ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಕಳೆದರೂ ರಾಜ್ಯ ಬಿಜೆಪಿಗೆ (BJP Karnataka) ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭವಾದರೂ ಎರಡೂ ಸದನಗಳಿಗೆ ನಾಯಕನಿಲ್ಲದೆ ʼಸಾಮೂಹಿಕ ನಾಯಕತ್ವʼದಲ್ಲಿ ಬಿಜೆಪಿ ಸದಸ್ಯರು ಭಾಗವಹಿಸುತ್ತಿದ್ದಾರೆ. ಸದನದಲ್ಲಿ ಯಾರು ಪಕ್ಷವನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಮೇಲೆ ಕುಳಿತ ವರಿಷ್ಠರು ನೋಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.
ಮೇ 13ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿತ್ತು. ಸರಳ ಬಹುಮತ ಬರುತ್ತದೆ, ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ ಎಂದು ಹೊರಗೆ ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ 80-90 ಸ್ಥಾನ ಬಂದರೆ ಸಾಕು, ಉಳಿದದ್ದನ್ನು ಜೆಡಿಎಸ್‌ನಿಂದ ಹೊಂದಿಸಿಕೊಂಡು ಸರ್ಕಾರ ರಚನೆ ಮಾಡುವ ಚಿಂತನೆಯಲ್ಲಿದ್ದರು. ಆದರೆ ತೀವ್ರ ಆಘಾತಕಾರಿಯಾಗಿ ಕೇವಲ 63 ಸ್ಥಾನಗಳನ್ನು ಗಳಿಸಿದ ಬಿಜೆಪಿ ಹೀನಾಯವಾಗಿ ಸೋಲುಂಡಿತು.
ಈ ಸೋಲಿನ ಹೊಡೆತ ಹೇಗಿದೆ ಎಂದರೆ, ಅಂದು ರಾಜ್ಯ ರಾಜಕೀಯದಿಂದ ವಿಮುಖರಾದ ರಾಷ್ಟ್ರೀಯ ನಾಯಕರು ಮತ್ತೆ ಈ ಕಡೆ ತಲೆ ಹಾಕಿ ಸಹ ಮಲಗಿಲ್ಲ. ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಕರ್ನಾಟಕದ ಘಟಕ ಇದೆಯೇ ಇಲ್ಲವೇ ಎನ್ನುವಷ್ಟು ಮೌನ ವಹಿಸಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಅಧಿವೇಶನ ಆರಂಭವಾಗಿ ಎರಡು ವಾರ ಸದನ ನಡೆದರೂ ಇನ್ನೂ ಅದರ ಸದ್ದಿಲ್ಲ. ಈ ನಡುವೆ ಸದನವನ್ನೇ ಬಿಜೆಪಿ ವರಿಷ್ಠರು ಬಿಗ್ ಬಾಸ್ ಮನೆಯಾಗಿಸಿಕೊಂಡಿದ್ದಾರೆ ಎಂಬ ಮಾತುಗಳು ಬಿಜೆಪಿಯಲ್ಲಿ ಚರ್ಚೆಯಾಗುತ್ತಿವೆ.
ಮೇಲಿನಿಂದ ಕಣ್ಣು
ರಾಜ್ಯ ಬಿಜೆಪಿ ನಾಯಕತ್ವವನ್ನು ವಹಿಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ನಂತರ ನಾಯಕತ್ವದ ಹುಡುಕಾಟ ನಡೆಯುತ್ತಿದೆ. ಆದರೆ ಒಬ್ಬೊಬ್ಬ ನಾಯಕನಲ್ಲಿ ಕೆಲವೊಂದು ಧನಾತ್ಮಕ ಅಂಶಗಳಿದ್ದರೂ, ಅದಕ್ಕಿಂತಲೂ ಹೆಚ್ಚು ನಕಾರಾತ್ಮಕ ಅಂಶಗಳೇ ಇವೆ. ಜನರ ನಡುವೆ ಇದ್ದವರಿಗೆ ಸದನದಲ್ಲಿ ಭಾಗವಹಿಸುವುದು ಗೊತ್ತಿಲ್ಲ. ಸದನ ನಡೆಸಲು ಬಲ್ಲವರು ಬೇರೆ ಪಕ್ಷಗಳ ಜತೆ ಅಡ್ಜಸ್ಟ್ ಆಗಿದ್ದಾರೆ ಎಂಬ ಅನುಮಾನವಿದೆ. ಹೋರಾಟ ಮಾಡಬಲ್ಲವರ ಬಾಯಿ ಸರಿಯಿಲ್ಲ. ಜಾತಿ ಹಿನ್ನೆಲೆ ಹೊಂದಿರುವವರಿಗೆ ಮಾತಿನ ಕಲೆಯಿಲ್ಲ. ಹೀಗೆ ಅನೇಕ ಕೊರತೆಗಳನ್ನು ಹೊಂದಿರುವವರ ನಡುವೆ ಯಾರನ್ನು ಆಯ್ಕೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ.
ಕಳೆದ ಎರಡು ವಾರದಲ್ಲಿ ಸದನವನ್ನು ಬಿಜೆಪಿ ವರಿಷ್ಠರು ಹದ್ದಿನ ಕಣ್ಣಿಟ್ಟು ನೋಡುತ್ತಿದ್ದಾರೆ. ಪಕ್ಷವನ್ನು ಯಾರು ಸಮರ್ಥವಾಗಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನೋಡುತ್ತಿದ್ದಾರೆ. ನಾಯಕತ್ವ ನೀಡದೆಯೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಲ್ಲರೇ? ಎನ್ನುವುದನ್ನು ನೋಡುತ್ತಿದ್ದಾರೆ. ಮೊದಲ ವಾರದಲ್ಲಿ ಬಿಜೆಪಿ ನಾಯಕರಿಗೂ ಇದರ ಬಗ್ಗೆ ತಿಳಿದಿರಲಿಲ್ಲ. ಆದರೆ ಎರಡನೇ ವಾರದ ಸದನ ಆರಂಭವಾಗುವ ವೇಳೆಗೆ ಇದು ಅರಿವಿಗೆ ಬಂದಿದೆ.
ತಮ್ಮನ್ನು ಮೇಲಿನವರು ನೋಡುತ್ತಿದ್ದಾರೆ. ಯಾರು ಸಮರ್ಥವಾಗಿ ಭಾಗವಹಿಸುತ್ತಾರೆ ಎನ್ನುವುದರ ಆಧಾರದಲ್ಲಿ ಆಯ್ಕೆ ಮಾಡುತ್ತಾರೆ ಎಂದು ದೆಹಲಿ ಸಂಪರ್ಕ ಇರುವ ನಾಯಕರೊಬ್ಬರು ತಿಳಿಸಿದ್ದಾರೆ. ಇದು ಎಲ್ಲೆಡೆ ಹರಡಿದೆ. ಎರಡನೇ ವಾರದಿಂದ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದವರಂತೆ ಪಕ್ಷದ ಸಮರ್ಥನೆಗೆ ಇಳಿದಿದ್ದಾರೆ. ಇಲ್ಲಿ ಯಾರು ಚೆನ್ನಾಗಿ ಭಾಗವಹಿಸುತ್ತಾರೆ ಎನ್ನುವುದರ ಆಧಾರದಲ್ಲಿ, ಅಧಿವೇಶನ ಮುಗಿದ ಬಳಿಕೆ ಆಯ್ಕೆ ನಡೆಯಲಿದೆ ಎಂಬ ಮಾತು ಚಾಲ್ತಿಯಲ್ಲಿದೆ.
ಬಿಜೆಪಿ ವಿರೋಧಕ್ಕಾಗಿ ಕಾಂಗ್ರೆಸ್ ಜತೆಗೆ ಪ್ರಾದೇಶಿಕ ಪಕ್ಷಗಳು ಮಾಡಿಕೊಂಡಿರುವ ಮಹಾಘಟಬಂಧನ ಸಭೆಯು ಜುಲೈ 17-18ರಂದು ಬೆಂಗಳೂರಿನಲ್ಲೇ ನಡೆಯಲಿದೆ. ಈ ಸಭೆಯ ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಮುಖ್ಯವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಜತೆಗೆ ಮಾಜಿ ಸಚಿವರಾದ ವಿ. ಸುನಿಲ್‌ಕುಮಾರ್, ಆರ್. ಅಶೋಕ್ ಹಾಗೂ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗಾಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆಗಾಗ್ಗೆ ಮಾತನಾಡದಿದ್ದರೂ ಮಾತನಾಡಿದ ಸಂದರ್ಭದಲ್ಲಿ ಸದನವು ಕಿವಿಗೊಟ್ಟು ಕೇಳುವಂತೆ ಬಿ.ವೈ. ವಿಜಯೇಂದ್ರ ಗಮನ ಸೆಳೆದಿದ್ದಾರೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ತುಸು ಹೆಚ್ಚು ಆಕ್ರಮಣಕಾರಿಯಾಗಿ ಆಗಾಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ವಿಧಾನ ಪರಿಷತ್‌ನಲ್ಲೂ ಈ ಪೈಪೋಟಿ ಮುಂದುವರಿದಿದೆ. ಮುಖ್ಯವಾಗಿ ಮಾಜಿ ಸಚಿವ ಹಾಗೂ ಹಿಂದಿನ ಸದನ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಅನೌಪಚಾರಿಕವಾಗಿ ನಾಯಕ ಎನ್ನುವಂತೆ ಬಿಂಬಿಸಲಾಗುತ್ತಿದೆ. ಕೋಟ ಶ್ರೀನಿವಾಸ ಪೂಜಾರಿ ಅವರೇ ಮುಂದೆ ಕುಳಿತು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ನಂತರದಲ್ಲಿ ಎನ್. ರವಿಕುಮಾರ್ ಅನೇಕ ಬಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಇವರಿಬ್ಬರ ಜತೆಗೆ ಶಶೀಲ್ ನಮೋಶಿ ಹಾಗೂ ವೈ.ಎ. ನಾರಾಯಣಸ್ವಾಮಿ ಆಗಾಗ್ಗೆ ಸರ್ಕಾರದ ಪ್ರತಿನಿಧಿಗಳ ಮಾತಿನ ನಡುವೆ ಎದ್ದುನಿಲ್ಲುತ್ತಿದ್ದಾರೆ.
ಇದನ್ನೂ ಓದಿ: Assembly Session: ವಿಪಕ್ಷಕ್ಕೇ ವಿಪಕ್ಷವಾದ ಡೆಪ್ಯುಟಿ ಸ್ಪೀಕರ್: ಬಿ.ವೈ. ವಿಜಯೇಂದ್ರ ಮಾತಿನ ಸಮಯದಲ್ಲಿ ಮಾತಿನ ಚಕಮಕಿ
ವಿಧಾನಮಂಡಲ ಅಧಿವೇಶನ ಇನ್ನೂ ಒಂದು ವಾರ ಅಂದರೆ ಜುಲೈ 21ರವರೆಗೆ ನಡೆಯಲಿದೆ. ಈ ಸಮಯದಲ್ಲಿ ಬಿಜೆಪಿ ನಾಯಕರು ಮತ್ತಷ್ಟು ರೇಸ್‌ನಲ್ಲಿ ಬೀಳುವ ಸಾಧ್ಯತೆಯಿದೆ. ಎಲ್ಲ ಬೆಳವಣಿಗೆಗಳನ್ನೂ ನೋಡುತ್ತಿರುವ ದೆಹಲಿ ವರಿಷ್ಠರು ಯಾರನ್ನು ನಾಯಕ ಮಾಡಬೇಕೆಂಬ ನಿರ್ಧಾರ ಮಾಡಲಿದ್ದಾರೆ. ಮಹಾಘಟಂಧನದಲ್ಲಿ ಚರ್ಚೆಯಾಗುವ ವಿಚಾರಗಳೂ ಈ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಸಂಘಟನೆ ಚುರುಕುಗೊಳಿಸಿ
ರಾಜ್ಯದಲ್ಲಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆಯೂ ಚರ್ಚೆಯಿದೆ. ಆದರೆ ಇನ್ನೂ ಈ ಕುರಿತು ಹೆಚ್ಚಿನ ಆಸಕ್ತಿಯನ್ನು ವರಿಷ್ಠರು ತೆಗೆದುಕೊಂಡಿಲ್ಲ. ವರಿಷ್ಠರು ಆಯ್ಕೆ ಮಾಡುವವರೆಗೂ ಸುಮ್ಮನೆ ಕೂರುವುದು ಬೇಡ. ಸಂಘಟನೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಿ ಚುರುಕುಗೊಳಿಸಿ. ಇಲ್ಲದಿದ್ದರೆ ಲೋಕಸಭೆ ಚುನಾವಣೆಗೆ ಕಷ್ಟವಾಗುತ್ತದೆ ಎಂದು ದೆಹಲಿಯ ಎರಡನೇ ಹಂತದ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನ ಮುಗಿದ ಬಳಿ ಅನೇಕ ಕಾರ್ಯಕ್ರಮ, ಹೋರಾಟಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ನಾಯಕರೊಬ್ಬರು ಹೇಳಿದ್ದಾರೆ.