. ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು “ಭಯೋತ್ಪಾದಕ ಕೃತ್ಯ” ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದರೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲವಾಗಿದ್ದಾರೆ. ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ “ನಮ್ಮ ಬ್ರದರ್ಸ್” ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ.
೨. ಸ್ಫೋಟದ ಬಳಿಕ ಎನ್‌ಐಎ ಪ್ರಕರಣವನ್ನು ತೀವ್ರಗತಿಯಲ್ಲಿ ಪರಿಗಣಿಸಿ ಡಿಕೆಶಿ ‘ಬ್ರದರ್’ನನ್ನು ಬಂಧಿಸಿದ ನಂತರ ಉಗ್ರಗಾಮಿ ಸಂಘಟನೆಗಳು ನೇರವಾಗಿ ಬೆಂಬಲ ಘೋಷಿಸಿದ್ದೂ ಅಲ್ಲದೇ ‘ನಮ್ಮ ಹುಡುಗ ಯಶಸ್ವಿಯಾಗಿದ್ದಾನೆ’ ಎಂದು ಹೇಳಿಕೆ ನೀಡಿತ್ತು. ಹಾಗಾದರದೂ ಉಗ್ರವಾದವಲ್ಲವೇ?
ಒಂದು ಸಮುದಾಯ ನಾಲ್ಕು ಮತಗಳಿಗಾಗಿ ಇದೆಲ್ಲ ಬೇಕಾ?
೩. ಉಗ್ರಗಾಮಿಗಳೇ “ಉಗ್ರ ನಮ್ಮವನು” ಎಂದು ಅಬ್ಬರಿಸಿದರು ಡಿ.ಕೆ. ಶಿವಕುಮಾರ್ ಒಪ್ಪಿಕೊಳ್ಳದಿರುವುದು ಯಾಕಾಗಿ? ಒಂದು ಸಮುದಾಯದಿಂದ ಸಿಗೋ ನಾಲ್ಕು ಮತಗಳಿಗಾಗಿ ಉಗ್ರನನ್ನೇ ಉಗ್ರನಲ್ಲ ಎನ್ನುವ ಹಂತದಲ್ಲಿ ಕಾಂಗ್ರೆಸ್ ಇದೆ ಎಂದರೆ, ಇವರಿಗೆ ಅಧಿಕಾರ ಕೊಟ್ಟರೆ ಉಗ್ರರ ಟೆಕ್ ಪಾರ್ಕ್‌ನ್ನೇ ನಿರ್ಮಿಸಿದರೂ ಅಚ್ಚರಿಯಿಲ್ಲ.
೪. ಕಾಂಗ್ರೆಸ್ ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ್ದೆಲ್ಲವೂ ಇಂಥದ್ದೇ. ನಿಜವಾದ ಉಗ್ರರನ್ನು ಬಚ್ಚಿಟ್ಟು, ಹಿಂದೂಗಳ ಮೇಲೆಯೇ ಉಗ್ರರು ಎಂದು ಸುಳ್ಳು ಕೇಸ್ ಹಾಕುತ್ತಾ ಕುಳಿತಿದ್ದಕ್ಕೇ ಅಲ್ಲವೇ ಮುಂಬೈ ತಾಜ್ ಮೇಲೆ ಉಗ್ರರ ದಾಳಿಯಾಗಿದ್ದು? ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸವಿದ್ದಿದ್ದು?
ಭಯೋತ್ಪಾದನಾ ಸಮರ್ಥಕರ ಪಕ್ಷ
೫. ಮಂಗಳೂರು ಕುಕ್ಕರ್ ಸ್ಪೋಟವನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮದು ಭಯೋತ್ಪಾದನಾ ಸಮರ್ಥಕರ ಪಕ್ಷ ಎಂದು ಘೋಷಿಸಿಕೊಂಡಿದೆ. ಚುನಾವಣೆ ಸಮೀಪಿಸಿದಾಗ ಭಾವನಾತ್ಮಕ ಸಂಗತಿಗಳ ಹರಡುವಿಕೆ ಎನ್ನುವ ಡಿಕೆಶಿಯವರು, ದೇಶದ ಭದ್ರತೆಗೆ ಕಂಟಕ ತರುವ ಹೇಳಿಕೆ ನೀಡಿದ್ದಾರೆ.
೬. ಮಂಗಳೂರು ಕುಕ್ಕರ್ ಸ್ಫೋಟವನ್ನು ಇಡೀ ಸಮಾಜ ಖಂಡಿಸಿದೆ. ಮುಸಲ್ಮಾನ ಸಮಾಜವೂ ಅದನ್ನು ಖಂಡಿಸಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಾರೆ! ಆ ಮೂಲಕ ತಾವು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಮುನ್ಸೂಚನೆಯನ್ನು ನೀಡಿದ್ದಾರೆ.
ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್ ಕೇಸಲ್ಲೂ ಹೀಗೇ ಆಯಿತು
೭. ಸರ್ಜಿಕಲ್ ಸ್ಟ್ರೈಕನ್ನು ಅಲ್ಲಗೆಳೆದರು, ಏರ್ ಸ್ಟ್ರೈಕನ್ನು ಅಲ್ಲಗೆಳೆದರು, ಪುಲ್ವಾಮಾ ದಾಳಿಯನ್ನು ಪಾಕಿಸ್ಥಾನದಲ್ಲ ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ನಡೆದ ಬಹುತೇಕ ಭಯೋತ್ಪಾದನಾ ಘಟನೆಗಳನ್ನೂ ಸಮರ್ಥಿಸಿಕೊಂಡರು. ಕಾಂಗ್ರೆಸ್ ಏನನ್ನು ಹೇಳಲು ಹೊರಟಿದೆ? ಭಯೋತ್ಪಾದಕರನ್ನು ಭಯೋತ್ಪಾದಕರೆನ್ನಲು ಕಾಂಗ್ರೇಸಿಗೇಕೆ ಭಯ?
೮. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಉಗ್ರ ಯಾಸಿನ್ ಮಲಿಕ್‌ಗೆ ಪ್ರಧಾನಿಗಳ ಕಚೇರಿಯವರೆಗೂ ಸಂಪರ್ಕ-ಸಂಬಂಧ-ಬಾಂಧವ್ಯವಿತ್ತು. ಕಾಂಗ್ರೆಸ್ ಸರ್ಕಾರವಿಲ್ಲದಿರುವ ಈಗ ಪೊಲೀಸರು ಉಗ್ರರು ಯಾರು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ನಿರ್ಧರಿಸಬೇಕೆಂದರೆ, ಅಧಿಕಾರವಿದ್ದಾಗ ಎಷ್ಟು ಉಗ್ರರನ್ನು ಧರ್ಮ ಪ್ರಚಾರಕರನ್ನಾಗಿಸಿರಬಹುದು?
ಪ್ರಣಾಳಿಕೆಯಲ್ಲೂ ಸ್ಫೋಟಕ್ಕೆ ಬೆಂಬಲ ಇರುತ್ತಾ?
೯. ಓಲೈಕೆ ರಾಜಕಾರಣದ ಕುಳಿಗೆ ಬಿದ್ದ ಕಾಂಗ್ರೆಸಿಗೆ ಸ್ವತಃ ತಾನೇ ಕುಳಿಗೆ ಬಿದ್ದಿದೆ. ಕುಕ್ಕರ್ ಬಾಂಬ್ ಸ್ಪೋಟವನ್ನು ಸಮರ್ಥಿಸುವ ಮೂಲಕ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗ ಮಾಡಲು ಹೊರಟಿದೆ. ಮುಂದಿನ ಚುನಾವಣೆಯಲ್ಲಿ “ಸ್ಫೋಟಕ್ಕೆ ಬೆಂಬಲ”, “ಸ್ಫೋಟಕ್ಕೆ ಸಮರ್ಥನೆ” ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದರೂ ಆಶ್ಚರ್ಯವಿಲ್ಲ!
೧೦. ಉಗ್ರರನ್ನು ಉಗ್ರ ಎಂದು ಕರೆದರೆ ಬೇಸರವಾಗುವುದು ಉಗ್ರನ ತಂದೆ ತಾಯಿಗೆ ಅಥವಾ ಡಿ.ಕೆ. ಶಿವಕುಮಾರ್‌ಗೆ ಮಾತ್ರ. ಈಗ ಜನರು ನಿರ್ಧರಿಸಬೇಕಿದೆ. ಉಗ್ರರನ್ನು ಮಟ್ಟಹಾಕುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಬೇಕೋ, ಉಗ್ರರು-ರೌಡಿಗಳ ಪಾಲನೆ ಪೋಷಣೆ ಮಾಡಿ ಉಗ್ರರನ್ನು ಬ್ರದರ್ಸ್ ಎನ್ನುವ ಕಾಂಗ್ರೆಸ್ ಬೇಕೋ?
ಇದನ್ನೂ ಓದಿ | DK Shivakumar | ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಭಯೋತ್ಪಾದಕ ಅಂದಿದ್ದೇಕೆ? ಡಿಕೆಶಿ ಪ್ರಶ್ನೆಗೆ ಬಿಜೆಪಿ ಸಿಡಿಮಿಡಿ