ಬೆಂಗಳೂರು: ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರುಗಳು ಪರಸ್ಪರರ ವಿರುದ್ಧ ಹೇಳಿಕೆ ನೀಡುವುದು, ಸಿಎಂ ಬದಲಾವಣೆಗಳ ಬಗ್ಗೆ ಮಾತನಾಡುವುದರಿಂದ ರೋಸಿ ಹೋಗಿರುವ ಪಕ್ಷ, ಯಾರೂ ಸಹಿತ ಈ ಕುರಿತು ಮಾತನಾಡಬಾರದು ಎಂದು ಖಡಕ್ ಸೂಚನೆ ನೀಡಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ, ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ ಎನ್ನುವುದನ್ನು ಸ್ವತಃ ರಾಜ್ಯ ಪ್ರಭಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಸಭೆಯ ನಂತರ ಮಾತನಾಡಿದ ಅರುಣ್ ಸಿಂಗ್, ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಇವತ್ತು ಸಭೆ ನಡೆಸಲಾಗಿದೆ. ಚುನಾವಣೆ ಕುರಿತಂತೆ ನಮ್ಮ ಸಿದ್ಧತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದರು.ಸಿಎಂ ಬದಲಾವಣೆ ಪ್ರಶ್ನೆ ಹಾಸ್ಯಾಸ್ಪದ ಎಂದ ಅರುಣ್ ಸಿಂಗ್, ಈ ರೀತಿಯ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳಬಾರದು. ಬೊಮ್ಮಾಯಿ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ ಎಂದರು.
ಪಕ್ಷ, ಸರ್ಕಾರದ ಬಗ್ಗೆ ನಕಾರಾತ್ಮಕವಾಗಿ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ನಮ್ಮ ಮುಖಂಡರಿಗೆ ಸೂಚನೆ ಕೊಡಲಾಗಿದೆ. ನಾಲ್ಕು ಗೋಡೆ ಒಳಗೂ ನಕಾರಾತ್ಮಕವಾಗಿ ಮಾತಾಡಬಾರದು ಎಂದು ಸೂಚಿಸಲಾಗಿದೆ. ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಸರ್ಕಾರದ ಉತ್ತಮ ಕೆಲಸಗಳನ್ನು ಮಾಧ್ಯಮಗಳು ತೋರಿಸಬೇಕು. ಸಣ್ಣ ಸಣ್ಣ ವಿಷಯಗಳನ್ನೇ ಹಿಡಿದು ಸುದ್ದಿ ಮಾಡುವುದು ಬೇಡ ಎಂದು ಮಾಧುಸ್ವಾಮಿ, ಶ್ರೀರಾಮುಲು ಹೇಳಿಕೆಗಳ ಬಗ್ಗೆ ಕೇಳಿದ್ದಕ್ಕೆ ಅರುಣ್ ಸಿಂಗ್ ಉತ್ತರ ನೀಡಿದರು.
ಸಿದ್ದರಾಮೋತ್ಸವದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗಿಲ್ಲ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಸಂಘರ್ಷ ಇದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಂಡರು. ಸಿದ್ದರಾಮೋತ್ಸವಕ್ಕೂ ನಮಗೂ ಸಂಬಂಧ ಇಲ್ಲ. ಅವರು ವ್ಯಕ್ತಿ ಉತ್ಸವ ಮಾಡಿದ್ದಾರೆ, ನಮ್ಮ ಉದ್ದೇಶ, ಗುರಿ ಜನರ ಅಭಿವೃದ್ಧಿ. ಹಾಗಾಗಿ ನಾವು ಜನರ ಉತ್ಸವ ಮಾಡುತ್ತೇವೆ ಎಂದರು.
ಇದನ್ನೂ ಓದಿ | ಶಿವರಾಜ್ ಪಾಟೀಲ್ ಮೂರ್ಖ ಎಂದ ಕಾಂಗ್ರೆಸ್, ಅವರು ಲೆಕ್ಕಕ್ಕಿಲ್ಲ ಎಂದ ಬಿಜೆಪಿ