Site icon Vistara News

Karnataka Election 2023: ಬೈಂದೂರಲ್ಲಿ ಬಿಜೆಪಿ ಬೃಹತ್‌ ರ‍್ಯಾಲಿ; ಹೃದಯವಂತ ಗುರುರಾಜ್‌ ಗಂಟಿಹೊಳೆಯನ್ನು ಗೆಲ್ಲಿಸಿ ಎಂದ ಬಿ.ವೈ. ರಾಘವೇಂದ್ರ

BJP massive rally in Byndoor Hearted Gururaj Should Win says BY Raghavendra Karnataka Election 2023 updates

ಉಡುಪಿ: ಬೈಂದೂರು ವಿಧಾನಸಭಾ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಗುರುವಾರ (ಏಪ್ರಿಲ್‌ 20) ಬೃಹತ್‌ ರ‍್ಯಾಲಿ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಸಾರ್ವಜನಿಕ ಸಭೆ ನಡೆದಿದ್ದು, ಸುಮಾರು 25 ಸಾವಿರ ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಿದ್ದಾರೆ. ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಡವರ ಮಗ, ಹೃದಯವಂತ ಗುರುರಾಜ್‌ ಗಂಟಿಹೊಳೆ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

ಗುರುರಾಜ್ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಕಾರ್ಯಕರ್ತರ ದಂಡು|Gururaj Gantihole Nomination File |Vistara News

ಬೈಂದೂರು ಹಳೆ ಬಸ್ ಸ್ಟ್ಯಾಂಡ್ ಬಳಿಯ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ. ಗುರುರಾಜ್ ಗಂಟಿಹೊಳೆ ಅವರು ಬಡವರ ಮಗ, ಹೃದಯವಂತ. ಅವರಿಗೆ ಜನರ ಆಶೀರ್ವಾದ ಇದೆ ಎಂದು ಹೇಳಿದರು. ಇವರು ನಾಮಪತ್ರ ಸಲ್ಲಿಸಲು ಇಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇದೊಂದು ದಾಖಲೆಯೇ ಸರಿ. ಬೇರೆ ಪಕ್ಷದವರಂತೆ ಇಲ್ಲಿ ಯಾರನ್ನೂ ದುಡ್ಡು ಕೊಟ್ಟು ಕರೆದುಕೊಂಡು ಬಂದಿಲ್ಲ. ಸ್ವಾಭಿಮಾನದಲ್ಲಿರುವ ಕಾರ್ಯಕರ್ತರು ಒಟ್ಟಾಗಿದ್ದಾರೆ. ಕಾರ್ಯಕರ್ತರೇ ಬಿಜೆಪಿ ಪಕ್ಷಕ್ಕೆ ದೊಡ್ಡ ಆಸ್ತಿ. ಗಂಟಿಹೊಳೆ ಅವರ ಗೆಲುವು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ: HD DeveGowda: ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ನೆರವೇರಿಸಿದ ದೇವೇಗೌಡರು, ಎಚ್‌ಡಿಕೆಗೆ ಮತ್ತೊಮ್ಮೆ ಸಿಎಂ ಪಟ್ಟ ಸಿಗಲೆಂದು ಕೋರಿಕೆ?

ಗುರುರಾಜ್ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಕಾರ್ಯಕರ್ತರ ದಂಡು|Gururaj Gantihole Nomination File |Vistara News

ತುಷ್ಟೀಕರಣ ಬೇಕಾ ಅಭಿವೃದ್ಧಿ ಬೇಕಾ?: ಸಚಿವ ಸುನಿಲ್‌ ಕುಮಾರ್

ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ.‌ ಇಂದು ಅವರು ವಿಜಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಅಭ್ಯರ್ಥಿಯ ಬೆಂಬಲ ನೋಡಿದರೆ ಇದು ವಿಜಯೋತ್ಸವದ ಸಭೆಯಂತೆ ಕಾಣುತ್ತಿದೆ. ಸುಕುಮಾರ ಶೆಟ್ಟಿ ಅವರ ಶಾಸಕತ್ವದ ಅವಧಿಯಲ್ಲಿ ಬೈಂದೂರು ಕ್ಷೇತ್ರ ಅಭಿವೃದ್ಧಿಯಾಗಿದೆ. ಅವರು ಮಾಡಿದ ಕೆಲಸವು ಮುಂದುವರಿಯಬೇಕಾದರೆ ಇಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು. ಕಾಂಗ್ರೆಸ್‌ ಮತ ಹಾಕುವವರು ಐದು ವರ್ಷದ ಹಿಂದಿನ ಚಿತ್ರಣವನ್ನು ಜನರು ನೆನಪು ಮಾಡಿಕೊಳ್ಳಬೇಕು. ಭಯದಲ್ಲಿ ಜೀವನ ಮಾಡುವಂತಹ ಪರಿಸ್ಥಿತಿ ಆಗ ಇತ್ತು. ಕಾಂಗ್ರೆಸ್ ಅಧಿಕಾರದ ಬಂದ ಕ್ಷಣ ತುಷ್ಟೀಕರಣದ ರಾಜಕಾರಣ ಮಾಡುತ್ತದೆ. ತುಷ್ಟೀಕರಣ ಬೇಕಾ? ಅಭಿವೃದ್ಧಿ ಬೇಕಾ? ನೀವೇ ಆಲೋಚನೆ ಮಾಡಿ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ರಾಜ್ಯದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರ ಬರಬೇಕಾದರೆ ಬಿಜೆಪಿ ಗೆಲ್ಲಬೇಕು.‌ ದಕ್ಷಿಣ ಭಾರತದ ಜನರು ದೇಶ, ಭಾಷೆಗೆ ಜೀವ ಕೊಟ್ಟಂಥವರು. ರಾಷ್ಟ್ರಕ್ಕೋಸ್ಕರ ಚಿಂತನೆ ಮಾಡುತ್ತಿರುವ ಪಕ್ಷ ಬಿಜೆಪಿಯಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಅಂತರದಲ್ಲಿ ಗುರುರಾಜ್ ಗಂಟಿಹೊಳೆಯವರನ್ನು ಗೆಲ್ಲಿಸಬೇಕು. ತಾಯಿ ಅಂತ್ಯಸಂಸ್ಕಾರವನ್ನು ಸರಳವಾಗಿ ಮಾಡಿದ ನರೇಂದ್ರ ಮೋದಿ ಅವರು ನಮಗೆಲ್ಲರಿಗೂ ಆದರ್ಶ. ಮನೆ ಮನೆಗೆ ಸಿಹಿ ನೀರು ಒದಗಿಸುವ ಕೆಲಸ ಅರ್ಧವಾಗಿದೆ, ಅದನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು.

ರಾಷ್ಟ್ರೀಯತೆ vs ಭಯೋತ್ಪಾದಕತೆ: ಕೋಟ ಶ್ರೀನಿವಾಸ್ ಪೂಜಾರಿ

ಇಂದು ಬೈಂದೂರಿನಲ್ಲಿ ನಡೆದ ಮೆರವಣಿಗೆಯು ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಇಲ್ಲಿ ಗುರುರಾಜ್ vs ಗೋಪಾಲ ಪೂಜಾರಿ ಅಲ್ಲ. ರಾಷ್ಟ್ರೀಯತೆ vs ಭಯೋತ್ಪಾದಕತೆ ಬೆಂಬಲಿಸುವವರ ಚುನಾವಣೆಯಾಗಿದೆ. ಕಾಂಗ್ರೆಸ್ ಭಯೋತ್ಪಾದನೆಯನ್ನು ಬೆಂಬಲಿಸುವ ಪಕ್ಷವಾಗಿದೆ. ದಿನೇಶ್ ನಾಯಕ್ ಅವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಲಾಗಿತ್ತು. ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದು ವಿರೋಧಿ ಅಪರಾಧಿಗಳ 1700 ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ಹೀಗಾಗಿ ಬೈಂದೂರಿನಲ್ಲಿ ಭಯೋತ್ಪಾದಕರಿಗೆ ಉತ್ತರವೆಂದರೆ ಅದು ಗುರುರಾಜ್ ಗಂಟಿಹೊಳೆ ಮಾತ್ರ. ಅವರು ಬೈಂದೂರಿನ ಚೌಕಿದಾರ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅಕ್ಕಿಯನ್ನು ಉಚಿತವಾಗಿ ಕೊಟ್ಟವರು ಸಿದ್ದರಾಮಯ್ಯ ಅಲ್ಲ. ನರೇಂದ್ರ ಮೋದಿ ಅವರ ಸರ್ಕಾರ 29 ರೂಪಾಯಿ ಕೊಡುತ್ತಿತ್ತು. ‌ಆಗ ಕಾಂಗ್ರೆಸ್‌ ಮೂರು ರೂಪಾಯಿ ಕೊಟ್ಟಿದ್ದು ಗೋಣಿ ಚೀಲಕ್ಕೆ ಮಾತ್ರ ಎಂದು ಹೇಳಿದರು.

ಬೈಂದೂರು ಜನತೆಯ ಜೊತೆಗೆ ಯಾವತ್ತೂ ಇರುತ್ತೇನೆ: ಗುರುರಾಜ್ ಗಂಟಿಹೊಳೆ

ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆ ಕೆಲಸಗಳನ್ನು ಮಾಡಿದ್ದೇನೆ. ನಾಳೆ ಏನಾದರೂ ಆಗುತ್ತದೆ. ನನಗೇನೋ ಲಾಭವಾಗುತ್ತದೆ ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕರ್ತರು ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷ, ನಮ್ಮ ನಾಯಕರು ಗೆಲ್ಲುವುದು, ವಿಜಯೋತ್ಸವ ಆಚರಿಸುವುದು ನಮಗೆ ಸಂತಸ. ಈಗ ನನಗೆ ಪಕ್ಷ ಅವಕಾಶ ನೀಡಿದೆ. ಆದರೆ, ಬೈಂದೂರು ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವ ಆತಂಕ ಇತ್ತು. ಅದೇ ಆತಂಕದಲ್ಲಿ ಸಭೆಯನ್ನು ನೋಡಿದಾಗ ನನಗೆ ದೇವರನ್ನು ನೋಡಿದ ಅನುಭವವಾಗಿದೆ. ಪಕ್ಷ ಸಂಘಟನೆ ನನಗೆ ದೇವರ ಸಮಾನ. ನಾವು ಚುನಾವಣೆಗಾಗಿ ವೇಷ ಕಟ್ಟುವವರಲ್ಲ. ವರ್ಷವಿಡಿ ಸಂಘಟನೆ ಮಾಡಿಕೊಂಡಿರುವವರು. ನಾನು ನಿಮ್ಮ ಜತೆ ಇರುತ್ತೇನೆ. ಎಲ್ಲ ಕಷ್ಟ – ಸುಖಗಳನ್ನು ಅರಿವು ನಿಮ್ಮ ಕಷ್ಟದಲ್ಲಿ ಜತೆಗಿರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೇಳಿದರು.

ಇದನ್ನೂ ಓದಿ: Karnataka Elections : ಮಂಗಳೂರು ಉತ್ತರ ಟಿಕೆಟ್‌ ವಂಚಿತ ಮೊಯ್ದಿನ್‌ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ, ಜೆಡಿಎಸ್‌ ಸೇರ್ಪಡೆ

ನಾವು ಸಂಘಟನೆಯಲ್ಲಿ ತೊಡಗಿದಾಗ ನಮ್ಮ ಜೀವದ ಕೊನೆಯ ಉಸಿರಿರುವವರಿಗೂ, ನಮ್ಮ ಕಾರ್ಯಕರ್ತರು ಅಕ್ಕ-ತಂಗಿಯರ ರಕ್ಷಣೆ ಮಾಡುವ ಪಣ ತೊಟ್ಟಿದ್ದೇವೆ. ಕ್ಷೇತ್ರದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಬಂದರೂ ನಾನು ನಿಮ್ಮ ಜತೆಗೆ ನಿಲ್ಲುತ್ತೇನೆ. ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಆಶೀರ್ವಾದ ಸಿಕ್ಕಿದೆ ಅವರ ಆಶೀರ್ವಾದ ಸಾಕ್ಷಾತ್ ದೇವಿ ಆಶೀರ್ವಾದ ಇದ್ದಂತೆ. ನಾನು ಪಕ್ಷ ಸಂಘಟನೆ ಹಾಗೂ ಬೈಂದೂರು ಜನತೆಯ ಜತೆಗೆ ಯಾವತ್ತೂ ಇರುತ್ತೇನೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದರು.

Exit mobile version