ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ರೌಡಿ ಶೀಟರ್ ಎಂದು ಗುರುತಿಸಲಾದ, ಇತ್ತೀಚೆಗೆ ರೌಡಿ ಶೀಟರ್‌ಗಳ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡಿದ್ದಾನೆ ಎಂದೇ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದ ಸೈಲೆಂಟ್ ಸುನಿಲ್ ಎಂಬಾತ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ಭಾಗವಹಿಸಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಜತೆಗೆ ನಾಗಮಂಗಲದಲ್ಲಿ ಫೈಟರ್ ರವಿ ಎಂಬ ಮಾಜಿ ರೌಡಿ ಅಧಿಕೃತವಾಗಿ ಬಿಜೆಪಿ ಸೇರಿರುವುದನ್ನು ಕಾಂಗ್ರೆಸ್ ಅಸ್ತ್ರವಾಗಿ (Rowdy politics) ಮಾಡಿಕೊಂಡಿದೆ.
ಚಾಮರಾಜಪೇಟೆಯಲ್ಲಿ ಭಾನುವಾರ ಅಂಬೇಡ್ಕರ್ ಕೂಲಿ ಕಾರ್ಮಿಕರ ಹಾಗು ಆಟೋ ಚಾಲಕರ ಸಂಘದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದರ ಹಿಂದೆ ನಿಂತು ಆಯೋಜನೆ ನಡೆಸಿದ್ದು ಸೈಲೆಂಟ್ ಸುನಿಲ್ ಎಂದು ಹೇಳಲಾಗಿದೆ. ಇದರಲ್ಲಿ ಸೈಲೆಂಟ್ ಸುನಿಲ್ ಜತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಹಾಗೂ ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಭಾಗವಹಿಸಿದ್ದರು.
ಕಳೆದ ನವೆಂಬರ್ ೨೩ರಂದು ಬೆಂಗಳೂರಿನ ಸಿಸಿಬಿ ಪೊಲೀಸರು ನಾನಾ ರೌಡಿಗಳ ಮನೆ ಮೇಲೆ ಮುಂಜಾನೆ ದಾಳಿ ನಡೆಸಿದ್ದರು. ಇದರಲ್ಲಿ ೨೬ ಮಂದಿಯನ್ನು ಬಂಧಿಸಲಾಗಿತ್ತು. ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ರೌಡಿಗಳ ಹೆಸರಿನ ಪಟ್ಟಿಯಲ್ಲಿ ಸೈಲೆಂಟ್ ಸುನಿಲ್ ಹೆಸರನ್ನೂ ಇಲಾಖೆ ಉಲ್ಲೇಖಿಸಿತ್ತು.
ಪೊಲೀಸರೇ ತಲೆಮರೆಸಿಕೊಂಡಿದ್ದಾನೆ ಎಂದು ಗುರುತಿಸಿದ ವ್ಯಕ್ತಿಗೆ ಪೊಲೀಸರೇ ಭದ್ರತೆ ನೀಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಅವನು ಪೊಲೀಸರ ಬಂಧನಕ್ಕೆ ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳುವುದೇನು?
ಸೈಲೆಂಟ್ ಸುನಿಲ್ ಮೇಲೆ ಸದಸ್ಯ ಯಾವುದೇ ವಾರಂಟ್ ಇರಲಿಲ್ಲ. ಆದರೆ, ಇದರ ಬಗ್ಗೆ ವಿಚಾರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಪೊಲೀಸರು ಸುನೀಲನನ್ನು ಎಸ್ಕಾರ್ಟ್ ಮೂಲಕ ಕರೆದುಕೊಂಡು ಹೋಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿಯೂ ತನಿಖೆ ಮಾಡಲು ಸೂಚನೆ ನೀಡಲಾಗಿದೆ. ರೌಡಿಶೀಟರ್ ಗಳ ಬಗ್ಗೆ ಈ ವರ್ಷ ಸಾಕಷ್ಟು ಕ್ರಮ ಜರುಗಿಸಿದ್ದೇವೆ. ಈಗ ಸುನೀಲನನ್ನು ಕರೆಸಿ ಮಾಹಿತಿ ಪಡೆಯುವಂತೆ ಸಿಸಿಬಿಗೂ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ನಾನು ಹೋದಾಗ ಅವರ್ಯಾರೂ ಇರಲಿಲ್ಲ ಎಂದ ಉದಯ ಗರುಡಾಚಾರ್
ರಕ್ತದಾನ ಶಿಬಿರ ಒಳ್ಳೆಯ ಕಾರ್ಯಕ್ರಮ. ಒಳ್ಳೆಯ ಕಾರ್ಯಕ್ರಮ ಎಂಬ ಕಾರಣಕ್ಕಾಗಿಯೇ ಹೋಗಿದ್ದೆ. ನಾನು ಹೋದಾಗ ಅವರ್ಯಾರೂ ಇರಲಿಲ್ಲ ಎಂದು ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಹೇಳಿದ್ದಾರೆ.
ʻʻಸುನೀಲನ ಕಾರ್ಯಕ್ರಮ ಅಂತ ಹೋಗಿರ್ಲಿಲ್ಲ. ನನಗೆ ಸುನೀಲ ಗೊತ್ತು. ಆದರೆ ಅವರು ಸೈಲೆಂಟ್ ಸುನೀಲ ಅಂತ ಗೊತ್ತಿಲ್ಲ. ಅವರು ಸೈಲೆಂಟ್ ಸುನೀಲ, ರೌಡಿ ಶೀಟರ್ ಅಂತ ಗೊತ್ತಿಲ್ಲ. ಸುನೀಲ ನನ್ನ ಸ್ನೇಹಿತರು, ಬಹಳ ಸ್ನೇಹ ಇಲ್ಲ. ಬ್ಯಾಕ್‌ಗ್ರೌಂಡ್ ಗೊತ್ತಿಲ್ಲ. ನಾನೊಬ್ಬ ಶಾಸಕ, ನಮ್ಮನ್ನು ಒಳ್ಳೆಯ ಕಾರ್ಯಕ್ರಮಕ್ಕೆ ಕರೆದಾಗ ಹೋಗ್ತೀವಿ. ಅವರು ಬಿಜೆಪಿ ಗೆ ಬರೋ ಬಗ್ಗೆ ನನಗೆ ಗೊತ್ತಿಲ್ಲʼʼ ಎಂದಿರುವ ಉದಯ ಗರುಡಾಚಾರ್, ನಾನು ಅವರನ್ನು ಕಾರ್ಯಕ್ರಮದ ಬಳಿಕ ಡ್ರಾಪ್ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸೈಲೆಂಟ್ ಸುನಿಲ್ ಹೇಳುವುದೇನು?
ʻʻನಾನು ಜನರಿಗೆ ಸಹಾಯ ವಾಗಲು ಸಮಾಜಸೇವೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಬೆಂಗಳೂರಿನಾದ್ಯಂತ ಹೀಗೆ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಮುಂದೆ ರಾಜಕೀಯ ಪ್ರವೇಶಿಸುವ ಇಚ್ಛೆಯೂ ಇದೆ. ಈ ಬಗ್ಗೆ ಇವಾಗ ಹೆಚ್ಚು ಮಾತಾಡಲ್ಲ. ರಾಜಕೀಯಕ್ಕೆ ಪ್ರವೇಶ ಸಂಬಂಧ ಮುಂದೆ ಸೂಕ್ತ ನಿರ್ಧಾರ ತಿಳಿಸುತ್ತೇನೆʼʼ ಎಂದು ಸೈಲೆಂಟ್ ಸುನಿಲ್ ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಟ್ವೀಟ್ ತರಾಟೆ
ಈ ನಡುವೆ ರೌಡಿಗಳ ಜತೆ ಬಿಜೆಪಿ ಸಖ್ಯ ಮತ್ತು ಮಾಜಿ ರೌಡಿಯೊಬ್ಬರ ಸೇರ್ಪಡೆಯನ್ನು ಕಾಂಗ್ರೆಸ್ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದೆ. ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್‌ನ ಟ್ವೀಟ್‌ಗಳಿವು
೧. ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್! ಆರಗ ಜ್ಞಾನೇಂದ್ರ ಅವರೇ ಸೈಲೆಂಟ್ ಸುನಿಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರೀರಲಿಲ್ಲವೇ? ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು?
ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ?
೨. ಕ್ರಿಮಿನಲ್‌ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಏರದಿರುತ್ತದೆಯೇ? ಆರಗ ಜ್ಞಾನೇಂದ್ರ ಅವರೇ ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ?
೩. ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ, ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾನೆ! ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು – ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ ಬಿಜೆಪಿಯವರೇ? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ಕೈವಾಡವಿದೆಯೇ?
೪. ಬಿಜೆಪಿಯಲ್ಲಿ ಈ ಮೊದಲು ವೈಟ್ ಕಾಲರ್ ರೌಡಿಗಳಿದ್ದರು, ಈಗ ರಿಯಲ್ ರೌಡಿಗಳು ಸೇರಿದ್ದಾರೆ. ಮುಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಬಿಜೆಪಿ ಸೇರಿ ಪಾವನನಾಗಬಹುದು! ಪಾತಕಿಗಳು, ದರೋಡೆಕೋರರು, ಡ್ರಗ್ ಪೆಡ್ಲರ್‌ಗಳು, ಕ್ರೀಮಿನಲ್‌ಗಳು, ಭ್ರಷ್ಟರು, ರೇಪಿಸ್ಟರು ಎಲ್ಲರಿಗೂ ಕರ್ನಾಟಕ ಬಿಜೆಪಿ ಪಕ್ಷ ತವರು ಮನೆ ಇದ್ದಂತೆ!
೫. ವಾಂಟೆಡ್ ಕ್ರಿಮಿನಲ್‌ಗಳೆಲ್ಲ ಈಗ ಬಿಜೆಪಿಗೆ ವಾಂಟೆಂಡ್! ರೌಡಿ ಶೀಟರ್‌ಗಳನ್ನು ಪಕ್ಕದಲ್ಲಿಟ್ಟುಕೊಳ್ಳುವ ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ. ಬಿಜೆಪಿ ಈಗ ಮತ್ತೊಬ್ಬ ರೌಡಿ ಫೈಟರ್ ರವಿ ಎಂಬಾತನನ್ನು ಪಕ್ಷಕ್ಕೆ ಸೇರಿಸಿಕೊಂಡ ಸಂಸ್ಕೃತಿ ಪಾಲನೆಗೆ ಮುಂದಾಗಿದೆ!
ಇದನ್ನೂ ಓದಿ | ಮಂಡ್ಯ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ BJP ಸೇರ್ಪಡೆ; ಫೈಟರ್ ರವಿ ಸೇರ್ಪಡೆಗೆ ಅಶ್ವತ್ಥನಾರಾಯಣ ಸಮರ್ಥನೆ