Site icon Vistara News

Assembly Session: ಸಂವಿಧಾನ ಪ್ರಸ್ತಾವನೆಯನ್ನೇ ತಪ್ಪಾಗಿ ನೀಡಿದ ಸಚಿವಾಲಯ; ಸ್ಪೀಕರ್‌ ನಡೆಗೆ ಬಸನಗೌಡ ಯತ್ನಾಳ್‌ ಆಕ್ಷೇಪ

Indian Constitution preamble reading in assembly session

ಬೆಂಗಳೂರು: ಕರ್ನಾಟಕದ ಶಾಲೆ ಹಾಗೂ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು (ಪೀಠಿಕೆ) ಓದುವುದನ್ನು ಕಡ್ಡಾಯ ಮಾಡುವಂತೆ ಈಗಾಗಲೆ ಆದೇಶಿಸಲು ಮುಂದಾಗಿರುವ ಸರ್ಕಾರ ಈ ಕಾರ್ಯವನ್ನು ಸದನದಿಂದಲೇ (Assembly Session) ಆರಂಭಿಸಿದೆ, ಆದರೆ ಮೊದಲ ದಿನವೇ ಎಡವಟ್ಟು ಮಾಡಿಕೊಂಡಿದೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌ ಅವರು ಸಂಪ್ರದಾಯದಂತೆ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು. ಅವರು ತೆರಳಿದ ನಂತರ ಸದನವನ್ನು ಆರಂಭಿಸಲಾಯಿತು. ಎಂದಿನಂತೆ ಆರಂಭದಲ್ಲಿ ವಂದೇಮಾತರಂ ಪ್ರಸಾರ ಮಾಡಲಾಯಿತು. ನಂತರ ಸ್ಪೀಕರ್‌ ಯು.ಟಿ. ಖಾದರ್‌ ಅವರು, ಸಂವಿಧಾನದ ಪ್ರಸ್ತಾವನೆಯನ್ನು ಓದಲು ಆರಂಭಿಸಿದರು. ಎಲ್ಲ ಸದಸ್ಯರೂ ಅದನ್ನು ಪುನರುಚ್ಛರಿಸಿದರು.

ಸಂವಿಧಾನದ ಪ್ರಸ್ತಾವನೆ
ಭಾರತದ ಜನಗಳಾದ ನಾವು ಭಾರತವನ್ನು [ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮ ಗಣರಾಜ್ಯವಾಗಿ] ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ; ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿಗೌರವವನ್ನು, [ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು] ಸುನಿಶ್ಚಿತಗೊಳಿಸಿ, ಅವರಲ್ಲಿ ಭ್ರಾತೃತ್ವಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ; ನಮ್ಮ ಸಂವಿಧಾನ ಸಭೆಯಲ್ಲಿ, 1949ನೆಯ ಇಸವಿ ನವೆಂಬರ್‌ ತಿಂಗಳ ಇಪ್ಪಾತಾರನೇ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ” ಎಂದು ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು. ಅದನ್ನು ಸದಸ್ಯರು ಪುನರುಚ್ಛರಿಸಿದರು.

ಕೂಡಲೇ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸದನದಲ್ಲಿ ಸ್ಪೀಕರ್‌ ಓದಿದ್ದೇ ಬೇರೆ, ನಮಗೆ ಕೊಟ್ಟ ಪ್ರತಿಯೇ ಬೇರೆ ಎಂದು ಆಕ್ಷೇಪಿಸಿದರು. ಈ ರೀತಿ ನಿಮಗೆ ತಿಳಿದಿದ್ದನ್ನು ಹೇಳಲು ಅವಕಾಶವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು. ಇದಕ್ಕೆ ಅನೇ ಸದಸ್ಯರು ದನಿಗೂಡಿಸಿದರು. ಸ್ಪೀಕರ್‌ ಓದಿದ್ದು ಸರಿಯಾಗಿದೆಯಾದಾದರೂ ಸದಸ್ಯರಿಗೆ ಕೊಟ್ಟಿರುವ ಪ್ರತಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ ಎಂದರು. ಆದರೆ, ಸಂವಿಧಾನದ ಪ್ರಸ್ತಾವನೆಯನ್ನು ಸ್ವಲ್ಪ ವಿವರಿಸಿ ಹೇಳಲಾಗಿದೆ ಅಷ್ಟೆ ಎಂದು ಸಚಿವ ಎಚ್‌.ಸಿ. ಮಹದೇವಪ್ಪ ಸೇರಿ ಅನೇಕರು ಸಮರ್ಥನೆಗೆ ಮುಂದಾದರು. ಸಿದ್ದರಾಮಯ್ಯ ಸಹ ಎದ್ದುನಿಂತು, ಅಕ್ಷರ ಬೇರೆಬೇರೆ ಇದ್ದರೂ ಅರ್ಥ ಒಂದೇ ಇದೆ ಎಂದರು. ಆದರೆ ಹೀಗೆ ಮಾಡಬಾರದು, ಇದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಯತ್ನಾಳ್‌ ಆಕ್ಷೇಪಿಸಿದರು. ಬಿಜೆಪಿಯ ಆರಗ ಜ್ಞಾನೇಂದ್ರ ಸಹ ಇದಕ್ಕೆ ದನಿಗೂಡಿಸಿದರು.

ಇದನ್ನೂ ಓದಿ: 10ನೇ ತರಗತಿ ಪುಸ್ತಕದಲ್ಲಿ ಪ್ರಕಟವಾದ ಸಂವಿಧಾನದ ಪೀಠಿಕೆಯಲ್ಲಿ ಪ್ರಮಾದ; ಆ ಎರಡು ಪ್ರಮುಖ ಶಬ್ದಗಳೇ ಇಲ್ಲ!

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಅಧ್ಯಯನ ನಡೆಸಿ ಪ್ರತಿ ಪದವನ್ನೂ ಸೇರಿಸಿದ್ದಾರೆ. ಅದನ್ನು ಹೀಗೆ ಬದಲಾವಣೆ ಮಾಡುವಂತಿಲ್ಲ. ಮೂಲ ಸಂವಿಧಾನಕ್ಕೆ ಒಂದಕ್ಷರವೂ ಬದಲಾವಣೆ ಆಗದಂತೆ ನೀವು ಮತ್ತೆ ಮಂಗಳವಾರ ಹೇಳಬೇಕು ಎಂದು ಯತ್ನಾಳ್‌ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಎಲ್ಲರೂ ಸಲಹೆ ಕೊಟ್ಟಿರುವುದು ಸ್ವಾಗತಾರ್ಹ. ಸಮಗ್ರ ಅರ್ಥ ಬರುವ ರೀತಿಯಲ್ಲಿ ಇಲ್ಲಿ ನೀಡಲಾಗಿದೆ.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕುರಿತು ಗೌರವ ಹೊಂದಿರುವುದು ಒಳ್ಳೆಯದು. ಇಲ್ಲಿನ ಎಲ್ಲ ಶಾಸಕರೂ ಅಂಬೇಡ್ಕರ್‌ ಅವರ ಮಾರ್ಗದಲ್ಲೇ ನಡೆದು ಎಲ್ಲ ಜನರ ಪ್ರೀತಿಪಾತ್ರರಾಗಬೇಕು ಎಂದು ಹೇಳುವ ಮೂಲಕ ಸ್ಪೀಕರ್‌ ಯು.ಟಿ. ಖಾದರ್‌ ಅವರು ಚರ್ಚೆಗೆ ತೆರೆ ಎಳೆದರು.

Exit mobile version