Site icon Vistara News

Suicide Case | ಡೆತ್‌ ನೋಟ್‌ನಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಬರೆದರೆ ಏನು ಮಾಡ್ತೀರಿ?: ಯಾವುದೇ ತನಿಖೆಗೆ ಸಿದ್ಧ ಎಂದ ಅರವಿಂದ ಲಿಂಬಾವಳಿ

BJP Mla aravinda limbavali says he will cooperate with inquiry in pradeep suicide-case

ಬೆಂಗಳೂರು: ಪ್ರದೀಪ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರರಕಣದಲ್ಲಿ (Suicide Case) ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಕುರಿತು ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಯಾವುದೇ ರೀತಿಯ ತನಿಖೆಗೂ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಬಾವಳಿ, ಅನೇಕರು ಬಹಳ ಕುತೂಹಲದಿಂದ ದೂರವಾಣಿ ಕರೆ ಮಾಡುತ್ತಿದ್ದಾರೆ. ಅದಕ್ಕಾಗಿ ನನ್ನ ಸ್ಪಷ್ಟೀಕರಣ ನೀಡಲು ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ. ಮೊದಲನೆಯದಾಗಿ, ಮೃತಪಟ್ಟಿರುವ ಪ್ರದೀಪ್‌ ಆತ್ಮಕ್ಕೆ ಶಾಂತಿ ಸಿಗಲಿ. ಆತ ನಮ್ಮ ಕಾರ್ಯಕರ್ತ. 2009ರ ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದ ಗುತ್ತಿಗೆ ತೆಗೆದುಕೊಂಡು ಕೆಲಸ ಮಾಡಿ ನಂತರ ಕಾರ್ಯಕರ್ತನಾಗಿ ಪರಿವರ್ತನೆಯಾಗಿ, ವಾರ್ಡ್‌ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ.

ಈಗ ನಡೆದಿರುವ ಘಟನೆಯಿಂದ ನಾನೂ ದುಃಖದಲ್ಲಿದ್ದೇನೆ. ಈ ರೀತಿಯ ಸ್ಥಿತಿಗೆ ಆತ ಹೋಗಿರುವುದು ವಿಷಾದಕರ. ಜುಲೈ ತಿಂಗಳಲ್ಲಿ ಆತ ನನ್ನ ಕಚೇರಿಯ ಜನತಾ ದರ್ಶನಕ್ಕೆ ಬಂದಿದ್ದ. ನೀನೇಕೆ ಜನತಾ ದರ್ಶನಕ್ಕೆ ಬಂದಿದ್ದೀಯ? ಎಂದು ಕೇಳಿದೆ. ನನಗೆ ಸಮಸ್ಯೆಯಾಗಿದೆ, ಮಾತನಾಡಬೇಕು ಎಂದ. ತನ್ನ ಸಮಸ್ಯೆಯನ್ನು ಹೇಳಿಕೊಂಡ.

ಅವನು ಕೊಟ್ಟ ನಂಬರ್‌ಗಳಿಗೆ ದೂರವಾಣಿ ಕರೆ ಮಾಡಿ, ನಿಮ್ಮ ಸಂಸ್ಥೆಯಲ್ಲಿ ಅವರು ಹೂಡಿಕೆ ಮಾಡಿರುವುದನ್ನು ಹಿಂದೆ ಕೊಡಿ ಎಂದು ತಿಳಿಸಿದೆ. ಈಗ ಅವರು ಒಪ್ಪಿಕೊಂಡಿದ್ದಾರೆ, ನೀಡದೇ ಇದ್ದರೆ ತಿಳಿಸು ಎಂದಿದ್ದೆ. 15 ದಿನದ ನಂತರ ಮತ್ತೆ ಸಂಬಂಧಪಟ್ಟವರಿಗೆ ಖಾರವಾಗಿಯೇ ಹೇಳಿ, ಆರ್ಥಿಕವಾಗಿ ಸಮಸ್ಯೆಯಲ್ಲಿರುವುದರಿಂದ ತಕ್ಷಣವೇ ಬಗೆಹರಿಸಿ ಎಂದಿದ್ದೆ. ನಂತರ ಒಂದು ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಿಕ್ಕ ಪ್ರದೀಪ್‌, ಸಮಸ್ಯೆ ಸರಿಯಾಗಿದೆ ಎಂದ.

ಮತ್ತೆ ಆಗಸ್ಟ್‌ ತಿಂಗಳಲ್ಲಿ ದೂರವಾಣಿ ಕರೆ ಮಾಡಿ ಕೌಟುಂಬಿಕ ಸಮಸ್ಯೆ ಹೇಳಿಕೊಂಡ. ಪತ್ನಿಯು ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದ. ತಕ್ಷಣವೇ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗೆ ದೂರವಾಣಿ ಕರೆ ಮಾಡಿದೆ. ವಿಚಾರಣೆ ನಡೆಸಿ, ಮಾತುಕತೆ ಮಾಡಿ ಬಗೆಹರಿಸಿ ಎಂದು ಹೇಳಿದ್ದೆ.

ಜನತಾದರ್ಶನದಲ್ಲಿ ಬಂದಾಗ ಸಮಸ್ಯೆ ಬಗೆಹರಿಸುವ ಕೆಲಸ ಎಲ್ಲ ಜನಪ್ರತಿನಿಧಿಗಳೂ ಮಾಡುತ್ತಾರೆ, ನಾವೂ ಮಾಡುತ್ತೇವೆ. ಆದರೆ ಈ ಹಂತಕ್ಕೆ ಹೋಗಿರುವುದು ವಿಷಾದದ ಸಂಗತಿ. ಅರವಿಂದ ಲಿಂಬಾವಳಿ ಅವರು ಮಾತನಾಡಿದ ನಂತರ ಹಣ ನೀಡಲು ಒಪ್ಪಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಹೇಳಿದ್ದಾನೆ. ಅದರ ಜತೆಗೆ, ತನಿಖೆ ಮಾಡಬೇಕು ಎಂದೂ ತಿಳಿಸಿದ್ದಾನೆ.

ಜನಪರವಾದ ಕೆಲಸ ಮಾಡಿದ್ದೇನೆ. ತನಿಖೆ ನಡೆಸಲಿ ಎಂದು ನಾನೂ ಒತ್ತಾಯ ಮಾಡುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಎಂಬ ವಿಷಯ ಹೊರಬರಬೇಕಿದೆ. ಎಲ್ಲ ಜನಪ್ರತಿನಿಧಿಗಳಿಗೆ ಒಂದು ವಿನಂತಿ ಎಂದರೆ, ಇಂತಹ ಕೆಲಸ ಬಂದಾಗ ಎಚ್ಚರಿಕೆಯಿಂದ ಮಾಡಿ. ನಿಮ್ಮ ಹೆಸರನ್ನೂ ಬರೆದು ಇಟ್ಟುಬಿಡಬಹುದು.

ಸಾರ್ವಜನಿಕ ಜೀವನದಲ್ಲಿದ್ದ ಮೇಲೆ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ಅದನ್ನು ನಿರ್ವಹಣೆ ಮಾಡುತ್ತೇವೆ. ಗೋಪಿ, ಸುಬ್ಬಯ್ಯ ಎಲ್ಲರೂ ಪರಿಚಯ. ವೈಟ್‌ ಪೆಟಲ್ಸ್‌ನಲ್ಲಿ ನಮ್ಮ ಪಕ್ಷದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಪರಿಚಯ ಆದವರು. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ. ನೀವು ಹೂಡಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದೀರ, ಅದನ್ನು ಹಿಂದಿರುಗಿಸಿ ಎಂದಿದ್ದೇನೆ ಅಷ್ಟೆ. ಪೊಲೀಸರು ನಡೆಸುವ ಎಲ್ಲ ತನಿಖೆಗೂ ನಾನು ಸಹಕಾರ ನೀಡುತ್ತೇನೆ ಎಂದರು.

ನನ್ನ ಹೆಸರನ್ನು ಯಾವ ಕಾರಣಕ್ಕೆ ಬರೆದಿದ್ದಾರೆ ಎಂದು ಗೊತ್ತಿಲ್ಲ ಎಂದ ಲಿಂಬಾವಳಿ, ಡೆತ್‌ ನೋಟ್‌ನಲ್ಲಿ ನಿಮ್ಮದೇ ಹೆಸರನ್ನು ಬರೆದರೆ ಏನು ಮಾಡುತ್ತೀರಿ? ಬಸವರಾಜ ಬೊಮ್ಮಾಯಿ ಹೆಸರು ಬರೆದರೆ ಏನು ಮಾಡಲು ಆಗುತ್ತದೆ? ಈ ರೀತಿ ಹೆಸರು ಬಂದಾಗ, ಕೇಸ್‌ ಆಗಿದೆ, ಎದುರಿಸುತ್ತೇನೆ. ನನ್ನನ್ನು ಸಿಲುಕಿಸಲು ಕಾಣದ ಕೈಗಳು ಕೆಲಸ ಮಾಡಿವೆ ಎಂದು ನಾನು ಭಾವಿಸುವುದಿಲ್ಲ ಎಂದರು.

ಇದನ್ನೂ ಓದಿ | Suicide Case | ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್‌

Exit mobile version