ಬೆಂಗಳೂರು: ನಗರದಲ್ಲಿ ರಸ್ತೆಗಳ ಅವ್ಯವಸ್ಥೆ ಹಾಗೂ ಮಳೆ ಹಾನಿ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ, ಪ್ರದಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು, ನಗರದಲ್ಲಿನ ಕಳಪೆ ಮೂಲಸೌಕರ್ಯದಿಂದ ಐಟಿ ಕಂಪನಿಗಳು ನೆರೆ ರಾಜ್ಯಗಳಿಗೆ ಹೋಗಲು ಚಿಂತಿಸುತ್ತಿವೆ ಎಂದು ಹೇಳಿರುವುದಕ್ಕೆ ಒಂದೆಡೆ ಬಿಜೆಪಿ ಮುಖಂಡ ಟೀಕಿಸಿದ್ದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು, ಮೋಹನ್ ದಾಸ್ ಪೈ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದ ಕೆಲ ಭಾಗಗಳಲ್ಲಿನ ಮಳೆ ಹಾನಿ ಮತ್ತು ಪ್ರವಾಹ ಪರಿಸ್ಥಿತಿಯಿಂದ ಐಟಿ-ಬಿಟಿ ಕಂಪನಿಗಳು ನೆರೆ ರಾಜ್ಯಗಳಿಗೆ ವಲಸೆ ಹೋಗಲು ಚಿಂತಿಸುತ್ತಿವೆ ಎಂದು ಐಟಿ ಕ್ಷೇತ್ರದ ದಿಗ್ಗಜ ಟಿ.ವಿ.ಮೋಹನ್ ದಾಸ್ ಪೈ ಅವರು, ಬ್ಲಾಕ್ ಮೇಲ್ ತರಹದ ಮಾತುಗಳನ್ನಾಡಿ, ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ | Rain News | ಬೆಂಗಳೂರಿನ ವಿವಿಧೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ, ಮಳೆ ಹಾನಿ ಪರಿಶೀಲನೆ
ಬೆಂಗಳೂರಿನ ಪ್ರವಾಹ ಪರಿಸ್ಥಿತಿಗೆ ಐಟು-ಬಿಟಿ ಕಂಪನಿಗಳೂ ಕಾರಣ ಎಂದಿರುವ ಎನ್.ಆರ್.ರಮೇಶ್, ಮೋಹನ್ ದಾಸ್ ಪೈಗೆ ಮಳೆ ಅವಾಂತರಕ್ಕೆ ನೈಜ ಕಾರಣಗಳನ್ನು ತಿಳಿಸುವ “ಬಹಿರಂಗ ಪತ್ರ” ಬರೆಯುವ ಮೂಲಕ, ನಗರದ ವಾಸ್ತವಿಕತೆಯ ಸ್ಥಿತಿಯನ್ನು ತಿಳಿಸುವ ಅಂಶಗಳನ್ನು ಉಲ್ಲೇಖಿಸಿ, ತಪ್ಪು ಮಾಹಿತಿಗಳು ಇದ್ದಲ್ಲಿ ಅಥವಾ ಆಕ್ಷೇಪಣೆಗಳು ಇದ್ದಲ್ಲಿ ಬಹಿರಂಗ ಚರ್ಚೆಗೆ ಬರಬೇಕು ಎಂದು ತಿಳಿಸಿದ್ದಾರೆ.
ಅತ್ಯಂತ ವೈಜ್ಞಾನಿಕವಾಗಿ ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿಯಿಂದ ನಿರ್ಮಾಣವಾಗಿರುವ ಬೆಂಗಳೂರು, ಉದ್ಯಮಗಳ ಆರಂಭಕ್ಕೆ ಸೂಕ್ತ ಸ್ಥಳವಾಗಿದ್ದರಿಂದ 1999ರ ಅವಧಿಯಲ್ಲಿ ನಗರದ ಮಹದೇವಪುರ ವಲಯ ಮತ್ತು ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಪ್ರಾರಂಭವಾದವು. ಇದಕ್ಕೆ ಮೃದು ಸ್ವಭಾವದ ಸ್ಥಳೀಯ ನಾಗರಿಕರ ಎಲ್ಲ ರೀತಿಯ ಸಹಕಾರಗಳು ಇವೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಐಟಿ-ಬಿಟಿ ಕಂಪನಿಗಳು 4,500 ಕಿ.ಮೀ. ಗಳಷ್ಟು ಉದ್ದದ ರಸ್ತೆಗಳಲ್ಲಿ ಭೂಗತ ಕೇಬಲ್ (ಒಎಫ್‌ಸಿ ಡಕ್ಟ್) ಅಳವಡಿಸಲು ರಸ್ತೆಗಳನ್ನು ಅಗೆದಾಗ ಸರ್ಕಾರ ಯಾವುದೇ ಶುಲ್ಕ ವಿಧಿಸಿಲ್ಲ. ಆದರೆ ಈ ಕಾಮಗಾರಿಗಳಾದ ಬಳಿಕ ಸರ್ಕಾರವೇ ರಸ್ತೆ ದುರಸ್ತಿ ಕೈಗೊಳ್ಳುತ್ತದೆ. ಇದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ.
ಇದನ್ನೂ ಓದಿ | Rain News | ಭಾರಿ ಮಳೆಗೆ ಕೊಚ್ಚಿ ಹೋದ ಯುಟಿಪಿ ಕಾಲುವೆ; 300 ಎಕರೆ ಕೃಷಿ ಜಮೀನು ಜಲಾವೃತ
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ-ಬಿಟಿ ಕಂಪನಿಗಳ ಸಂಘಟನೆಗಳಾದ ಎಲ್ಸಿಯಾ ಹಾಗೂ ಒರ್ಕಾ, ನಗರದಲ್ಲಿನ ರಸ್ತೆಗಳು, ಇನ್ನಿತರ ಕಳಪೆ ಮೂಲಸೌಕರ್ಯಗಳ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿವೆ. ಆದರೆ ನಗರದಲ್ಲಿ ಈಗಿನ ಮಳೆ ಅವಾಂತರಕ್ಕೆ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಐಟಿ-ಬಿಟಿ ಕಂಪನಿಗಳು ಕಾರಣ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಐಟಿ ಕಂಪನಿಗಳು, ಟೆಕ್ನಾಲಜಿ ಪಾರ್ಕ್‌ಗಳನ್ನು ನಿರ್ಮಿಸಲು ಕೆರೆ, ರಾಜಕಾಲುವೆಗಳ ಒತ್ತುವರಿಯಾಗಿದ್ದು, ತೆರಿಗೆ ವಂಚನೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲಾಗಿದೆ. ಕನಿಷ್ಠ 2500 ಕೋಟಿ ರೂಪಾಯಿಗಳನ್ನು ಸಾಮಾಜಿಕ ಹೊಣೆಗಾರಿಕಾ ನಿಧಿ(ಸಿಎಸ್‌ಆರ್) ಪೂರ್ಣವಾಗಿ ಬಳಸಿಕೊಳ್ಳದೇ ಕೇವಲ ಹತ್ತಾರು ಕೋಟಿ ಬಳಸಿಕೊಂಡು ಕಾರ್ಪೊರೇಟ್ ಕಂಪನಿಗಳು ಬೆಂಗಳೂರಿಗೆ ವಂಚನೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಮೋಹನ್‌ದಾಸ್ ಪೈ ಉದ್ದೇಶ ಸರಿಯಿದೆ: ಸಿಎಂ ಬೊಮ್ಮಾಯಿ
ಉದ್ಯಮಿ ಮೋಹನ್‌ದಾಸ್ ಪೈ ಅವರು ಸರ್ಕಾರವನ್ನು ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸರ್ಕಾರದ ಅನೇಕ ಕೆಲಸಗಳನ್ನು ಮೋಹನದಾಸ್ ಪೈ ಶ್ಲಾಘಿಸಿದ್ದಾರೆ. ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದೆ. ಅವರಿಗೆ ಅನುಭವವಿದೆ, ಅವರ ಸಲಹೆಯನ್ನು ಪರಿಗಣಿಸುತ್ತೇವೆ. ಸಮಸ್ಯೆಗಳು ಬಂದಾಗ ತಿಳಿಸಿದ್ದಾರೆ, ಅದನ್ನೂ ಪರಿಗಣಿಸುತ್ತೇವೆ. ಅವರ ಉದ್ದೇಶ ಒಳ್ಳೆಯದಾಗಿದೆ, ಅದನ್ನು ಸ್ವೀಕರಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಈಗಿನ ಸಮಸ್ಯೆಗಳು ಹಿಂದಿನ ಸರ್ಕಾರಗಳಿಂದ ಬಂದಿರುವ ಬಳುವಳಿ ಎಂದು ಪುನರುಚ್ಚರಿಸಿರುವ ಸಿಎಂ ಬೊಮ್ಮಾಯಿ, ಈ ಸಮಸ್ಯೆಗಳಿಂದ ವಿಮುಖವಾಗುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Bengaluru Rain | ಒತ್ತುವರಿಯಿಂದ ಮಂತ್ರಿಗಳಿಗೆ ಎಷ್ಟು ಸಿಕ್ಕಿದೆ?: ಅಧಿವೇಶನಕ್ಕೆ ವಿಷಯ ಫಿಕ್ಸ್ ಎಂದ ಸಿದ್ದರಾಮಯ್ಯ