Site icon Vistara News

Jagadish Shettar : ಶೆಟ್ಟರ್‌ ಘರ್‌ ವಾಪ್ಸಿಗೆ ಬಿಜೆಪಿ ಶತಪ್ರಯತ್ನ; ಬಿಟ್ಟು ಹೋಗಲ್ಲ ಎಂದ ಸಿದ್ದರಾಮಯ್ಯ

Jagadish Shettar Siddaramaiah

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Parliament Elections 2024) ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಶತ ಪ್ರಯತ್ನದಲ್ಲಿರುವ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟ (BJP-JDS Alliance) ಈಗ ಕಾಂಗ್ರೆಸ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Former CM Jagadish Shettar) ಅವರನ್ನು ಹೇಗಾದರೂ ಮಾಡಿ ಘರ್‌ ವಾಪ್ಸಿ (Shettar Ghar Wapsi) ಮಾಡಬೇಕು ಎಂದು ಪ್ರಯತ್ನಿಸುತ್ತಿದೆ. ಈಗಾಗಲೇ ಬಿಜೆಪಿ ಜಗದೀಶ್‌ ಶೆಟ್ಟರ್‌ ಅವರನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಮಾತ್ರ ಯಾವ ಕಾರಣಕ್ಕೂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.

ಬಿಜೆಪಿಯು ಕಾಂಗ್ರೆಸ್‌ಗೆ ಹೋಗಿರುವ ಇಬ್ಬರು ಪ್ರಮುಖ ನಾಯಕರಾದ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರನ್ನು ಮರಳಿ ಕರೆ ತರುವ ಪ್ರಯತ್ನ ನಡೆಸುತ್ತಿದೆ. ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಪಕ್ಷಕ್ಕೆ ಇದು ಅನಿವಾರ್ಯವಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಇಬ್ಬರು ನಾಯಕರಿಲ್ಲದೆ ಗೆಲುವು ಕಷ್ಟ ಎಂಬ ವಾತಾವರಣ ಇದೆ. ಜತೆಗೆ ಅವರು ಬಂದರೆ ಗೆಲುವು ಸಾಧ್ಯ ಎಂಬ ಮಾತನ್ನು ‌ ಜಿಲ್ಲಾ ಘಟಕಗಳು ಹೇಳುತ್ತಿವೆ. ಶೆಟ್ಟರ್‌ ಅವರಿಗೆ ವೈಯಕ್ತಿಕ ವರ್ಚಸ್ಸು ಅಷ್ಟೇನೂ ಇಲ್ಲದಿದ್ದರೂ ಅವರಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಬಿಜೆಪಿ ಬಿಟ್ಟು ಹೋಗಿರುವ ಜನಾರ್ದನ ರೆಡ್ಡಿ ಅವರನ್ನೂ ಮರಳಿ ಕರೆತರುವ ಚಿಂತನೆ ಇದೆ.

ಘರ್‌ ವಾಪ್ಸಿ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದ ಆರ್‌ ಅಶೋಕ್‌

ಜಗದೀಶ್‌ ಶೆಟ್ಟರ್‌ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿರುವಂತೆಯೇ ರಾಜ್ಯದ ಬಿಜೆಪಿ ನಾಯಕರು ಕೂಡಾ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ʻʻಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ. ಪಾಪ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿ ಹೋಗಿದ್ದಾರೆ. ಸರ್ಕಾರ ಬಂದು ಎಂಟು ತಿಂಗಳು ಆದರೂ, ಅವರಿಗೆ ಒಂದು ಅಧಿಕಾರ ಅಥವಾ ಜವಾಬ್ದಾರಿ ಕೊಟ್ಟಿಲ್ಲ. ಇದರಿಂದ ಅವರು ಕಾಂಗ್ರೆಸ್ ನ ವೇದಿಕೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ನಮ್ಮಲ್ಲಿ ಇದ್ದಾಗ ಇಬ್ಬರೂ ವೇದಿಕೆಯ ಮುಂಭಾಗದಲ್ಲಿ ಕಾಣಿಸುತ್ತಿದ್ದರು. ಅವರು ಕೋರ್ ಕಮಿಟಿ ಸದಸ್ಯರು ಬೇರೆ ಆಗಿದ್ದರು. ಈಗ ಅವರು ಕಾಂಗ್ರೆಸ್‌ನಲ್ಲಿರುವ ಪರಿಸ್ಥಿತಿ ನೋಡಿ ನನಗೆ ಬೇಸರ ಅನಿಸುತ್ತಿದೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯಿತು ಅಂತ ಯೋಚಿಸಲಿʼʼ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್‌. ಅಶೋಕ್‌ ಹೇಳಿದ್ದಾರೆ. ಜಗದೀಶ್‌ ಅವರು ಮತ್ತೆ ಬಿಜೆಪಿಗೆ‌ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ಆರ್ ಅಶೋಕ್ ಅವರು ಆ ಕಡೆಗೆ ಪ್ರಯತ್ನ ನಡೆಯುತ್ತಿರುವ ಮುನ್ಸೂಚನೆ ನೀಡಿದರು.

ಶೆಟ್ಟರ್‌ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದ ಸಿದ್ದರಾಮಯ್ಯ

ಕುಶಾಲ ನಗರದ ಬೈಲುಕುಪ್ಪೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಹೇಳಿದರು. ಅವರೇ ನಾನು ಪುನಃ ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಪದೇಪದೆ ಉದ್ದೇಶಪೂರ್ವಕವಾಗಿ ಬಿಜೆಪಿ ಈ ಮಾತನ್ನು ಹರಿಯಬಿಡುತ್ತಿದೆ. ಅವರು ಯಾವುದೆ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: CM Siddaramaiah : ರಾಮನಿಂದ ಸೀತೆಯನ್ನು ದೂರ ಮಾಡಿದ ಬಿಜೆಪಿ; ಮತ್ತೆ ಜೈ ಶ್ರೀರಾಮ್‌ ಎಂದ ಸಿದ್ದರಾಮಯ್ಯ

ಬಿಜೆಪಿ- ಜೆಡಿಎಸ್‌ನಲ್ಲಿ ನಾಯಕತ್ವದ ಕೊರತೆ ಎಂದ ಡಿ.ಕೆ. ಶಿವಕುಮಾರ್‌

ʻʻಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದಾರೆ. ಅವರನ್ನೇ ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯವರು ಸಂಪರ್ಕಿಸುತ್ತಿದ್ದಾರೆ ಅಂದರೆ ಏನರ್ಥ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ.
ಯಾಕೆ ನಿಮ್ಮಲ್ಲಿ ಲೀಡರ್‌ಗಲು ಇಲ್ವ ?ʼʼ ಎಂದು ಪ್ರಶ್ನೆ ಮಾಡಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌.

ʻʻಒಳ್ಳೆಯ ಕ್ಯಾಂಡಿಡೇಟ್‌ಗಳು ಇದ್ದರೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳಿʼʼ ಎಂದು ಬಿಜೆಪಿಗೆ ಸವಾಲು ಹಾಕಿರುವ ಅವರು, ʻʻಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದವರು ಯಾರು? ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾರು? ಇದೆಲ್ಲವನ್ನೂ ರಾಜ್ಯ ರಾಜಕಾರಣ ನೋಡಿದೆ. ಈಗ ಈಗ ಅವರಿಬ್ಬರೂ ತಬ್ಬಿಕೊಳ್ಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ತೆಗೆದವರನ್ನೇ ತಬ್ಬಿಕೊಳ್ಳುತ್ತಿದ್ದಾರೆ. ಅಂದರೆ ಎರಡೂ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ ಅಂತ ಅರ್ಥ.ʼʼ ಎಂದು ಬೈಲುಕುಪ್ಪೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version