ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಸಿಗದಿದ್ದರೂ, ರಾಜಕೀಯದಲ್ಲಿ ಸಕ್ರಯವಾಗಿರದಿದ್ದರೂ ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಟಿ ರಮ್ಯಾ (Actess Ramya) ಹೆಸರಿತ್ತು. ಇದರ ಬೆನ್ನಲ್ಲೇ, ಕಾಂಗ್ರೆಸ್ ಟಿಕೆಟ್ ಆಫರ್ ಹಾಗೂ ಬಿಜೆಪಿ ತಮ್ಮನ್ನು ಸಂಪರ್ಕಿಸಿದ ಕುರಿತು ಸೇರಿ ಹಲವು ವಿಷಯಗಳನ್ನು ನಟಿ ರಮ್ಯಾ ಬಹಿರಂಗಪಡಿಸಿದ್ದಾರೆ. “ನನ್ನನ್ನು ಬಿಜೆಪಿ ಸಂಪರ್ಕಿಸಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ದಿಸೆಯಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳ ಆಫರ್ ನೀಡಿತ್ತು” ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ರಮ್ಯಾ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇದೇ ವೇಳೆ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವ ಹಾಗೂ ಈಗಲೂ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಬನ್ನಿ ಎಂಬ ಬೇಡಿಕೆ ಕುರಿತು ಅವರು ಮಾತನಾಡಿದರು. “ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ನನ್ನ ಮಧ್ಯೆ ಬಿಕ್ಕಟ್ಟು ಇದೆ ಎಂಬ ವರದಿಗಳು ಕೇಳಿಬರುತ್ತಿದ್ದಾಗ ಬಿಜೆಪಿಯ ಮುಖಂಡರು ನನಗೆ ಕರೆ ಮಾಡಿದ್ದರು. ನಿಮ್ಮನ್ನು ಕೂಡಲೇ ಸಚಿವೆಯನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು” ಎಂಬುದನ್ನು ಬಹಿರಂಗಪಡಿಸಿದರು.
ಕಾಂಗ್ರೆಸ್ ಕುರಿತು ಮಾತನಾಡಿದ ಅವರು, “ನಾನು ಯಾವಾಗಲೂ ಕಾಂಗ್ರೆಸ್‌ಅನ್ನು ಬೆಂಬಲಿಸುತ್ತಲೇ ಬಂದಿದ್ದೇನೆ. ಇದೇ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಹೆಸರುಗಳನ್ನು ನೀಡಿ, ನೀವು ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಿ ಎಂದು ಕಾಂಗ್ರೆಸ್ ನಾಯಕರು ಆಫರ್ ನೀಡಿದರು. ಆದರೆ, ಸಕ್ರಿಯ ರಾಜಕಾರಣದಿಂದ ನಾನು ದೂರವೇ ಇದ್ದೇನೆ. ಅದರ ಬಗ್ಗೆ ಈಗ ಹೆಚ್ಚಿನ ಆಸಕ್ತಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಎಚ್‌ಡಿಕೆ ಅವರಿಂದಲೂ ರಮ್ಯಾಗೆ ಆಹ್ವಾನ?
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಸಂಪರ್ಕಿಸಿರುವ ಕುರಿತು ರಮ್ಯಾ ಮಾತನಾಡಿದ್ದಾರೆ. “ಸಲೂನ್ ಒಂದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಮಾತನಾಡಿಸಿದ್ದರು. ಏನು ನೀವು ಸಕ್ರಿಯ ರಾಜಕಾರಣದಿಂದ ದೂರವಾಗಿದ್ದೀರಿ ಎಂದು ಕೇಳಿದ್ದರು” ಎಂಬುದಾಗಿ ರಮ್ಯಾ ಮಾಹಿತಿ ನೀಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಆಫರ್ ನೀಡಿದ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ.
ಸಂಕಷ್ಟದ ಸಮಯದಲ್ಲಿ ರಾಹುಲ್ ಗಾಂಧಿ ನೆರವು: ರಮ್ಯಾ
ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಂಬ ಸಹಾಯ ಮಾಡಿದರು ಎಂದು ರಮ್ಯಾ ಹೇಳಿದರು. “2013ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ವೇಳೆಯೇ ನನ್ನ ತಂದೆ ತೀರಿಕೊಂಡರು. ಇದರಿಂದ ನನ್ನ ಆತ್ಮವಿಶ್ವಾಸ ಕುಂಠಿತವಾಯಿತು. ನಾನು ಚುನಾವಣೆಗೆ ಸ್ಪರ್ಧಿಸಬಾರದು ಎಂದುಕೊಂಡಿದ್ದೆ. ಆದರೂ, ನಾನು ಸ್ಪರ್ಧಿಸಿದೆ. ಆದರೆ, ನಂತರದ ಚುನಾವಣೆಯಲ್ಲಿ ನಾನು ಸೋಲನುಭವಿಸಿದೆ. ಇದರಿಂದ ನಾನು ಜೀವನದ ಮೇಲೆಯೇ ವಿಶ್ವಾಸ ಕಳೆದುಕೊಂಡೆ. ಆಗ ರಾಹುಲ್ ಗಾಂಧಿ ಅವರು ನನ್ನ ಜತೆ ನಿಂತರು. ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು. ಅವರಿಂದಾಗಿಯೇ ನನ್ನ ಜೀವನದಲ್ಲಿ ಮತ್ತೆ ಉತ್ಸಾಹ ಕಂಡುಕೊಂಡೆ” ಎಂದು ತಿಳಿಸಿದರು.
ಬಾಲಿವುಡ್, ದಕ್ಷಿಣ ಭಾರತ ಸಿನಿಮಾ ಬಗ್ಗೆ ಹೇಳಿದ್ದೇನು?
ದಕ್ಷಿಣ ಭಾರತದ ಸಿನಿಮಾಗಳು ವರ್ಸಸ್ ಬಾಲಿವುಡ್ ಚರ್ಚೆಯ ಕುರಿತು ಕೂಡ ರಮ್ಯಾ ಮಾತನಾಡಿದರು. “ಮೊದಲೆಲ್ಲ ಭಾರತದ ಸಿನಿಮಾಗಳು ಎಂದರೆ, ಬಾಲಿವುಡ್ ಸಿನಿಮಾಗಳು ಎಂಬ ಮಾತಿತ್ತು. ಆದರೆ, ಈಗ ಬಾಲಿವುಡ್ ಜತೆಗೆ ದಕ್ಷಿಣ ಭಾರತದ ಸಿನಿಮಾಗಳನ್ನೂ ಗುರುತಿಸಲಾಗುತ್ತಿದೆ. ಇದು ಸಂತಸದ ವಿಚಾರ” ಎಂದರು. ಹಾಗೆಯೇ, “ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರು, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.