ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿ ಸೆಡ್ಡು ಹೊಡೆದಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು (Karnataka Election 2023) ಬಿಜೆಪಿ ಹಾಗೂ ಆರ್‌ಎಸ್‌ಎಸ್ ರಣತಂತ್ರ ರೂಪಿಸಿದೆ. ಶೆಟ್ಟರ್ ಅವರನ್ನು ಸೋಲಿಸಲು ನಾಗ್ಪುರದಿಂದ 50 ಜನರ ತಂಡವು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಆಗಮಿಸುತ್ತಿದೆ ಎಂದು ತಿಳಿದುಬಂದಿದೆ.
ನಾಗ್ಪುರ ತಂಡದ ಒಂದಷ್ಟು ಸದಸ್ಯರು ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ತಂಡದ ಸದಸ್ಯರು ಜಗದೀಶ್ ಶೆಟ್ಟರ್ ಅವರ ಪ್ರತಿಯೊಂದು ನಡೆಯನ್ನು ನಾಗ್ಪುರ ತಂಡದ ಸದಸ್ಯರು ಗಮನಿಸುತ್ತಿದ್ದಾರೆ. ಹಾಗೆಯೇ, ಶೆಟ್ಟರ್ ಅವರ ಮನೆಗೆ ಹೋಗಿ-ಬರುವವರ ಮೇಲೂ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ನನಗೆ ಟಿಕೆಟ್ ತಪ್ಪಿಸಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರಣ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದ ಬಳಿಕ ಆರ್‌ಎಸ್‌ಎಸ್ ಅಲರ್ಟ್ ಆಗಿದೆ. ಹೇಗಾದರೂ ಮಾಡಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಯೋಜನೆ ರೂಪಿಸುತ್ತಿದೆ. ಅದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸ್ಥಳೀಯ ಮುಖಂಡರೊಂದಿಗೆ ನಾಗ್ಪುರ ತಂಡದ ಸದಸ್ಯರು ಚರ್ಚೆ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದ ಬಳಿಕ ಲಿಂಗಾಯತ ಮತದಾರರು ಅವರೆಡೆ ವಾಲುವ ಸಾಧ್ಯತೆ ಜಾಸ್ತಿ ಇದೆ. ಹಾಗೆಯೇ, ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಹಾಗಾಗಿ, ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರು ಭಾರಿ ಪ್ರಚಾರ ನಡೆಸುತ್ತಿದ್ದಾರೆ.
ಇದೇ ಕಾರಣಕ್ಕೆ, ಚುನಾವಣೆಯ ಸಂದರ್ಭದಲ್ಲಿ ಯಾರೋ ಒಬ್ಬರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದರೆ ಅದು ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಹೇಳಲು ಸಾಧ್ಯವೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತರು ಮೂಲೆಗುಂಪು ಆಗುತ್ತಿದ್ದಾರೆಂದು ಕಾಂಗ್ರೆಸ್ ಬಿಂಬಿಸಲು ಹೊರಟಿದೆ. ಕಾಂಗ್ರೆಸ್ ನಾಯಕರ ವಾದವನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Election 2023: ಜಗದೀಶ್ ಶೆಟ್ಟರ್ ನಿವಾಸಕ್ಕೆ ಸುರ್ಜೇವಾಲಾ ಭೇಟಿ, ಗೆಲುವಿಗೆ ರಣತಂತ್ರ