ಬೆಂಗಳೂರು: ೨೦೨೩ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ, ಸಮುದಾಯಗಳ ಸಮಾವೇಶದ ಮೂಲಕ ವೋಟ್ ಬ್ಯಾಂಕ್ ಕ್ರಿಯೇಟ್ ಮಾಡಿಕೊಳ್ಳುವ, ಗಟ್ಟಿ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರದ ನಾಯಕರ ಸೂಚನೆ ಮೇರೆಗೆ ಹಲವು ಸಮಾವೇಶಗಳು ನಡೆಯಲಿದ್ದು, ಇದರ ಮೊದಲ ಹಂತವಾಗಿ ಅಕ್ಟೋಬರ್ ೧೫ರ ಬಳಿಕ ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸಲಾಗುತ್ತಿದೆ.
ಈ ಸಮಾವೇಶವನ್ನು ಯಶಸ್ವಿಗೊಳಿಸುವುದಕ್ಕಾಗಿ ರಾಜ್ಯ ಬಿಜೆಪಿಯ ಒಬಿಸಿ ನಾಯಕ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ ೨೭ರಿಂದಲೇ ಒಬಿಸಿ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದಾರೆ. ಅಕ್ಟೋಬರ್ ೧೫ರ ಬಳಿಕ ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಅಕ್ಟೋಬರ್ ಮೊದಲ ವಾರದವರೆಗೂ ರಾಜ್ಯ ಪ್ರವಾಸ ನಡೆಯಲಿದೆ.
ಹಿಂದುಳಿದ ವರ್ಗಗಳ ನಾಯಕರಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ನೆಲ ನರೇಂದ್ರ ಬಾಬು ಅವರಿಂದ ರಾಜ್ಯ ಪ್ರವಾಸದ ಸಾರಥ್ಯ ವಹಿಸಲಿದ್ದಾರೆ. ಹಿರಿಯ ಮುಖಂಡರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದ್ದಾರೆ.
ಯಾವ ತಂಡದಿಂದ ಎಲ್ಲೆಲ್ಲಿ ಪೂರ್ವಭಾವಿ ಸಭೆ?
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದ ಮೊದಲನೇ ತಂಡವು ಸೆ.27ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ, 30ರಂದು ಚಾಮರಾಜನಗರ, ಮೈಸೂರು, ನಗರ, ಗ್ರಾಮಾಂತರ, ಅಕ್ಟೋಬರ್ 1ರಂದು ಮಂಡ್ಯ, ಹಾಸನ ಜಿಲ್ಲೆಗಳಲ್ಲಿ, ಅ.3ರಂದು ಬೀದರ್ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಿದೆ.
ಎರಡನೇ ತಂಡದ ನೇತೃತ್ವವನ್ನು ಇಂಧನ ಸಚಿವ ಸುನಿಲ್ ಕುಮಾರ್ ಸೆ.27ರಂದು ಮಂಗಳೂರು, ಉಡುಪಿ, ಅಕ್ಟೋಬರ್ 3ರಂದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಲಿದೆ.
3ನೇ ತಂಡವು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವ ಸೆ. 28ರಂದು ಕೋಲಾರ, ಚಿಕ್ಕಬಳ್ಳಾಪುರ, ಸೆ.29ರಂದು ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಗಳಿಗೆ ಸಂಬಂಧಿಸಿದ ಪೂರ್ವಭಾವಿ ಸಭೆಗಳನ್ನು ನಡೆಸಲಿದೆ.
ಸಚಿವ ಭೈರತಿ ಬಸವರಾಜ್ ಅವರ ನೇತೃತ್ವದ ನಾಲ್ಕನೇ ತಂಡ ಅಕ್ಟೋಬರ್ 1ರಂದು ಚಿತ್ರದುರ್ಗ, ದಾವಣಗೆರೆ, ಅ.2ರಂದು ಹಾವೇರಿ, ಹುಬ್ಬಳ್ಳಿ- ಧಾರವಾಡ, ಅ.3ರಂದು ತುಮಕೂರು- ಮಧುಗಿರಿ ಸಂಘಟನಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ಏರ್ಪಡಿಸಲಿದೆ.
ಸಚಿವ ಆನಂದ್ ಸಿಂಗ್ ಅವರ ನೇತೃತ್ವದ 5ನೇ ತಂಡವು ಅಕ್ಟೋಬರ್ 1ರಂದು ವಿಜಯನಗರ, ಬಳ್ಳಾರಿ, ಅ.3ರಂದು ಬೆಳಗಾವಿ ಮತ್ತು ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಿದೆ.
ಜಿಲ್ಲಾ ಸಮಿತಿ, ಜಿಲ್ಲೆಯ ಮಂಡಲ ಪದಾಧಿಕಾರಿಗಳು, ಜಿಲ್ಲೆ ಮತ್ತು ಮಂಡಲ ಸಂಯೋಜಕರು, ಹಿಂದುಳಿದ ವರ್ಗಗಳ ಶಾಸಕರು, ಮಾಜಿ ಶಾಸಕರು, ಜಿಪಂ, ತಾಪಂ ಸದಸ್ಯರು, ಎಪಿಎಂಸಿ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳು ಹಾಗೂ ಹಿಂದುಳಿದ ವರ್ಗಗಳ ನಿಗಮ, ಮಂಡಳಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸುವಂತೆ ನೆ.ಲ.ನರೇಂದ್ರಬಾಬು ಸೂಚನೆ ನೀಡಿದ್ದಾರೆ.