ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಜನಜೀವನ ತೊಂದರೆಗೊಳಗಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸ್ವಲ್ಪ ತೊಂದರೆಯಾಗಿದೆ ಎನ್ನುವುದನ್ನು ಬಿಟ್ಟರೆ ಉಳಿದೆಡೆ ಜನಜೀವನ ಯಥಾಸ್ಥಿತಿಯಲ್ಲಿದೆ ಎಂದಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಹೆದ್ದಾರಿ ಸಚಿವಾಲಯದ ಕಾರ್ಯಕ್ರಮದ ನಂತರ ಸುದ್ದಿಗಾರರ ಪ್ರಶ್ನೆಗೆ ತೇಜಸ್ವೀ ಸೂರ್ಯ ಪ್ರತಿಕ್ರಿಯಿಸಿದರು.
ಇತ್ತೀಚೆಗೆ ತೇಜಸ್ವೀ ಸೂರ್ಯ ಅವರು ಹೋಟೆಲೊಂದರಲ್ಲಿ ದೋಸೆ ತಿನ್ನುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದ ಕಾಂಗ್ರೆಸ್, ಬೆಂಗಳೂರಿಗರು ಮಳೆಯಲ್ಲಿ ಮುಳುಗಿದ್ದರೆ ಸಂಸದರು ದೋಸೆ ಸವಿಯುತ್ತಿದ್ದಾರೆ ಎಂದು ಟೀಕಿಸಿತ್ತು. ಈ ಕುರಿತು ತೇಜಸ್ವೀ ಸೂರ್ಯ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಬೆಂಗ್ಳೂರು ಮಳೆಯಲ್ಲಿ ಮುಳುಗಿದ್ರೆ Tempt ಆಗಿ ದೋಸೆ ತಿಂದ ತೇಜಸ್ವಿ ಸೂರ್ಯ: ಕಾಂಗ್ರೆಸ್ ಟೀಕೆ
ಕಾಂಗ್ರೆಸ್‌ನವರಿಗೆ ಮಾಡೋದಕ್ಕೆ ಕೆಲಸ ಇಲ್ಲ. ಕಾಂಗ್ರೆಸ್‌ನವರು ಅನವಶ್ಯಕವಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆ ಆಗಿದೆ. ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದಿದ್ದಾರೆ.
ದೋಸೆ ಸವಿದಿದ್ದರ ಕುರಿತು ಪ್ರತಿಕ್ರಿಯಿಸಿ, ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ಮಾಡುವುದು ನನ್ನ ಕರ್ತವ್ಯ ನಿರ್ವಹಣೆಯ ಭಾಗ. ನಮ್ಮ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಬಸ್ ಉದ್ಘಾಟನೆ ಇತ್ತು ಎಂದರೆ ಅದಕ್ಕೂ ಹೋಗುತ್ತೇನೆ, ದೋಸೆ ಅಂಗಡಿ ಉದ್ಘಾಟನೆಗೆ ಕರೆಯುತ್ತಾರೆಂದರೆ ಅದಕ್ಕೂ ಹೋಗುತ್ತೇನೆ, ಗಣಪತಿ ಪ್ರತಿಷ್ಠಾಪಿಸಿದ್ದರೆ ಅಲ್ಲಿಗೂ ಹೋಗುತ್ತೇನೆ.
ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್‌ನವರಿಗೆ ಮಾಡುವುದಕ್ಕೆ ಕೆಲಸ ಇಲ್ಲದೆ ಬೆಂಗಳೂರಿಗೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಇದನ್ನು ಮಾಡುತ್ತಿದ್ದಾರೆ. ಟ್ರೋಲ್‌ಗಳಿಗೆ, ಕಾಂಗ್ರೆಸ್ ಪಾರ್ಟಿಗೆ ಉತ್ತರ ಕೊಡುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | Bengaluru Rain | ಮಳೆ ನಿಂತರೂ ನಿಲ್ಲದ ರಗಳೆ; ಲಗೇಜ್ ಹಿಡಿದು ವಾಪಸ್ ಆದವರಿಗೆ ನಿರಾಸೆ