ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಸಂಬಂಧಿಸಿ ಭಾರತೀಯ ಜನತಾ ಪಕ್ಷ ಸೋಮವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ನೀಡಿರುವ ʻಉಚಿತʼ ಘೋಷಣೆಗಳನ್ನು ಕಾಂಗ್ರೆಸ್ ಲೇವಡಿ ಮಾಡಿದೆ. ನಾವು ಬಡವರಿಗೆ ಏನಾದರೂ ಉಚಿತವಾಗಿ ಕೊಡುತ್ತೇವೆ ಎಂದರೆ ಅದು ತಪ್ಪು ಎನ್ನುತ್ತೀರಿ, ಈಗ ನೀವು ಘೋಷಣೆ ಮಾಡಿದರೆ ಅದು ಸರೀನಾ? ಎಂದು ಅದು ಕೇಳಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ಪ್ರಣಾಳಿಕೆಯನ್ನು ಸತ್ತ ಮಗನ ಜಾತಕ ಓದುವುದಕ್ಕೆ ಹೋಲಿಸಿ ಇದೆಲ್ಲ ವೇಸ್ಟ್, ಬೋಗಸ್ ಎಂದು ಹೇಳಿದೆ.
ನಾವು ಮಾಡಿದ್ರೆ ತಪ್ಪು, ನೀವು ಮಾಡಿದ್ರೆ ಸರೀನಾ ಎಂದು ಕೇಳಿದ ಪಾಟೀಲ್
ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ ಪಾಟೀಲ್ ಅವರು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಉಚಿತ ಭರವಸೆಗಳನ್ನು ಪ್ರಶ್ನಿಸಿದ್ದಾರೆ. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಹಬ್ಬಗಳಿಗೆ ಉಚಿತ ಸಿಲಿಂಡರ್‌ಗಳನ್ನು ನೀಡುವ ಭರವಸೆಯ ಬಗ್ಗೆ ಕೇಳಿರುವ ಎಂ..ಬಿ. ಪಾಟೀಲ್, ಇಷ್ಟೆಲ್ಲ ಉಚಿತ ಘೋಷಣೆ ಮಾಡುವ ನೀಡುವ ಕಾಂಗ್ರೆಸ್‌ನ ಉಚಿತ ಘೋಷಣೆ ಯಾಕೆ ಟೀಕೆ ಮಾಡ್ತೀರಾ? ನಾವು ಕೊಟ್ರೆ ತಪ್ಪು, ನೀವು ಕೊಟ್ರೆ ಸರಿನಾ ಎಂದು ಕೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡಾ ಪ್ರತಿಕ್ರಿಯಿಸಿದ್ದು, ಅವರು ಅಧಿಕಾರದಲ್ಲಿ ಇದ್ದಾಗಲೇ ಏನೂ ಮಾಡಲಿಲ್ಲ. ಇನ್ನು ಘೋಷಣೆ ಮಾಡಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.
ʻʻಬಿಜೆಪಿ ಅವರು ಏನು ಮಾಡಲ್ಲ. ನಮ್ಮ ಯೋಜನೆಗಳನ್ನ ಕಾಪಿ ಮಾಡಿದ್ದಾರೆ ಅಷ್ಟೇ. ನಾವು ಘೋಷಣೆ ಮಾಡಿದಾಗ, ಈ ಯೋಜನೆ ಜಾರಿ ಮಾಡಲು ಸಾಧ್ಯವೇ ಇಲ್ಲ. ಅಷ್ಟೆಲ್ಲ ದುಡ್ಡು ಎಲ್ಲಿಂದ ಬರುತ್ತೆ ಎಂದೆಲ್ಲ ಕೇಳಿದರು. ಈಗ ಇವರು ಘೋಷಣೆ ಮಾಡಿದಾಗ ಅದು ಹೇಗೆ ಜಾರಿ ಮಾಡಲು ಆಗುತ್ತದೆʼ ಎಂದು ಪ್ರಶ್ನಿಸಿದ ಅವರು, ಇದರ ಬಗ್ಗೆ ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಜನರೇ ನಿರ್ಧಾರ ಮಾಡಿದ್ದಾರೆ ಬಿಡಿ ಎಂದರು.
ರಿಪೋರ್ಟ್ ಕಾರ್ಡ್ ಕೇಳಿದ ಸಿದ್ದರಾಮಯ್ಯ
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು, ʻʻನಾವೂ ಸಹ ನಾಳೆ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಬಿಜೆಪಿ ಪ್ರಣಾಳಿಕೆ ಬರೀ ಬೋಗಸ್. ನಾವು ಬಿಡುಗಡೆ ಮಾಡುವ ಪ್ರಣಾಳಿಕೆ ಅನುಷ್ಠಾನ ಮಾಡುವಂಥದ್ದು.ʼʼ ಎಂದರು.
ʻʻಬಿಜೆಪಿಯವರು ಬೋಗಸ್ ಭರವಸೆಗಳನ್ನು ನೀಡುತ್ತಾರೆ. ನಮಗೂ ಹಾಗೂ ಬಿಜೆಪಿಯವರಿಗೆ ಇರುವ ವ್ಯತ್ಯಾಸ ಇದೇ. 2018ರಲ್ಲಿ ಅವರು 600 ಭರವಸೆಗಳನ್ನು ಕೊಟ್ಟಿದ್ದರು. ಕೇವಲ 55 ಭರವಸೆಗಳನ್ನು ಮಾತ್ರ ಅನುಷ್ಠಾನ ಮಾಡಿದ್ದಾರೆ. ನಾವು 2013ರಲ್ಲಿ 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸʼʼ ಎಂದು ಹೇಳಿದರು ಸಿದ್ದರಾಮಯ್ಯ.
ಬಿಜೆಪಿ ಪ್ರಣಾಳಿಕೆಗೂ ಸತ್ತ ಮಗನ ಜಾತಕಕ್ಕೂ ಏನು ಸಂಬಂಧ?
ʻʻಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ!ʼʼ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ. ಸರಣಿ ಟ್ವೀಟ್‌ಗಳ ಮೂಲಕ ಪ್ರಣಾಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪಕ್ಷ, ʻʻಕಳೆದ ಬಾರಿ ಅನ್ನಪೂರ್ಣ ಕ್ಯಾಂಟೀನ್ ತೆರೆಯುತ್ತೇವೆ ಎಂದಿದ್ದರು. ಆದರೆ ಇದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈಗ ಅನ್ನಪೂರ್ಣ ಹೋಗಿ ಅಟಲ್ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಿದ್ದಾರೆ. ಮುಂದಿನ ಪ್ರಣಾಳಿಕೆಯಲ್ಲಿ ಮೋದಿ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ. ಸುಳ್ಳುಗಳ ಸರಮಾಲೆ!ʼʼ ಎಂದಿದೆ.
ʻʻಬಿಜೆಪಿ ತನ್ನ ಹಿಂದಿನ ಪ್ರಣಾಳಿಕೆಯನ್ನ ಒಮ್ಮೆ ಜನರ ಮುಂದಿಟ್ಟು ಎಷ್ಟು ಭರವಸೆಗಳನ್ನು ಪೂರೈಸಿದೆ ಎಂಬ ಲೆಕ್ಕ ಕೊಡಲಿ. ನಂತರ ಹೊಸ ಪ್ರಣಾಳಿಕೆಯ ಬಗ್ಗೆ ಮಾತಾಡಲಿ, ಸಾಧ್ಯವೇ?ʼʼ ಎಂದು ಅದು ಕೇಳಿದೆ.
ʻʻಬಿಜೆಪಿಯ ಪ್ರಣಾಳಿಕೆ ಎಂದರೆ ಸುಳ್ಳಿನ ಕಂತೆ ಎಂಬುದು ಈಗಾಗಲೇ ಸಾಬೀತಾಗಿದೆ. ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ!ʼʼ ಎಂದು ಲೇವಡಿ ಮಾಡಿದೆ.
ಇದನ್ನೂ ಓದಿ : BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?