ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರಲ್ಲಿ ಹಿಂದು ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ (Police atrocity) ಬಿಜೆಪಿ ನಾಯಕರೇ ಹೊಣೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಹೇಳಿದ್ದಾರೆ. ಅವರು ಶುಕ್ರವಾರ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿಯಾದರು. ಅವರ ಭೇಟಿಯ ವೇಳೆ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಸಣ್ಣ ಜಗಳವೂ ನಡೆದಿದೆ. ಇದುವರೆಗೆ ಭೇಟಿ ನೀಡಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಈ ಘಟನೆಯನ್ನು (Puttur incident) ಕಾಂಗ್ರೆಸ್ ತಲೆಗೆ ಕಟ್ಟಲು ಯತ್ನಿಸಿದ್ದರು. ಆದರೆ, ಮೊದಲ ಬಾರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದರ ಹಿಂದೆ ಬಿಜೆಪಿ ನಾಯಕರದೇ ಕೈವಾಡವಿದೆ ಎಂದು ಹೇಳಿದ್ದಾರೆ.
ಹಿಂದು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅರುಣ್ ಕುಮಾರ್ ಪುತ್ತಿಲ (Arun kumat puttila) ಅವರು ಪುತ್ತೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಟಿಕೆಟ್ ನೀಡದೆ ಇದ್ದಾಗ ಪಕ್ಷೇತರರಾಗಿ ನಿಂತರು. ಅವರು ತೀವ್ರ ಸ್ಪರ್ಧೆಯನ್ನು ನೀಡಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸಣ್ಣ ಅಂತರದಲ್ಲಿ ಸೋಲು ಕಂಡರು. ಆದರೆ, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಈ ನಡುವೆ, ಪುತ್ತೂರಿನಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ಹಿರಿಯ ನಾಯಕರಾದ ಡಿ.ವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಅವರೇ ಕಾರಣ ಎಂದು ಆರೋಪಿಸಿ ಎಂದು ಫ್ಲೆಕ್ಸ್ ಹಾಕಿ ಅದಕ್ಕೆ ಚಪ್ಪಲಿ ಹಾರ ತೊಡಿಸಲಾಗಿತ್ತು. ಇದು ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಈ ನಡುವೆ ಪೊಲೀಸರು ಏಳು ಮಂದಿ ಹಿಂದು ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಲ್ಲದೆ, ಅವರ ಮೇಲೆ ಅಮಾನವೀಯವಾಗಿ ಹಿಂಸೆ ನೀಡಿದ್ದರು. ಕೊನೆಗೆ ಅವರನ್ನು ಅರುಣ್ ಕುಮಾರ್ ಪುತ್ತಿಲ ಅವರು ಜಾಮೀನು ನೀಡಿ ಬಿಡಿಸಿಕೊಂಡು ಬಂದಿದ್ದರು.
ಕಳೆದ ಎರಡು ದಿನಗಳಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ಆರೆಸ್ಸೆಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇವರಲ್ಲಿ ಹೆಚ್ಚಿನವರು ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ ಕಾಂಗ್ರೆಸ್ ಸರ್ಕಾರ ಮುಂದೆ ಮಾಡಬಹುದಾದ ದೌರ್ಜನ್ಯದ ಸೂಚನೆ ಎಂದೇ ಘಟನೆಯನ್ನು ಬಿಂಬಿಸಿದ್ದರು. ಆದರೆ, ಇದು ಬಿಜೆಪಿ ನಾಯಕರ ಒತ್ತಡದಿಂದ ನಡೆದ ದೌರ್ಜನ್ಯ ಎನ್ನುವುದು ಹಿಂದು ಸಂಘಟನೆಗಳ ಕಾರ್ಯಕರ್ತರ ಆಕ್ರೋಶ.
ಇದೀಗ ಬಸನಗೌಡ ಪಾಟೀಲ್ ಅವರು ಹಿಂದು ಸಂಘಟನೆಗಳ ಕಾರ್ಯಕರ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡಂತೆ ಮಾತನಾಡಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಜೊತೆಗೆ ಮಾತುಕತೆ ನಡೆಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವರು ಬಿಜೆಪಿ ನಾಯಕರಿಂದ ಅಂತರ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.
ಯತ್ನಾಳ್ ಜೊತೆ ಆಸ್ಪತ್ರೆ ಒಳ ನುಗ್ಗಲು ಯತ್ನಿಸಿದ್ದ ಬಿಜೆಪಿ ಸ್ಥಳೀಯ ನಾಯಕರನ್ನು ಪುತ್ತಿಲ ಬೆಂಬಲಿಗರು ತಳ್ಳಿ ಹೊರ ಹಾಕಿದರೂ ಯತ್ನಾಳ್ ಮೌನ ವಹಿಸಿದ್ದರು. ಇನ್ನು ಬಿಜೆಪಿಯ ಬಹುತೇಕ ಸ್ಥಳೀಯ ಮುಖಂಡರು ಆಸ್ಪತ್ರೆಗೆ ಬಂದಿದ್ದರೂ ದೂರವೇ ಉಳಿದಿದ್ದರು. ಯುವಕರ ಆರೋಗ್ಯ ವಿಚಾರಿಸಿದ ಯತ್ನಾಳ್ ಬಳಿಕ ಮಾದ್ಯಮದ ಜೊತೆ ಮಾತನಾಡಿ ಇದು ಬಿಜೆಪಿ ಮತ್ತು ಸಂಘಟನೆ ನಡುವಿನ ಸಣ್ಣ ಭಿನ್ನಮತ. ಇದನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲಾಗುವುದು ಎಂದರು.
ಹದಿನೈದು ದಿನದಲ್ಲಿ ಇದಕ್ಕೆ ಸೂಕ್ತ ಉತ್ತರ ದೊರೆಯಲಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರೊಬ್ಬರ ತಲೆದಂಡದ ಬಗ್ಗೆ ಸೂಚ್ಯವಾಗಿ ಮಾಹಿತಿ ನೀಡುವ ಮೂಲಕ ಇದು ಯಾರ ಕೃತ್ಯ ಅನ್ನೋ ಸಂದೇಶ ನೀಡಿದರು.
ಅಮಾನವೀಯ ಕೃತ್ಯ ಖಂಡನೀಯ
ಹಿಂದು ಕಾರ್ಯಕರ್ತರ ಮೇಲಿನ ಪೊಲೀಸರ ದೌರ್ಜನ್ಯ ಅತ್ಯಂತ ಅಮಾನವೀಯ. ತಲೆ ತಗ್ಗಿಸುವಂಥ ಕೃತ್ಯ ಇದು. ಯಾವುದೇ ಆರೋಪಿಗಳನ್ನು ಮನಸೋ ಇಚ್ಛೆ ಹೊಡೆಯೋ ಅಧಿಕಾರ ಪೊಲೀಸರಿಗಿಲ್ಲ ಎಂದು ಹೇಳಿದ ಅವರು, ಈ ಭಾಗದ ಜನರಿಗೆ ಇದರ ಹಿಂದೆ ಏನಿದೆ ಅಂತ ಗೊತ್ತಿದೆ, ಆ ಆಳಕ್ಕೆ ನಾವು ಹೋಗಲ್ಲ ಎಂದರು.
ʻʻಈ ಕೃತ್ಯ ಮಾಡಿದವರು ತಾಲಿಬಾನಿಗಳಲ್ಲ, ದೇಶದ್ರೋಹಿ ಕೆಲಸ ಮಾಡಿದವರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ಆದರೆ ದೂರು ಬಂದಾಗ ತನಿಖೆ ಮಾಡಬೇಕು, ಹೊಡೆಯೋ ಅಧಿಕಾರ ಇಲ್ಲ. ಅವರು ಕೊಲೆ ಮಾಡಿಲ್ಲ, ದೇಶ ವಿರೋಧಿ ಕೆಲಸ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಬೇಕು, ಕೆಳ ಹಂತದ ಸಿಬ್ಬಂದಿ ಜೊತೆ ಡಿವೈಎಸ್ಪಿ ಮೇಲೂ ಕ್ರಮ ಆಗಬೇಕುʼʼ ಎಂದು ಯತ್ನಾಳ್ ಹೇಳಿದರು.
ಮುಂದೆ ಸವಾಲಿನ ದಿನಗಳು ಎದುರಾಗಲಿವೆ
ʻʻಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಕಾರ್ಯಕರ್ತರಿಗೆ ತುಂಬಾ ಸವಾಲಿದೆ. ಕಾಂಗ್ರೆಸ್ ಸರ್ಕಾರ ನಾಳೆಯಿಂದ ರಾಜ್ಯದಲ್ಲಿ ಬರ್ತಾ ಇದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಮಾರಣಹೋಮ ಆಗಿತ್ತು. ಇದೀಗ ಮತ್ತೆ ಅದೇ ನಾಯಕತ್ವದಲ್ಲಿ ಸರ್ಕಾರ ಬಂದಿದೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಭಯ ಮತ್ತು ಅನಾಥ ಪ್ರಜ್ಞೆ ಮೂಡುತ್ತಿದೆ. ತಾಲಿಬಾನ್ ಸರ್ಕಾರ ಬರ್ತಾ ಇದೆ ಅಂತ ಹಿಂದೂ ಕಾರ್ಯಕರ್ತರು ಭಯಭೀತರಾಗಿದ್ದಾರೆ. ಹೀಗಾಗಿ ನಮ್ಮ ಕಡೆಯಿಂದ ತಪ್ಪಾಗದಂತೆ ನಾವು ನೋಡಿಕೊಳ್ಳಬೇಕುʼʼ ಎಂದು ಹೇಳಿದ್ದಾರೆ ಯತ್ನಾಳ್.
ʻʻನಾವು ಹಿಂದೂಗಳು ಯಾರಿಗೂ ತೊಂದರೆ ಕೊಡುವವರಲ್ಲ. ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟ ಅಲ್ಲ. ನಮ್ಮ ಹೋರಾಟ ಹಿಂದುತ್ವಕ್ಕೆ. ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತು ಅಂತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ನಾವು ಅಂಥದ್ದನ್ನ ಸಹಿಸಲ್ಲʼʼ ಎಂದು ಹೇಳಿದ ಅವರು, ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಬೇರೆ ಅಲ್ಲ. ದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡೋದು ಬಿಜೆಪಿ ಕೆಲಸ ಎಂದರು.
ಪುತ್ತೂರು ಘಟನೆ ಹೈಕಮಾಂಡ್‌ಗೆ ತಲುಪಿಸುತ್ತೇನೆ
ʻʻಪುತ್ತೂರಿನ ಘಟನೆ ಘಟನೆ ಮತ್ತು ಇಲ್ಲಿನ ಕಾರ್ಯಕರ್ತರ ಭಾವನೆಯನ್ನು ಕೇಂದ್ರದ ನಾಯಕರಿಗೆ ತಿಳಿಸುತ್ತೇನೆ. ದೌರ್ಜನ್ಯಕ್ಕೆ ಒಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ನಾನು ವೈದ್ಯಕೀಯ ವೆಚ್ಚಕ್ಕೆ ಒಂದು ಲಕ್ಷ ವೈಯಕ್ತಿಕವಾಗಿ ನೀಡುತ್ತಿದ್ದೇನೆ. ಇದನ್ನು ಮುಂದುವರಿಸುವುದು ಬೇಡ ಎಂದು ನಾನು ವಿನಂತಿ ಮಾಡ್ತೇನೆ. ನಮಗೂ ನೋವಾಗಿದೆ, ಒಳಗಿನ ಸತ್ಯ ನಮಗೂ ಗೊತ್ತಾಗಿದೆ. ಆ ಸತ್ಯವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸ್ತೇನೆ. ನಾನು ಯಾವಾಗಲೂ ನಿಮ್ಮ ಜೊತೆಗೆ ಇರ್ತೇನೆʼʼ ಎಂದು ಧೈರ್ಯ ತುಂಬಿದರು.
ʻʻಈ ಘಟನೆಯಲ್ಲಿ ಹಿಂದು ಮತ್ತು ಬಿಜೆಪಿ ಕಾರ್ಯಕರ್ತರು ಅನ್ನೋ ಭಾವನೆ ಬೇಡ. ಕೆಲವೇ ದಿನಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವುದಕ್ಕೆ ತಕ್ಕಂತ ನಿರ್ಣಯವನ್ನು ಪಕ್ಷ ತೆಗೆದುಕೊಳ್ಳಲಿದೆ. ಯಾರೂ ಭಯ ಪಡೋ ಅಗತ್ಯ ಇಲ್ಲ, ಯಾರೂ ನೋವು ಪಡಬೇಡಿ. ಪಕ್ಷದಿಂದ ಆದ ನೋವನ್ನ ಸರಿಪಡಿಸುವ ಕೆಲಸವನ್ನು ಪಕ್ಷದ ಹೈಕಮಾಂಡ್ ಮಾಡಲಿದೆʼʼ ಎಂದು ಯತ್ನಾಳ್ ಹೇಳಿದರು.
ಪುತ್ತೂರಿನ ಸೋಲಿನ ಬಗ್ಗೆ ಗಮನಿಸಲಾಗಿದೆ
ʻʻಕಾರಣಾಂತರಗಳಿಂದ ಮತ್ತು ಪಕ್ಷದ ಕೆಲವು ನಿರ್ಣಯಗಳಿಂದ ಮನಸ್ಸಿಗೆ ನೋವಾಗಿರುತ್ತದೆ. ಚುನಾವಣೆ ಟಿಕೆಟ್ ವಿಚಾರದಲ್ಲಿ ಆದ ಅಸಮಾಧಾನದಿಂದ ಹೀಗಾಗಿದೆ. ಜನ ಅದಕ್ಕೂ ಗೌರವ ಕೊಡಬೇಕು, ಅರುಣ್ ಕುಮಾರ್ ಅವರಿಗೂ ಹೆಚ್ಚು ಮತ ಬಂದಿದೆ. ಅವರ ಮೇಲೆಯೂ ಗೌರವ ಇದೆ. ಇದು ಪೂರ್ತಿ ಕೇಂದ್ರದ ಗಮನಕ್ಕೆ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ರೀತಿಯಲ್ಲಿ ಸ್ಪಂದಿಸಲಿದೆ. ನಮ್ಮ ಒಳ ಜಗಳ, ವೈಯಕ್ತಿಕ ಪ್ರತಿಷ್ಠೆ ಕಾರಣಕ್ಕೆ ಪುತ್ತೂರಿನಲ್ಲಿ ಸೋಲಾಗಿದೆ ಎನ್ನುವುದನ್ನು ಗಮನಿಸಲಾಗಿದೆʼʼ ಎಂದು ಯತ್ನಾಳ್ ತಿಳಿಸಿದರು.
ಇನ್ನಾದರೂ ಸ್ವಪ್ರತಿಷ್ಠೆ ಬಿಟ್ಟು ವ್ಯವಹರಿಸಬೇಕು
ʻʻಅನ್ಯಾಯ ಆಗಿದೆ, ನಿರ್ಣಯದಿಂದ ಮನಸ್ಸಿಗೆ ನೋವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದು ಎಲ್ಲವೂ ಆಗಿ ಮುಗಿದು ಹೋಗಿದೆ. ಈಗ ಅದರ ಪರಿಣಾಮವನ್ನು ತಿಳಿದುಕೊಂಡು ಸ್ವಪ್ರತಿಷ್ಠೆ ಬಿಟ್ಟು ನೋಡಬೇಕು. ನಾನು ಪಕ್ಷದ ಪರ ಇರೋನು, ಆದರೆ ನನಗೆ ಮುಲಾಜಿಲ್ಲ. ಕಾರ್ಯಕರ್ತರು ಮತ್ತು ಹಿಂದುತ್ವದ ಪರ ನಾನು ಇರೋನುʼʼ ಎಂದು ಹೇಳಿದ ಯತ್ನಾಳ್, ನನಗೆ ಅವಕಾಶ ಕೊಟ್ಟರೆ ಪಕ್ಷವನ್ನು ಮತ್ತೆ ಪುನಶ್ಚೇತನ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : Puttur News: ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ; ಇಬ್ಬರು ಸಸ್ಪೆಂಡ್, ಡಿವೈಎಸ್‌ಪಿಗೆ ಕಡ್ಡಾಯ ರಜೆ