ಬೆಂಗಳೂರು: ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯುವ ಮಹಾ ಸಮಾವೇಶಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಅಂದೇ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ (Road Show) ಒಂದರಲ್ಲಿ ಭಾಗವಹಿಸಲಿದ್ದಾರೆ. ಈ ನಡುವೆ, ಜಾತ್ಯತೀತ ಜನತಾದಳ ಬಹು ನಿರೀಕ್ಷೆಯಿಂದ ಮಾ. 26ಕ್ಕೆ ಫಿಕ್ಸ್ ಮಾಡಿದ ಮಾಜಿ ಪ್ರಧಾನಿ ದೇವೇಗೌಡರ ರೋಡ್ ಶೋವನ್ನು ರದ್ದು ಮಾಡಿದೆ.
ಮೋದಿ ರೋಡ್ ಶೋ ಎಲ್ಲಿ?
ರಾಜ್ಯದ ನಾನಾ ಕಡೆಗಳಲ್ಲಿ ಸುತ್ತಾಡುತ್ತಿರುವ ನಾಲ್ಕು ವಿಜಯ ಸಂಕಲ್ಪ ರಥ ಯಾತ್ರೆಗಳು ಮಾರ್ಚ್ 25ರಂದು ದಾವಣಗೆರೆಯಲ್ಲಿ ಸಂಗಮಗೊಳ್ಳಲಿದ್ದು ಅಂದು ನಡೆಯುವ ಸಮಾವೇಶಕ್ಕಾಗಿ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಈ ನಡುವೆ ಅದೇ ದಿನವನ್ನು ಬಳಸಿಕೊಂಡು ಸಂಜೆ ಬೆಂಗಳೂರಿನಲ್ಲಿ ಮೂರು ಕಾರ್ಯಕ್ರಮಗಳನ್ನು ಆಯೋಜಿಸಲು ರಾಜ್ಯ ಬಿಜೆಪಿ ಪ್ಲ್ಯಾನ್ ಮಾಡಿದೆ. ಅದೇ ದಿನ ದೇವನಹಳ್ಳಿ ವೈದ್ಯಕೀಯ ಕಾಲೇಜು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಅದರ ಜತೆಗೆ ಕೆ.ಆರ್ ಪುರಂನಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೊ ರೈಲು ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ರೋಡ್ ಶೋ ಮಾಡಿಸುವ ಬಗ್ಗೆ ರಾಜ್ಯ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.
ಮೋದಿ ಅವರ ರೋಡ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದರಿಂದ ಅದರ ಲಾಭವನ್ನು ನಗದೀಕರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಮೋದಿ ಅವರು ಈ ಹಿಂದೆ ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಡ್ಯದಲ್ಲಿ ರೋಡ್ ಶೋ ನಡೆಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಬೆಂಗಳೂರಿನಲ್ಲೂ ಅದನ್ನು ನಡೆಸಿದರೆ ಅನುಕೂಲವಾಗಬಹುದು ಎನ್ನುವುದು ಬಿಜೆಪಿ ಪ್ಲ್ಯಾನ್. ಹೇಗಿದ್ದರೂ ಮೆಟ್ರೋ ಮತ್ತು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಮೋದಿ ಅವರು ಬರಲು ಒಪ್ಪಿದ್ದು, ಅದರ ಜತೆಗೆ ರೋಡ್ ಶೋ ಕೂಡಾ ನಡೆಸಲು ಪ್ಲ್ಯಾನ್ ಮಾಡಲಾಗಿದೆ.
ಇದೇ ತಿಂಗಳ 25ರಂದು ಮಹಾದೇವಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವೈಟ್‌ಫೀಲ್ಡ್ ನಿಂದ ಕೆ ಆರ್ ಪುರ ಮೆಟ್ರೋ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ ಮೋದಿ. ಅಲ್ಲೇ ಸುಮಾರು 1.5 ಕಿ.ಮೀವರೆಗೆ ಅಬ್ಬರ ರೋಡ್ ಶೋ ನಡೆಸುವ ಬಗ್ಗೆ ಚಿಂತನೆ ನಡೆದಿದೆ.
ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೆ ಮೋದಿ ರೋಡ್ ಶೋ ನಡೆಸುವ ಸಾಧ್ಯತೆಗಳಿವೆ. ವೈಟ್‌ಫೀಲ್ಡ್‌ನಲ್ಲಿ ಮೆಟ್ರೋ ಸ್ಟೇಷನ್ ಉದ್ಘಾಟಿಸಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ ವರೆಗೂ ಮೆಟ್ರೋದಲ್ಲೇ ಸಂಚರಿಸಲಿದ್ದಾರೆ.
ಮಾ. 26ಕ್ಕೆ ನಿಗದಿಯಾಗಿದ್ದ ದೇವೇಗೌಡರ ರೋಡ್ ಶೋ ರದ್ದು
ಈ ನಡುವೆ, ನರೇಂದ್ರ ಮೋದಿ ಅವರ ರೋಡ್ ಶೋಗೆ ಠಕ್ಕರ್ ನೀಡಲು ಮುಂದಾಗಿದ್ದ ಜೆಡಿಎಸ್ ಮಾರ್ಚ್ 26ರಂದು ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿನವರೆಗೆ ನಡೆಸಲು ಆಯೋಜಿಸಿದ್ದ ರೋಡ್ ಶೋವನ್ನು ರದ್ದು ಮಾಡಲು ಮುಂದಾಗಿದೆ.
ಹಿರಿಯ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ರೋಡ್ ಶೋ ಕುರಿತಂತೆ ಸಭೆಯೊಂದನ್ನು ನಡೆಸಲಾಯಿತು. ಈ ಸಭೆಯಲ್ಲಿ ನಿಗದಿತ ರೋಡ್ ಶೋವನ್ನು ರದ್ದು ಮಾಡಲು ನಿರ್ಧರಿಸಲಾಯಿತು.
ದೇವೆಗೌಡರ ಆರೋಗ್ಯದ ದೃಷ್ಟಿಯಿಂದ ರೋಡ್ ಶೋ ರದ್ದು ಮಾಡಲಾಗುತ್ತಿದೆ. ಈ ರೀತಿಯ ಶೋದಲ್ಲಿ ಭಾಗವಹಿಸುವುದು ಬೇಡ ಎಂದು ದೇವೇಗೌಡರಿಗೆ ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ, ಪಂಚರತ್ನ ರಥಯಾತ್ರೆ ಸಮಾವೇಶವನ್ನು ಮೈಸೂರಿನಲ್ಲಿ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಿಸಲಾಗಿದೆ. ಹಳೇಮೈಸೂರು ಭಾಗದ 10 ಲಕ್ಷದ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಗಾಗಿ ಔತಣಕೂಟ ಏರ್ಪಡಿಸಲಿದ್ದಾರೆ ಜೋ ಬೈಡೆನ್; ಶೀಘ್ರದಲ್ಲೇ ಮೋದಿ ಅಮೆರಿಕ ಪ್ರವಾಸ?